ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಇಂಧನ ಸರಬರಾಜಿನಲ್ಲಿ ಉಂಟಾದ ಅಡಚಣೆಗಳು ಇದೀಗ ದಿನನಿತ್ಯ ಬಳಕೆಯ ವಸ್ತುಗಳ ಮೇಲೂ ಪರಿಣಾಮ ಬೀರಲಾರಂಭಿಸಿವೆ. ರಾಜ್ಯದಲ್ಲಿ LPG ಗ್ಯಾಸ್ ಕೊರತೆಯಿಂದ ಬಿಸ್ಕೆಟ್ ಉತ್ಪಾದನೆ ಸ್ಥಗಿತಗೊಂಡಿದ್ದು, ಮುಂಬರುವ ದಿನಗಳಲ್ಲಿ ಅಭಾವ ಉಂಟಾಗುವ ಆತಂಕ ವ್ಯಕ್ತವಾಗಿದೆ.

ರಾಜ್ಯದ ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಮತ್ತು ಹೊಸಪೇಟೆ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ಲೆ-ಜಿ (Parle-G) ಉತ್ಪಾದನಾ ಘಟಕಗಳು ಕಳೆದ ಆರು ದಿನಗಳಿಂದ ಬಂದ್ ಆಗಿವೆ. ಬಿಸ್ಕೆಟ್ ತಯಾರಿಕೆಗೆ ಅಗತ್ಯವಿರುವ LPG ಗ್ಯಾಸ್ ಕಳೆದ 10 ದಿನಗಳಿಂದ ಪೂರೈಕೆಯಾಗದ ಹಿನ್ನೆಲೆಯಲ್ಲಿ ಉತ್ಪಾದನೆ ಸಂಪೂರ್ಣ ನಿಂತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ದಾಸ್ತಾನಿನಲ್ಲಿರುವ ಬಿಸ್ಕೆಟ್‌ಗಳನ್ನು ಮಾತ್ರ ಮಾರುಕಟ್ಟೆಗೆ ರವಾನಿಸಲಾಗುತ್ತಿದ್ದು, ಹೊಸ ಉತ್ಪಾದನೆ ಇಲ್ಲದ ಕಾರಣ ಬೇಗನೆ ಕೊರತೆ ಎದುರಾಗುವ ಸಾಧ್ಯತೆ ಇದೆ. ಹುಬ್ಬಳ್ಳಿ ಘಟಕಕ್ಕೆ ಪ್ರತಿದಿನ ಸುಮಾರು 1.5 ಟನ್ LPG ಅಗತ್ಯವಿದ್ದು, ಸಾಮಾನ್ಯವಾಗಿ ದಿನಕ್ಕೆ 40 ಟನ್ ಬಿಸ್ಕೆಟ್‌ಗಳನ್ನು ಉತ್ಪಾದಿಸಲಾಗುತ್ತಿತ್ತು. ಈ ಉತ್ಪನ್ನಗಳು ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸರಬರಾಜಾಗುತ್ತವೆ.

ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ನೂರಕ್ಕೂ ಹೆಚ್ಚು ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಮಾರುಕಟ್ಟೆಯಲ್ಲಿ ಬಿಸ್ಕೆಟ್ ಲಭ್ಯತೆ ಕುಂಠಿತವಾಗುವ ಸಾಧ್ಯತೆ ಇದ್ದು, ವಿಶೇಷವಾಗಿ ಮಕ್ಕಳ ಆಹಾರದಲ್ಲಿ ಸಮಸ್ಯೆ ಉಂಟಾಗುವ ಭೀತಿ ವ್ಯಕ್ತವಾಗಿದೆ.






