ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಶನಿವಾರ (ಸೆಪ್ಟೆಂಬರ್ 9) ಸುದ್ದಿಗಾರರೊಂದಿಗೆ ಮಾತನಾಡಿ, ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ನಾಯಕರು. ಅವರು ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟಿದವರು. ಅವರು ಏನೇ ತೀರ್ಮಾನ ಮಾಡಿದ್ದರೂ ಪಕ್ಷದ ಒಳತಿಗಾಗಿ ಮಾಡಿರುತ್ತಾರೆ. ರಾಜ್ಯದ ಜನ ಕಳೆದ 40 ವರ್ಷಗಳಿಂದಲೂ, ಪ್ರತಿ 5 ವರ್ಷಕ್ಕೊಮ್ಮೆ ರಾಜ್ಯ ಸರ್ಕಾರವನ್ನು ಬದಲಿಸುತ್ತಾ ಬಂದಿದ್ದಾರೆ. ಆದರೆ 2004ರ ಲೋಕಸಭಾ ಚುನಾವಣೆಯಿಂದ 2019ರವರೆಗೂ ನಿರಂತರವಾಗಿ ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಗುತ್ತದೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲೂ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ನಾನು ಎರಡು ಬಾರಿ ಸಂಸದನಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದೇನೆ. ನನ್ನ ಅಭಿವೃದ್ದಿ ಕಾರ್ಯಗಳನ್ನು ನೋಡಿರುವ ಮೈಸೂರು ಕೊಡಗಿನ ಜನರು ಮತ ನೀಡುತ್ತಾರೆ. ಜನರು ಹಾಗು ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲೂ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ತಲೆ ಕೆಡಿಸಕೊಳ್ಳುವುದಿಲ್ಲ ಎಂದರೆ ಸುಮ್ಮನಿರಿ. ಪದೇ ಪದೇ ಯಾಕೆ ಅದೇ ವಿಚಾರ ಮಾತನಾಡುತ್ತೀರಿ. ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ಬಸ್ಸಿನಲ್ಲಿ ಸ್ಟಿಕ್ಕರ್ ಅಂಟಿಸಿಕೊಂಡು ಇರಬೇಡಿ. ಯಾವಾಗಲೂ ಚುನಾವಣೆ ರಾಜಕೀಯ ಮಾಡಿಕೊಂಡು ಇರಬೇಡಿ ಎಂದು ತಿಳಿಸಿದರು.
ಮಹಿಷ ದಸರಾ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಸವಾಲು. ಅದೇಗೆ ಮಾಡ್ತಾರೋ ಮಾಡಲಿ ನೋಡ್ತೀನಿ. ಯಾವ ಸರ್ಕಾರ ಬಂದರೂ ಮಹಿಷ ದಸರಾ ಆಚರಣೆ ಮಾಡುವಂತಿಲ್ಲ. ಇದರಿಂದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಏನೇ ಕಷ್ಟ ಬಂದರೂ ಲಕ್ಷಾಂತರ ಮಂದಿ ಚಾಮುಂಡಿ ತಾಯಿಯ ಬಳಿಗೆ ಹೋಗುತ್ತಾರೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ತಾಯಿಯನ್ನು ತುಚ್ಛವಾಗಿ ಮಾತನಾಡುವವರಿಗೆ ಹೇಗೆ ಅವಕಾಶ ನೀಡುತ್ತಾರೆ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸೋಮಣ್ಣ ಹಾಗೂ ನಾವು ಸೇರಿ ಅನುಮತಿಗೆ ಅವಕಾಶ ಕೊಟ್ಟಿರಲಿಲ್ಲ. ಮೈಸೂರಿಗರು ಈ ವಿಚಾರದಲ್ಲಿ ಒಟ್ಟಾಗಬೇಕು. ನಿಮಗೆ ಏನೇ ಕಷ್ಟ-ಸುಖ ಬಂದರೂ ತಾಯಿ ಬಳಿ ಬೇಡಿಕೊಳ್ಳುತ್ತೀರಿ. ಅಂತಹ ತಾಯಿಗೆ ಅವಮಾನವಾಗುವಾಗ ನೀವೆಲ್ಲರೂ ಒಟ್ಟಿಗೆ ಹೋರಾಡಬೇಕು. ಮಹಿಷ ದಸರಾ ಆಚರಣೆ ಮಾಡುವ ನಾಲ್ಕು ಜನರ ಮನೆಗೆ ಹೋಗಿ ನೋಡಿ. ಅವರ ಹೆಂಡತಿಯರು ಸಹ ಚಾಮುಂಡಿ ತಾಯಿಯನ್ನು ಆರಾಧನೆ ಮಾಡುತ್ತಾರೆ. ಇವರಿಗೆ ಕನಿಷ್ಠ ಅವರ ಮನೆಯವರ ಭಾವನೆಗಳನ್ನು ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇಲ್ಲಿಗೆ ಬಂದು ಉದ್ದುದ್ದ ಮಾತನಾಡುತ್ತಾರೆ ಎಂದು ಟೀಕಿಸಿದರು.
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಸ್ಪೀಡ್ ಲಿಮಿಟ್ ಹೆಚ್ಚಳಕ್ಕೆ ಹೆದ್ದಾರಿ ಪ್ರಾಧಿಕಾರ ಚಿಂತನೆ ವಿಚಾರ ಮಾತನಾಡಿ, 120 ಕಿ. ಮೀ. ವೇಗದಲ್ಲಿ ಚಲಿಸಬಹುದಾದ ಹೈವೇ ಮಾಡಿದ್ದೇವೆ. ಮೊದಲು ಜನರನ್ನು ಶಿಸ್ತುಬದ್ಧಗೊಳಿಸೋಣ. ಈಗ ಟ್ರಕ್ ಲೈನ್ ಮಾಡುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಸಣ್ಣಪುಟ್ಟ ಕಾರುಗಳನ್ನು ಇಟ್ಟುಕೊಂಡು 120 ಕಿ ಮೀ ವೇಗದಲ್ಲಿ ಹೋದರೆ ಅಪಘಾತ ಆಗುತ್ತದೆ. ಲೈನ್ ಡಿಸಿಪ್ಲೀನ್ ಬರಲಿ, ಅಪಘಾತಗಳ ಸಂಖ್ಯೆ ಕಡಿಮೆಯಾಗಲಿ. ಅದೆಲ್ಲವನ್ನೂ ನೋಡಿಕೊಂಡು ವೇಗದ ಮಿತಿ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.