
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದು ಮಾಡಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಪ್ರಮುಖ ಆರೋಪಿ ಪವಿತ್ರಾ ಗೌಡ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ 6 ಆರೋಪಿಗಳಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಸಂಬಂಧ ವಾದ ಪ್ರತಿವಾದ ಆಲಿಸಿದ್ದ ಸುಪ್ರೀಂಕೋರ್ಟ್ ಆಗಸ್ಟ್ 14ರಂದು ಜಾಮೀನು ರದ್ದುಗೊಳಿಸಿತ್ತು. ನಂತರ 6 ಆರೋಪಿಗಳನ್ನ ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು. ಅಂದಿನಿಂದ 6 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ನಿನ್ನೆಯಷ್ಟೆ ಪ್ರಕರಣದ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಯಾಗಿತ್ತು. ಇದಾದ ಮರುದಿನವೇ ಕೊಲೆ ಕೇಸ್ ನ ಮೊದಲ ಆರೋಪಿ ಪವಿತ್ರ ಗೌಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ಮರು ಪರಿಶೀಲನಾ ಅರ್ಜಿಯು ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಪೀಠದಲ್ಲಿ ಗುರುವಾರ ವಿಚಾರಣೆಗೆ ಬರಲಿದೆ.

ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ಬಳಿಕ ಯಾವ ಆರೋಪಿಯೂ ಮರುಪರಿಶೀಲನೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಈಗ ಪವಿತ್ರ ಗೌಡ ಮರುಪರಿಶೀಲನೆ ಅರ್ಜಿ ಸಲ್ಲಿಸಿದ್ದು ಕುತೂಹಲ ಮೂಡಿಸಿದೆ.












