ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಗೆಲ್ಲದೆ ಇರುವ ಕಾರಣಕ್ಕೆ ಸೋಲಿನ ಪರಮರ್ಶೆನೆ ನಡೆಸಲು ಸತ್ಯಶೋಧನ ಸಮಿತಿ ರಚನೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಪಕ್ಷದ ಪದಾಧಿಕಾರಿಗಳ ಸಭೆ ನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು;
ಕರ್ನಾಟಕ ಲೋಕಸಭಾ ಚುನಾವಣೆಯ ಫಲಿತಾಂಶ ಸಮಾಧಾನಕರವಾಗಿಲ್ಲ. 15 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಕಲ್ಯಾಣ ಕರ್ನಾಟಕ ಹೊರತಾಗಿ ಮಿಕ್ಕ ಕಡೆ ಪಕ್ಷಕ್ಕೆ ಏಕೆ ಸೋಲಾಯಿತು ಎಂದು ಪರಾಮರ್ಶನೆಗೆ ಒಳಪಡಿಸಲು ಸತ್ಯಶೋಧನ ಸಮಿತಿ ರಚಿಸಲಾಗುವುದು. ಈ ಸಮಿತಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಅಧ್ಯಯನ ನಡೆಸಿ ವರದಿ ನೀಡುವುದು.
ಚುನಾವಣೆಯಲ್ಲಿ ಹೊಸಮುಖಗಳಿಗೆ ಹಾಗೂ ಆರು ಜನ ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಯಿತು. ಇದರಲ್ಲಿ ಇಬ್ಬರು ಗೆದ್ದಿದ್ದಾರೆ. ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಮಾತ್ರ ಗಳಿಸುತ್ತದೆ ಎಂದು ಮಾಧ್ಯಮಗಳ ಹೇಳಿದ್ದವು. ಆದರೆ ಎಲ್ಲವೂ ತಲೆಕೆಳಗಾಗಿ ನಾವು 9 ಸ್ಥಾನಗಳನ್ನು ಗೆದ್ದೆವು. ಈ ಫಲಿತಾಂಶ ನಮಗೆ ಸಮಾಧಾನ ತಂದಿಲ್ಲ. ಇನ್ನು ಇನ್ನು ನಾಲ್ಕೈದು ಸ್ಥಾನಗಳನ್ನು ಗೆಲ್ಲಬಹುದಾಗಿತ್ತು.
ಎಲ್ಲಿ ಎಡವಲಾಯಿತು. ಎಲ್ಲಾ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದರು ಏಕೆ ಜನ ನಮ್ಮ ಕೈ ಹಿಡಿಯಲಿಲ್ಲ ಎಂದು ಚಿಂತನೆ ಮಾಡಲಾಗುವುದು. ಕರ್ನಾಟಕದಲ್ಲಿ ಮೋದಿ ಅಲೆ ಇರಲಿಲ್ಲ. ನಮ್ಮಲ್ಲಿ ಬಿಜೆಪಿಯವರಂತೆ ಒಳಜಗಳ ಇರಲಿಲ್ಲ ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದರು ಏಕೆ ಸೋಲಾಯಿತು ಎಂದು ಸತ್ಯಶೋಧನೆ ಮಾಡಲಾಗುವುದು. ವಿಭಾಗವಾರು ನಾಲ್ಕು ಸಭೆಗಳನ್ನು ನನ್ನ ಮತ್ತು ಸಿಎಂ ಅವರ ನೇತೃತ್ವದಲ್ಲಿ ನಡೆಸಲಾಗುವುದು.
ಎಐಸಿಸಿ(AICC) ಸತ್ಯಶೋಧನ ಸಮಿತಿಯ ಭೇಟಿ
ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿ ರಾಜ್ಯಗಳಿಗೆ ಎಐಸಿಸಿ ಸತ್ಯಶೋಧನ ಸಮಿತಿಯ ಭೇಟಿ ನೀಡಲಿದೆ. ಆ ಸಮಿತಿಯು ಪ್ರತಿ ಕ್ಷೇತ್ರಗಳಿಗೆ ಭೇಟಿ ನೀಡಲು ಸಾಧ್ಯ ಆಗುವುದಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ರಾಜ್ಯದ ವರದಿಯನ್ನು ಸಲ್ಲಿಸಲಾಗುವುದು.
ಬಿಜೆಪಿ(BJP) ನೇತೃತ್ವದ ಎನ್ ಡಿಎ(NDA) ಸರ್ಕಾರದ ಹಗರಣಗಳ ವಿರುದ್ಧ ನಿರ್ಣಯ
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಮೂರನೇ ಅವಧಿಗೆ ಅಧಿಕಾರ ಹಿಡಿದ ತಕ್ಷಣ ಷೇರು ಪೇಟೆ ಹಗರಣ, ನೀಟ್ ಮತ್ತು ನೆಟ್ ಹಗರಣ(Stock market scam, NEET and NET scam) ನಡೆಯಿತು. ಇದರ ಕುರಿತು ಖಂಡನ ನಿರ್ಣಯ ಅಂಗೀಕಾರ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಖಂಡಿಸಿ ಹೋರಾಟ ಮುಂದುವರೆಸಲಾಗುವುದು. ಲೋಕಸಭಾ ಸದನದಲ್ಲಿ ಬಿಜೆಪಿಯ ಹಗರಣಗಳ ಕುರಿತು ಚರ್ಚೆ ನಡೆಸಲು ಅವಕಾಶ ಮಾಡಿಕೊಟ್ಟಿಲ್ಲ. ಅಲ್ಲದೇ ಮೈಕ್ ಗಳನ್ನು ಬಂದ್ ಮಾಡಲಾಗಿತ್ತು ಎನ್ನುವ ಆರೋಪವಿದೆ.
ಆರು ತಿಂಗಳು ಮುಂಚಿತವಾಗಿ ಅಭ್ಯರ್ಥಿಗಳ ಘೋಷಣೆ
ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಗೆ(election of teachers and graduate constituencies) ಆರು ತಿಂಗಳು ಮುಂಚಿತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಇದರಿಂದ ಉತ್ತಮ ಸ್ಥಾನಗಳನ್ನು ಗೆಲ್ಲಲಾಯಿತು. ಇದೇ ಸಂಪ್ರದಾಯವನ್ನು ಮುಂದಿನ ದಿನಗಳಲ್ಲಿ ಮುಂದುವರೆಸಲಾಗುವುದು.
ಉಪಚುನಾವಣೆ ಎದುರಿಸಲು ತಂಡ ರಚನೆ
ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ವಿಧಾನಸಭಾ ಉಪಚುನಾವಣೆಯನ್ನು ಎದುರಿಸಲು ಮೂರು ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಶಿಗ್ಗಾವಿ (Shiggavi)ಕ್ಷೇತ್ರದ ವರದಿ ನೀಡಲಾಗಿದೆ. ಜುಲೈ 3 ರ ನಂತರ ಸಂಡೂರಿನ(Sandur) ವರದಿ ಸಲ್ಲಿಸುತ್ತಾರೆ. ಸಚಿವರಾದ ಚಲುವರಾಯಸ್ವಾಮಿ(Chaluvarayaswamy) ಅವರು ಚನ್ನಪಟ್ಟಣ (Channapattana) ಕ್ಷೇತ್ರದ ಕುರಿತು ವರದಿ ನೀಡುತ್ತಾರೆ.
ಶಾಸಕರ ಮನೆಯಲ್ಲಿ ಪಕ್ಷದ ಸಭೆ ನಡೆಸುವಂತಿಲ್ಲ
ಪಕ್ಷದ ಸಭೆಗಳನ್ನು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಶಾಸಕರ ಸಭೆಗಳನ್ನು ನಡೆಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಶಾಸಕರ ಮನೆಯಲ್ಲಿ ಸಭೆ ನಡೆಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸಭೆಗೆ ಶಾಸಕರ ಬೆಂಬಲಿಗರ ಹೊರತಾಗಿ ಬೇರೆಯ ಪದಾಧಿಕಾರಿಗಳು ಬರುವುದಿಲ್ಲ ಎನ್ನುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗುವುದು. ಸಭೆಗಳನ್ನು ಪಕ್ಷದ ಕಚೇರಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.
5 ವರ್ಷ ಹಾಗೂ ಎರಡು ಅವಧಿಗೆ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದವರು ಹಾಗೂ ಸಕ್ರಿಯವಾಗಿ ಇಲ್ಲದೆ ಇರುವವರನ್ನು ಬದಲಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ.
ಪಕ್ಷದಲ್ಲಿ ನೂತನ ವಿಭಾಗಗಳ ಪ್ರಾರಂಭ
ಸಾರಿಗೆ, ಕೊಳೆಗೇರಿ, ಸಹಕಾರಿ, ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭೀವೃದ್ಧಿ ವಿಭಾಗಗಳನ್ನು ಪ್ರಾರಂಭ ಮಾಡಲಾಗುವುದು. ಸಣ್ಣ, ಸಣ್ಣ ಸಮುದಾಯಗಳು ಒಂದಷ್ಟು ಮತಗಳನ್ನು ಹೊಂದಿರುತ್ತವೆ ಇವುಗಳನ್ನು ಒಟ್ಟುಗೂಡಿಸಲು ಸಮಿತಿಗಳು ನೇರವಾಗುತ್ತವೆ. ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಪ್ರತ್ಯೇಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು.
ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ್ಟ್ಮೆಂಟ್ ಗಳಿದ್ದು ಎರಡು ಸಾವಿರದಿಂದ ನಾಲ್ಕು ಲಕ್ಷದ ತನಕ ಮತಗಳಿವೆ. ಇಲ್ಲಿನ ನಿವಾಸಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರ ಅನುಕೂಲಕ್ಕಾಗಿ ಈ ವಿಭಾಗ ರಚಿಸಲಾಗುತ್ತಿದೆ. ಈಗಾಗಲೇ ಪದವೀಧರ, ಶಿಕ್ಷಕರ ಮತ್ತು ಸಹಕಾರಿ ವಿಭಾಗಗಳಿಗೆ ಮರುಜೀವ ನೀಡುವ ಕೆಲಸ ಮಾಡಲಾಗಿದೆ. ಆಟೋ ಚಾಲಕರು ಸೇರಿದಂತೆ ಇತರೇ ವಾಹನ ಚಾಲಕರ ವಿಭಾಗ ಹಾಗೂ ಸ್ಲಂ ವಿಭಾಗವನ್ನು ಪ್ರಾರಂಭ ಮಾಡಲಾಗುತ್ತಿದೆ.
ಮೂರು ಸಭೆಗೆ ಬರದ ಪದಾಧಿಕಾರಿಗಳಿಗೆ ಸ್ಥಾನ ನಷ್ಟ
ಪಕ್ಷದಲ್ಲಿ ಶಿಸ್ತು ಮುಖ್ಯ. ಯಾರೂ ಸಹ ಸೂಚನೆಗಳನ್ನು ಉಲ್ಲಂಘಿಸಿ ಬಹಿರಂಗವಾಗಿ ಮಾತನಾಡಬಾರದು ಎಂದು ಸೂಚನೆ ನೀಡಲಾಗಿದೆ. ಸ್ಥಾನ ಪಡೆದುಕೊಂಡಿರುವ ಪದಾಧಿಕಾರಿಗಳು ಜಿಲ್ಲಾ ಹಾಗೂ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡದೆ, ಸಭೆ ನಡೆಸದೆ ಇದ್ದರೆ ಕ್ರಮತೆಗೆದುಕೊಳ್ಳಲಾಗುವುದು. ಮೂರು ಸಭೆಗಳಿಗೆ ಗೈರುಹಾಜರಾದರೆ ವಿಶ್ರಾಂತಿ ನೀಡಲಾಗುವುದು. ಕೂಡಲೇ ಬೇರೆಯವರಿಗೆ ಅಧಿಕಾರ ನೀಡಲಾಗುವಂತಹ ವ್ಯವಸ್ಥೆ ಮಾಡಲಾಗಿದೆ.
ತಾಲ್ಲೂಕು, ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಚುನಾವಣೆ ವೇಳೆಯಲ್ಲಿ ತಾರಾತುರಿಯಲ್ಲಿ ನೇಮಕಾತಿಗಳಾಗಿವೆ. ನಾನು ವೈಯಕ್ತಿಕವಾಗಿ ಒಂದಷ್ಟು ನಿಯಮಾವಳಿಗಳನ್ನು ರೂಪಿಸಿದ್ದು ಅದರಂತೆ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ. ಸಮಿತಿಯಲ್ಲಿ ಯುವ ಕಾಂಗ್ರೆಸ್, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ವಿಭಾಗಗಳ ಸದಸ್ಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ನೀಡಲಾಗಿದೆ. ಕಾರ್ಯಕರ್ತರಿಗೆ ಸಾಕಷ್ಟು ಸಮಿತಿಗಳಿಗೆ ನೇಮಕ ಮಾಡಲು ಅವಕಾಶವಿದ್ದು ಇಲ್ಲೆಲ್ಲಾ ಶೀಘ್ರ ನೇಮಕಾತಿ ಮಾಡಬೇಕು ಎಂದು ತಿಳಿಸಲಾಗಿದೆ.
ಕಾರ್ಯಕರ್ತರ ಭೇಟಿಗೆ ಜಿಲ್ಲಾ ಮಂತ್ರಿಗಳಿಗೆ ಸೂಚನೆ
15 ದಿನಗಳಿಗೆ ಒಮ್ಮೆ ಜಿಲ್ಲಾ ಕೇಂದ್ರ ಹಾಗೂ ತಿಂಗಳಿಗೆ ಒಮ್ಮೆ ಬೆಂಗಳೂರಿನಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಪಕ್ಷದ ಕಚೇರಿಯಲ್ಲಿ ಇಬ್ಬರು ಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಈ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ. ಶೀಘ್ರದಲ್ಲಿ ದಿನಾಂಕ ಪ್ರಕಟ ಮಾಡಲಾಗುವುದು. ನಂತರ ಪರಜಿತ ಅಭ್ಯರ್ಥಿಗಳ ಮತ್ತು ಇತರೇ ಪದಾಧಿಕಾರಿಗಳ ಸಭೆಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು.
ಸಂಸತ್ತಿನ ಮೇಲ್ಮನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಕೆಳಮನೆಯಲ್ಲಿ ರಾಹುಲ್ ಗಾಂಧಿಯವರು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಿದ್ದಾರೆ. ಪಕ್ಷದ ಸಂಸದೀಯ ಸಮಿತಿಗೆ ಸೋನಿಯಾ ಗಾಂಧಿಯವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಈ ಮೂವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಮಾಧ್ಯಮ ಪ್ರತಿಕ್ರಿಯೆ
ಎನ್ ಆರ್ ಐ (NRI) ಕೋಟ ಸೀಟ್ ಗಳ ಹೆಚ್ಚಳಕ್ಕೆ ಕೇಂದ್ರಕ್ಕೆ ಪತ್ರ
ಕೆಪಿಸಿಸಿ(KPCC) ಕಚೇರಿಯ ಮುಂಭಾಗ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು
“ಕರ್ನಾಟಕದ ಎನ್ ಆರ್ ಐ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹೆಚ್ಚಳಕ್ಕೆ ಸಚಿವರಾದ ಶರಣ ಪ್ರಕಾಶ ಗೌಡ ಪಾಟೀಲ್ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ” ಎಂದರು.
“ರಾಜ್ಯದ 20 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎನ್ ಆರ್ ಐ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.
ಸಿಎಂ (CM), ಡಿಸಿಎಂ(DCM) ಬದಲಾವಣೆ ಬಗ್ಗೆ ಮಾತನಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಿರ ಎಂದು ಕೇಳಿದಾಗ “ನಾನು ಯಾವುದೇ ಕಾರಣಕ್ಕೂ ಈ ರೀತಿಯ ಬಹಿರಂಗ ಹೇಳಿಕೆಗಳಿಗೆ ಬೆಂಬಲ ನೀಡುವುದಿಲ್ಲ. ಎಲ್ಲರಲ್ಲಿ ಮನವಿ ಮಾಡುತ್ತೇನೆ ಪಕ್ಷದ ನಿಯಮ ಮೀರಿ ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮಾತನಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.