ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗ, ಪ್ರಧಾನಿ ಮೋದಿಯವರು ದೇಶ ವಿಭಜನೆಯ ಆರದ ಗಾಯದ ನೆನಪಿನ ದಿನವನ್ನು ಘೋಷಿಸಿದ್ದಾರೆ. ಆ ಮೂಲಕ ದೇಶದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ನಾವು ಅದೇ ಹೊತ್ತಿಗೆ ದೇಶ ವಿಭಜನೆಯ ನೋವನ್ನೂ ನೆನಪಿಸಿಕೊಳ್ಳೋಣ ಎಂದು ಮೋದಿ ಟ್ವೀಟ್ ಮಾಡಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ, ಅಧಿಕೃತವಾಗಿ ಆಗಸ್ಟ್ 14ನ್ನು ‘ದೇಶ ವಿಭಜನೆಯ ಭೀಕರ ಘಟನೆಯ ನೆನಪಿನ ದಿನ’ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ.
1947ರಲ್ಲಿ ದೇಶದ ಸ್ವಾತಂತ್ರ್ಯದೊಂದಿಗೇ ಆರಂಭವಾದ ಭಾರತ ಎಂಬುದು ಹೋಳಾಗಿ ಪಾಕಿಸ್ತಾನ ಎಂಬ ಹೊಸ ದೇಶ ಅಸ್ತಿತ್ವಕ್ಕೆ ಬಂದಿತ್ತು. ಆ ವಿಭಜನೆಯ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಲಕ್ಷಾಂತರ ಮಂದಿಯ ಬದುಕು ಹರಿದುಹಂಚಿಹೋಗಿತ್ತು. ಹಿಂದೂ ಮತ್ತು ಮುಸ್ಲಿಮರ ನಡುವೆ ಭುಗಿಲೆದ್ದ ಹಿಂಸಾಚಾರದಲ್ಲಿ ಲಕ್ಷಾಂತರ ಮಂದಿ ಸಾವು ಕಂಡಿದ್ದರು, ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿ ಲೂಟಿಯಾಗಿತ್ತು. ಇಡೀ ಜಾಗತಿಕ ಇತಿಹಾಸದಲ್ಲೇ ಈ ವಿಭಜನೆ ಎಂಬುದು ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿ ದಾಖಲಾಗಿದೆ. ಅದರಲ್ಲೂ ಪಾಕ್ ಗಡಿಯ ಪಂಜಾಬ್ ಪ್ರಾಂತದಲ್ಲಿ ನೆತ್ತರು ಹೊಳೆಯೇ ಹರಿದಿತ್ತು ಎಂಬುದು ಐತಿಹಾಸಿಕ ಸಂಗತಿ.
ಆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶದ ಪಾಲಿನ ಆ ಕರಾಳ ದಿನ ಆ ಹಿಂಸಾಚಾರದಲ್ಲಿ ಮಾನ-ಪ್ರಾಣ ಕಳೆದುಕೊಂಡ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿಪಾಲಾದವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ದಿನವಾಗಿ ಆಗಸ್ಟ್ 14ನ್ನು ಆಚರಿಸೋಣ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.
ಮೋದಿಯವರು ಈ ಘೋಷಣೆಯೊಂದಿಗೆ #PartitionHorrorsRemembranceDay ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಲೇ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಸೇರಿದಂತೆ ಬಹುತೇಕ ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಬಿಜೆಪಿ ನಾಯಕರು ಆ ವಿಷಯವನ್ನು ಮರು ಟ್ವೀಟ್ ಮಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಈ ದುರಂತದ ಬಗ್ಗೆ ಮತ್ತು ದೇಶಕ್ಕಾಗಿ ಪ್ರಾಣ ಕೊಟ್ಟ ಜನರ ಬಗ್ಗೆ ಯಾರೂ ಇಂತಹದ್ದೊಂದು ನಿರ್ಧಾರ ಕೈಗೊಂಡಿರಲಿಲ್ಲ. ಪ್ರಧಾನಿ ಮೋದಿಯವರು ಸಂವೇದನಾಶೀಲತೆಗೆ ಇದೊಂದು ನಿದರ್ಶನ. ಕನಿಷ್ಟ ಈಗಲಾದರೂ ದೇಶ ವಿಭಜನೆಗಾಗಿ ಪ್ರಾಣ ತೆತ್ತವರ ಸ್ಮರಣೆ ಮಾಡುವ ಸಂದರ್ಭ ಬಂದಿದೆ ಎಂದು ಹೇಳಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕೂಡ, ವಿಭಜನೆಯ ಹೊತ್ತಿನ ವಲಸೆ ಮಾನವ ಚರಿತ್ರೆಯಲ್ಲೇ ಅತಿದೊಡ್ಡ ಭಯಾನಕ ವಲಸೆ ಎಂದು ದಾಖಲಾಗಿದೆ. ಸುಮಾರು 2 ಕೋಟಿ ಜನ ಬದುಕಿನ ಮೇಲೆ ಪರಿಣಾಮ ಬೀರಿದ ಈ ಮಹಾ ದುರಂತವನ್ನು ನೆನೆಯುತ್ತಾ, ದೇಶ ಆ ದುರಂತದಲ್ಲಿ ಮಾನ-ಪ್ರಾಣ-ಆಸ್ತಿಪಾಸ್ತಿ ಕಳೆದುಕೊಂಡ ಎಲ್ಲರ ತ್ಯಾಗ-ಬಲಿದಾನವನ್ನು ಸ್ಮರಿಸುತ್ತದೆ ಎಂದು ಹೇಳಿದೆ.
ಆದರೆ, ಈ ಘೋಷಣೆಯ ಸಂದರ್ಭ ಮತ್ತು ಪಾಕಿಸ್ತಾನದ ವಿಷಯದಲ್ಲಿ ಅವರ ಇಬ್ಬಗೆಯ ನೀತಿಯ ಹಿನ್ನೆಲೆಯಲ್ಲಿ ಮೋದಿಯವರ ಈ ಘೋಷಣೆಯ ಕುರಿತು ಸಾಕಷ್ಟು ಟೀಕೆಗಳೂ ವ್ಯಕ್ತವಾಗಿವೆ. ಬಹುತೇಕ ವಿಭಜನೆಯ ಸಂತ್ರಸ್ತರ ತಲೆಮಾರಿನವರು ಈ ಘೋಷಣೆಯನ್ನು ಸ್ವಾಗತಿಸಿ ಭಾವನಾತ್ಮಕ ಟ್ವೀಟ್ ಮಾಡಿದ್ದರೆ, ಕೆಲವರು ಪಂಜಾಬ್ ಮತ್ತು ಉತ್ತರಪ್ರದೇಶದ ಚುನಾವಣೆಗಳ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ದೇಶ ವಿಭಜನೆಯ ವಿಷಯವನ್ನು ಮೋದಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಅದೇ ವಿಭಜನೆಯ ಮೂಲಕ ಉದಯವಾದ ಪಾಕಿಸ್ತಾನಕ್ಕೆ ಕದ್ದುಮುಚ್ಚಿ ಹೋಗಿ ಅಲ್ಲಿನ ಪ್ರಧಾನಿಗಳೊಂದಿಗೆ ಹಸ್ತಲಾಘವ ಮಾಡುವಾಗ, ಮೊನ್ನೆಮೊನ್ನೆ ‘ಪಾಕಿಸ್ತಾನ ದಿನ’ದಂದು ಅಲ್ಲಿನ ಪ್ರಧಾನಿಗೆ ಶುಭಕೋರಿ ಉದ್ದುದ್ದ ಪತ್ರ ಬರೆಯುವಾಗ ಮೋದಿಯವರಿಗೆ ಈ ದೇಶ ವಿಭಜನೆಯ ಸಾವುನೋವು, ತ್ಯಾಗಬಲಿದಾನಗಳು ನೆನಪಾಗಲಿಲ್ಲ ಏಕೆ ಎಂದೂ ಪ್ರಶ್ನಿಸಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಕೂಡ ಇದೇ ಅಂಶಗಳನ್ನೇ ಮುಂದಿಟ್ಟುಕೊಂಡು ಮೋದಿಯವರ ಕಾಲೆಳೆದಿದ್ದು, “ದೇಶದಲ್ಲಿ ಚುನಾವಣೆಗಳಿಲ್ಲದಾಗ ಮೋದಿಯವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತೆ. ಚುನಾವಣೆಗಳು ಬರುತ್ತಲೇ ದೇಶ ವಿಭಜನೆಯ ಭೀಕರತೆ ದಿಢೀರನೇ ನೆನಪಾಗಿ ಕಣ್ಣೀರು ಸುರಿಯುತ್ತೆ. ಇದೀಗ ಉತ್ತರಪ್ರದೇಶ ಚುನಾವಣೆಗಳ ತಯಾರಿ ಆರಂಭಿಸಿರುವ ಪ್ರಧಾನಿಗಳು, ದೇಶ ವಿಭಜನೆಯ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ಆದರೆ, ಕಳೆದ ಮಾರ್ಚ್ 22ರಂದು ಪಾಕಿಸ್ತಾನ ದಿನ(ಪಾಕಿಸ್ತಾನ ಡೇ)ದ ಸಂದರ್ಭದಲ್ಲಿ ಮತ್ತು ಅವರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪಾಕಿಸ್ತಾನದ ಜನತೆಗೆ ಮತ್ತು ಅಲ್ಲಿನ ನಾಯಕರಿಗೆ ಶುಭಾಶಯ ಕೋರಿ ಪ್ರೀತಿಯ ಹೊಳೆಯನ್ನೇ ಹರಿಸಿದ್ದರು” ಎಂದು ಟೀಕಿಸಿದೆ.
“ಗೌರವಾನ್ವಿತರೆ, ಪಾಕಿಸ್ತಾನದ ರಾಷ್ಟ್ರೀಯ ದಿನದ ಈ ಶುಭಸಂದರ್ಭದಲ್ಲಿ ನಾನು ಪಾಕಿಸ್ತಾನದ ಜನತೆಗೆ ಶುಭಾಶಯಗಳನ್ನು ಕೋರುವೆ. ನೆರೆಯ ರಾಷ್ಟ್ರವಾಗಿ ಭಾರತ ಪಾಕಿಸ್ತಾನದ ಜನತೆಯೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಲು ಬಯಸುತ್ತದೆ. ಅದಕ್ಕಾಗಿ ಪರಸ್ಪರ ನಂಬಿಕೆಯ, ಭಯ ಮತ್ತು ಭೀತಿ ಮುಕ್ತ ವಾತಾವರಣ ಬೇಕಾಗಿದೆ. ಮಾನ್ಯರೇ, ಮಾನವ ಇತಿಹಾಸದ ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲಿ, ಕೋವಿಡ್ -19 ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ನಿಮಗೆ ಮತ್ತು ಪಾಕಿಸ್ತಾನದ ಜನತೆಗೆ ಶುಭಾಶಯಗಳನ್ನು ಕೋರುತ್ತೇನೆ. ದಯವಿಟ್ಟು ನನ್ನ ಉನ್ನತ ಆಶಯದ ಅಭಯವನ್ನು ಸ್ವೀಕರಿಸಿ..” ಎಂದು ಪ್ರಧಾನಿ ಮೋದಿಯವರು ಕಳೆದ ಮಾರ್ಚ್ 22ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬರೆದ ಪತ್ರದ ಪ್ರತಿಯನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಪಾಕಿಸ್ತಾನದ ಪ್ರಧಾನಿಗೆ ಮೋದಿಯವರು ಬರೆದ ಪತ್ರ ಪ್ರತಿ ಮತ್ತು ಮಾಡಿದ ಟ್ವೀಟ್ ಸ್ಕ್ರೀನ್ ಶಾಟ್ ಸಹಿತ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, “1940ರಲ್ಲಿ ಅದೇ ಮಾರ್ಚ್ 22 ಮತ್ತು 24ರಂದು ಆಲ್ ಇಂಡಿಯಾ ಮುಸ್ಲಿಂ ಲೀಗ್ ನ ಲಾಹೋರ್ ಅಧಿವೇಶನದಲ್ಲಿಯೇ ಪಾಕಿಸ್ತಾನದ ಪ್ರಸ್ತಾಪವನ್ನು ಅಂಗೀಕರಿಸಿತ್ತು ಮತ್ತು ಆ ಮೂಲಕ ದೇಶ ವಿಭಜನೆಗೆ ಅಡಿಗಲ್ಲು ಹಾಕಿತ್ತು ಎಂಬುದನ್ನು ಮೋದಿಯವರು ಮರೆಯಬಾರದು” ಎಂದು ಹೇಳಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೋದಿಯವರ ಟ್ವೀಟ್ ಉಲ್ಲೇಖಿಸಿ ಮರುಟ್ವೀಟ್ ಮಾಡಿದ್ದು, “ಬ್ರಿಟಿಷರು ಮತ್ತು ಜಿನ್ನಾ ಅವರ ಒಡೆದು ಆಳುವ ನೀತಿಯ ಪ್ರತಿಫಲ ದೇಶದ ವಿಭಜನೆಯ ಕರಾಳ ಘಟನೆ. ಆ ಕರಾಳ ನೆನಪು, ಇದೀಗ ಬಿಜೆಪಿಯ ಒಡೆದು ಆಳುವ ನೀತಿಗೆ ಬಲಿಯಾಗದಂತೆ ನಮಗೆ ಎಚ್ಚರಿಕೆಯ ಘಂಟೆಯಾಗಬೇಕು” ಎಂದು ಅವರು ಹೇಳಿದ್ದಾರೆ.
ಒಟ್ಟಾರೆ ದೇಶದ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶ ವಿಭಜನೆಯ ಸಂಕಟವನ್ನೂ, ಆ ಹೊತ್ತಿನ ಸಾವುನೋವನ್ನೂ ಸ್ಮರಿಸುವ ಪ್ರಧಾನಿ ಮೋದಿಯವರ ವರಸೆ ಇದೀಗ ಭಾರೀ ಮೆಚ್ಚುಗೆಯ ಸಂಗತಿಯಾಗಿರುವಂತೆಯೇ ಟೀಕೆ, ವ್ಯಂಗ್ಯದ ವಸ್ತುವೂ ಆಗಿದೆ. ಅಂದರೆ; ರಾಜಕಾರಣದ ಲಾಭದ ಮೇಲೆ ಕಣ್ಣಿಟ್ಟು ಮೋದಿ, ಇಂತಹ ಘೋಷಣೆಗಳನ್ನು ಮಾಡುವುದು ರೂಢಿಯಾಗಿರುವ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಕೂಡ ಸಹಜವಾಗೇ ಪ್ರತಿಪಕ್ಷಗಳು ಮತ್ತು ಸಾರ್ವಜನಿಕ ವಲಯದಿಂದ ಸಾಕಷ್ಟು ಟೀಕೆಯ ಮಾತುಗಳು ಕೇಳಿಬಂದಿವೆ. ಅದರಲ್ಲೂ ಪಾಕಿಸ್ತಾನದ ವಿಷಯದಲ್ಲಿ ಮೋದಿಯವರ ದ್ವಿಮುಖ ನೀತಿಯ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಅವರ ಹಿಂದಿನ ಪಾಕಿಸ್ತಾನ ಭೇಟಿಗಳು, ಶುಭಾಶಯಗಳು, ಟ್ವೀಟ್ ಗಳು, ಪತ್ರಗಳನ್ನು ಉಲ್ಲೇಖಿಸಿಯೇ ಆಗ ಪಾಕಿಸ್ತಾನದ ಮೇಲೆ ಇನ್ನಿಲ್ಲದ ಪ್ರೀತಿ ಹರಿಸಿದ ನೀವು, ಈಗ ಅದೇ ಪಾಕಿಸ್ತಾನದ ಹುಟ್ಟಿಗೆ ಕಾರಣವಾದ ವಿಭಜನೆಯ ವಿಷಯದಲ್ಲಿ ಹೀಗೆ ಕಣ್ಣೀರು ಸುರಿಸುತ್ತಿರುವುದರ ಹಿಂದಿನ ಮರ್ಮವೇನು? ಎಂದು ಪ್ರಶ್ನಿಸಿದ್ದಾರೆ.
ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಪಂಜಾಬ್ ಮತ್ತು ಹಿಂದೂ-ಮುಸ್ಲಿಂ ಭಾವನೆಗಳ ಮೇಲೆಯೇ ರಾಜಕಾರಣ ನಡೆಯುವ ಉತ್ತರಪ್ರದೇಶದ ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ಮೋದಿಯವರು, ಹಿಂದೂ-ಮುಸ್ಲಿಂ ಹಿಂಸಾಚಾರದ ಐತಿಹಾಸಿಕ ಕರಾಳ ಘಟನೆಯಾದ ವಿಭಜನೆಯ ವಿಷಯವನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತರುತ್ತಿರುವುದರ ಹಿಂದೆ ಚುನಾವಣಾ ಲಾಭದ ಉದ್ದೇಶವಿದೆಯೇ ವಿನಃ ನಿಜವಾಗಿಯೂ ವಿಭಜನೆಯ ಕರಾಳ ನೆನಪುಗಳ ಸ್ಮರಣೆ ಮತ್ತು ಸಂತ್ರಸ್ತರ ತ್ಯಾಗಬಲಿದಾನ ಸ್ಮರಣೆಯ ಉದ್ದೇಶವಲ್ಲ ಎಂಬ ಮಾತುಗಳೂ ವ್ಯಕ್ತವಾಗಿವೆ.
ಆದರೆ, ಅಂತಹ ಚರ್ಚೆಗಳೇನೇ ಇರಲಿ; ಅಸಲೀ ಉದ್ದೇಶವೇನೇ ಇರಲಿ; ವಿಭಜನೆಯ ಕರಾಳ ಘಟನೆಯನ್ನು ಸ್ಮರಿಸುವ ದಿನವನ್ನಾಗಿ ಆಗಸ್ಟ್ 14ನ್ನು(ಸ್ವಾತಂತ್ರ್ಯದ ಮುನ್ನಾ ದಿನ) ಘೋಷಿಸುವ ಮೂಲಕ ಪ್ರಧಾನಿ ಮೋದಿ, ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ ಮತ್ತು ಆ ಕ್ರಮ ಅವರಿಗೆ ಮತ್ತು ಅವರ ಪಕ್ಷ ಬಿಜೆಪಿಗೆ ಬಹಳ ದೀರ್ಘ ಕಾಲ ದೊಡ್ಡ ಮಟ್ಟದಲ್ಲಿ ಒದಗಿಬರಲಿದೆ ಎಂಬುದಂತೂ ನಿಜ. ಹೀಗೆ ಇತಿಹಾಸ ಕಾಲಗರ್ಭದಿಂದ ಹತಾರಗಳನ್ನು ಹೆಕ್ಕಿ ತಂದು ಸಾಣೆ ಹಿಡಿದು ರಾಜಕಾರಣದ ಪ್ರತ್ಯಾಸ್ತ್ರಗಳನ್ನಾಗಿ ಬಳಸುವುದು ಬಹುಶಃ ಭಾರತೀಯ ಜನತಾ ಪಕ್ಷ ಕಂಡುಕೊಂಡಿರುವ ಅತ್ಯಂತ ಚಾಣಾಕ್ಷ ರಾಜಕೀಯ ತಂತ್ರಗಳಲ್ಲಿ ಒಂದು. ಅಯೋಧ್ಯೆಯ ರಾಮಜನ್ಮಭೂಮಿಯಿಂದ ಹಿಡಿದು ಅದರ ಎಲ್ಲಾ ರಾಜಕೀಯ ಅಭಿಯಾನಗಳ ಹಿಂದಿರುವುದು ಕೂಡ ಅದರ ಈ ಚಾಣಾಕ್ಷತನವೇ. ಇದೀಗ ದೇಶ ವಿಭಜನೆಯ ಕರಾಳ ಘಟನೆ ಕೂಡ ಅಂತಹದ್ದೇ ಮತ್ತೊಂದು ಅಸ್ತ್ರವಾಗಿ ಬಿಜೆಪಿಗೆ ಸಾಕಷ್ಟು ಶಕ್ತಿ ತಂದುಕೊಡುವ ಸಾಧ್ಯತೆಯನ್ನು ತಳ್ಳಿಹಾಕಲಾಗದು!