ಅತ್ಯಂತ ತ್ವರಿತಗತಿಯಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಮನಿಟೆಕ್ ಕಂಪನಿ ಪೇಟಿಎಂ ದೇಶದ ಅತಿದೊಡ್ಡ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ಹೆಸರು ಮಾಡಿತ್ತು. 18,300 ಕೋಟಿ ರುಪಾಯಿಗಳನ್ನು ಐಪಿಒ ಮೂಲಕ ಸಂಗ್ರಹಿಸಿತ್ತು. ಆದರೆ, ಷೇರುಪೇಟೆಯಲ್ಲಿ ಲಿಸ್ಟಾದ ಮೊದಲ ದಿನವೇ ಶೇ.27ರಷ್ಟು ಭಾರಿ ಕುಸಿತ ದಾಖಲಿಸಿದ ಪೇಟಿಎಂ ಎರಡನೇ ದಿನವಾದ ಸೋಮವಾರವೂ ತೀವ್ರ ಕುಸಿತ ದಾಖಲಿಸಿದೆ. ದಿನದ ವಹಿವಾಟು ಮುಗಿದಾಗ ಶೇ.12ರಷ್ಟು ಕುಸಿತದೊಂದಿಗೆ 1,360 ರುಪಾಯಿಗೆ ಇಳಿದಿತ್ತು.
2,150 ರುಪಾಯಿಗಳಿಗೆ ಪ್ರತಿ ಷೇರು ಖರೀದಿಸಿದ ಹೂಡಿಕೆದಾರರು ಎರಡನೇ ದಿನದಲ್ಲಿ 790 ರುಪಾಯಿ ನಷ್ಟ ಅನುಭವಿಸಿದ್ದಾರೆ. ಭಾರತೀಯ ಷೇರುಪೇಟೆ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತದ ಐಪಿಒ ಎಂಬ ಹೆಗ್ಗಳಿಕೆ ಪಡೆದಿದ್ದ ಪೇಟಿಎಂ ಹೂಡಿಕೆದಾರರಿಗೆ ತ್ವರಿತಗತಿಯಲ್ಲಿ ಅತಿ ಹೆಚ್ಚು ನಷ್ಟವನ್ನುಂಟು ಮಾಡಿದ ಷೇರು ಎಂಬ ಕುಖ್ಯಾತಿಗೂ ಗುರಿಯಾಗಿದೆ.
2021ರಲ್ಲಿ ಇದುವರೆಗೂ 50ಕ್ಕೂ ಹೆಚ್ಚು ಕಂಪನಿಗಳ ಐಪಿಒಗಳು ಮಾರುಕಟ್ಟೆಗೆ ಬಂದಿದ್ದು, ಬಹುತೇಕ ಕಂಪನಿಗಳು ಹೂಡಿದಾರರಿಗೆ ಲಾಭ ಮಾಡಿಕೊಟ್ಟಿವೆ. ಆದರೆ, ಪೇಟಿಎಂ ದರ ನಿಗದಿ ಮಾಡುವಲ್ಲೇ ಎಡವಿದೆ. ಅತಿ ದುಬಾರಿ ದರವಾದ 2,150 ರುಪಾಯಿ ನಿಗದಿ ಮಾಡಿದ್ದೇ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ತೀವ್ರ ಕುಸಿತದಿಂದಾಗಿ ಸುಮಾರು 1.5 ಲಕ್ಷ ಕೋಟಿ ರುಪಾಯಿ ಇದ್ದ ಪೇಟಿಎಂ ಮಾರುಕಟ್ಟೆ ಬಂಡವಾಳ ಮೌಲ್ಯವು ದಿನದ ಅಂತ್ಯಕ್ಕೆ 88,139 ಕೋಟಿ ರುಪಾಯಿಗೆ ಕುಸಿದಿತ್ತು.
ಜಾಗತಿಕ ದಲ್ಲಾಳಿ ಸಂಸ್ಥೆಯಾಗಿರುವ ಮಾಕ್ವರೀ ರಿಸರ್ಚ್ ಪೇಟಿಎಂ ವಾಸ್ತವಿಕ ಮೌಲ್ಯವು 1,200 ರುಪಾಯಿಗಳಾಗಿದೆ ಎಂದು ಅಂದಾಜು ಮಾಡಿದೆ. ಅಂದರೆ, ಲಿಸ್ಟಾದ ದರಕ್ಕಿಂತ ಶೇ.44.2ರಷ್ಟು ಕಡಮೆದರವನ್ನು ವಾಸ್ತವಿಕ ದರ ಎಂದಿದೆ. ಪೇಟಿಎಂನಲ್ಲಿ ಆರಂಭಿಕ ಹೂಡಿಕೆದಾರರಿಗೆ ಪ್ರತಿ 10 ರುಪಾಯಿದಿಂದ 100, 200 ರುಪಾಯಿಗಳಿಗೆಲ್ಲ ಷೇರುಗಳು ಸಿಕ್ಕಿವೆ. ಆರಂಭಿಕ ಹೂಡಿಕೆದಾರರು ತ್ವರಿತ ಲಾಭಕ್ಕಾಗಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಾಮಾನ್ಯ ಹೂಡಿಕೆದಾರರು ಈ ಬೆಳವಣಿಗೆಯಿಂದ ನಷ್ಟ ಅನುಭವಿಸಿದ್ದಾರೆ. ದಿನದ ವಹಿವಾಟಿನಲ್ಲಿ 1,271 ರುಪಾಯಿಗೆ ಕುಸಿದಿದ್ದ ಪೇಟಿಎಂ ನಂತರ ಚೇತರಿಸಿಕೊಂಡು 1,360 ರುಪಾಯಿಗೆ ವಹಿವಾಟು ಅಂತ್ಯಗೊಳಿಸಿದೆ. ಮುಂದಿನ ವಹಿವಾಟಿನಲ್ಲಿ 1,200ರ ಆಜುಬಾಜಿಗೆ ಕುಸಿಯುವ ಅಂದಾಜು ಮಾರುಕಟ್ಟೆಯದ್ದಾಗಿದೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ವಿವಾದಾತ್ಮಕ ಮೂರು ಕೃಷಿಕಾನೂನುಗಳನ್ನು ರದ್ದು ಮಾಡುವುದಾಗಿ ಪ್ರಕಟಿಸಿದ್ದರ ಬಗ್ಗೆ ಷೇರುಪೇಟೆಯ ನಕಾರಾತ್ಮಕವಾಗಿ ಸ್ಪಂದಿಸಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,500 ಅಂಶಗಳಷ್ಟು ಕುಸಿತ ದಾಖಲಿಸಿತ್ತು. ದಿನದ ಅಂತ್ಯದ ವೇಳೆಗೆ ಕೊಂಚ ಚೇತರಿಕೆ ಕಂಡು1,170 ಅಂಶಗಳ ಕುಸಿತದೊಂದಿಗೆ 58,465 ಅಂಶಗಳಿಗೆ ವಹಿವಾಟು ಮುಗಿಸಿತು. ನಿಫ್ಟಿ ದಿನದ ವಿಹಿವಾಟಿನಲ್ಲಿ 480 ಅಂಶಗಳಷ್ಟು ಕುಸಿತ ದಾಖಲಿಸಿತ್ತು. ಕೊಂಚ ಚೇತರಿಸಿಕೊಂಡು ದಿನದ ಅಂತ್ಯಕ್ಕೆ 348 ಅಂಶಗಳ ಕುಸಿತದೊಂದಿಗೆ 17,417ಕ್ಕೆ ವಹಿವಾಟು ಮುಗಿಸಿದೆ.
ಅದಾನಿ ಸಮೂಹದ ಎಲ್ಲಾ ಕಂಪನಿಗಳು ಆರಂಭದಲ್ಲಿ ತೀವ್ರ ಕುಸಿತ ಕಂಡರೂ ನಂತರ ಚೇತರಿಸಿಕೊಂಡವು. ಆದರೆ, ಯಾವ ಕಂಪನಿಗಳೂ ಏರಿಕೆ ದಾಖಲಿಸಿಲ್ಲ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ದಿನದ ವಹಿವಾಟಿನಲ್ಲಿ ಶೇ.5ರಷ್ಟು ಕುಸಿತ ದಾಖಲಿಸಿತ್ತು. ಸೌದಿಯ ಅಮರಾನ್ ಕಂಪನಿಯೊಂದಿಗಿನ ಹೂಡಿಕೆ ಒಡಂಬಡಿಕೆ ರದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕುಸಿತ ದಾಖಲಾಗಿದೆ.
ಸತತ ಏರುಹಾದಿಯಲ್ಲಿ ಸಾಗಿದ್ದ ಮಾರುಕಟ್ಟೆ ಈಗ ಇಳಿಜಾರಿನತ್ತ ಹೊರಳಿದಂತಿದೆ. ಕರಡಿಗಳ ಹಿಡಿತ ಬಿಗಿಯಾಗುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ. ಸೆನ್ಸೆಕ್ಸ್ ಗರಿಷ್ಠ ಮಟ್ಟದಿಂದ ಇದುವರೆಗೆ ಸುಮಾರು 4,000 ಅಂಶಗಳಷ್ಟು ಕುಸಿತ ದಾಖಲಿಸಿದೆ. ಮತ್ತಷ್ಟು ಕುಸಿಯುವ ಸಾಧ್ಯತೆಯನ್ನು ಮಾರುಕಟ್ಟೆ ನೀರಿಕ್ಷಿಸಿದೆ.
ನವೆಂಬರ್ 26ರಿಂದ ಕರೆ ಮತ್ತು ಡೇಟಾ ದರವನ್ನು ಸೇ.25ರಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಏರ್ಟೆಲ್ ಕಂಪನಿಯ ಷೇರುದರ ಶೇ.4ರಷ್ಟು ಜಿಗಿದಿದೆ. ದರ ಏರಿಕೆಯಿಂದಾಗಿ ಕಂಪನಿಯ ಆದಾಯ ಹೆಚ್ಚಾಗುವುದನ್ನು ಮಾರುಕಟ್ಟೆ ನಿರೀಕ್ಷಿಸಿದ್ದು, ಏರ್ಟೆಲ್ ಕಂಪನಿ ಷೇರು ಮತ್ತಷ್ಟು ಜಿಗಿಯುವ ಸಾಧ್ಯತೆ ಇದೆ.