ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ, ಯುವ ಜನರ ಉದ್ಯೋಗ, ಮಹಿಳೆಯರ ಕಲ್ಯಾಣ, ರೈತ ಕಾರ್ಮಿಕರ ಅಭ್ಯುದಯ ಸೇರಿದಂತೆ ಸರ್ವರ ಏಳಿಗೆಗಾಗಿ ನಡೆದ ಐತಿಹಾಸಿಕ ಪಂಚಮಸಾಲಿ 2ಎ ಮೀಸಲಾತಿ ಬೆಂಗಳೂರು ಪಾದಯಾತ್ರೆ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದೆ. ಮೀಸಲಾತಿ ವಿಚಾರವಾಗಿ ಸತತವಾಗಿ ಸತ್ಯಾಗ್ರಹ ಮಾಡುತ್ತಿರುವ ಬಸವ ಜಯಮೃತ್ಯುಂಜಯ ಶ್ರೀಗಳು ವಿಜಯಪುರದಲ್ಲಿ ಪಂಚಮಸಾಲಿ ಮುಖಂಡರ ಜೊತೆಗೆ ಸಭೆ ನಡೆಸಿ ಪಂಚಮಸಾಲಿ 2ಎ ಮೀಸಲಾತಿ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಪಂಚಮಸಾಲಿ ಸ್ವಾಮೀಜಿ , ಬೊಮ್ಮಾಯಿ ಕೊಟ್ಟ ಮಾತು ತಪ್ಪಿದ್ದಾರೆ. ಮೀಸಲಾತಿ ಸಿಗದಿದ್ದರೆ ನಾನೇ ಸ್ವತಃ ಬೊಮ್ಮಾಯಿ ಮನೆ ಎದುರು ಧರಣಿ ಮಾಡ್ತೀನಿ. ಧರಣಿ ಮಾಡುವ ಬಗ್ಗೆ ಶ್ರೀಘ್ರವೇ ದಿನಾಂಕ ನಿಗಧಿ ಮಾಡಲಾಗುವುದು. ಏ 21 ರಿಂದ ಮೇ4 ವರೆಗೆ ಕೂಡಲಸಂಗಮದಲ್ಲಿ ಹೋರಾಟ ಮಾಡಿದ್ದೇವೆ. ಈಗ ತಾಲೂಕಾವಾರು ಹೋರಾಟ, ಧರಣಿ, ಸರ್ಕಾರಿ ಕಚೇರಿಗೆ ಬೀಗ ಹಾಕುವ ಪ್ರತಿಭಟನೆ ಶುರುವಾಗಿವೆ. ಸರ್ಕಾರ ವಿಳಂಬ ಧೋರಣೆ ಮುಂದುವರೆದರೆ ಶಿಗ್ಗಾಂವಿಯ ಸಿಎಂ ಮನೆ ಎದುರು ಧರಣಿ ಎಂದು ಹೇಳಿದ್ದಾರೆ.
ಬೊಮ್ಮಾಯಿಯವರು ಸಿಎಂ ಆದ ಬಳಿಕ ದೊಡ್ಡ ಭರವಸೆ ಕೊಟ್ಟಿದ್ದರು. ಅವರ ಮೇಲೆ ಬಹಳ ವಿಶ್ವಾಸವಿತ್ತು. ಅವರು ಕೊಟ್ಟ ಮಾತು ತಪ್ಪಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅದೆಲ್ಲವನ್ನು ನೋಡಿಕೊಂಡು ಹೋರಾಟದ ದಿನಾಂಕ ಘೋಷಣೆ ಮಾಡುತ್ತೇವೆ. ಮೇ ತಿಂಗಳ ಒಳಗೆ ಹೋರಾಟ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದ್ದಾರೆ.
ಸರ್ಕಾರಕ್ಕೆ ಮೂರು ಬಾರಿ ಗಡುವು ಕೊಟ್ಟಿದ್ವಿ. ಸರ್ಕಾರ ಸ್ವಾಮೀಜಿ ಮೂಗಿಗೆ ತುಪ್ಪ ಹಚ್ಚುತ್ತೇ ಅನ್ನಬಾರದು ಅಂತ ದಿಢೀರ್ ಸತ್ಯಾಗ್ರಹ ಆರಂಭಿಸಿದ್ದೇವೆ. ಸತ್ಯಾಗ್ರಹ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಆರಂಭಿಸಿದ್ದೇವೆ. ಗಡುವು ಕೊಟ್ಟಿದ್ದು ಮುಗಿದ ಅಧ್ಯಾಯ. ಇನ್ನೇನಿದ್ದರೂ ಮೀಸಲಾತಿ ಆದೇಶ ಪ್ರತಿ ಸಿಗುವವರೆಗೂ ಹೋರಾಟ. ಕೂಡಲಸಂಗಮದಲ್ಲಿ 14ದಿನ ವನವಾಸ ಮಾಡಿ, ಮಾನಸಿಕ ಸಂಕಲ್ಪ ಮಾಡಿದ್ದೇವೆ. ಪ್ರತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧಾರಿಸಿದ್ದೇವೆ. ಮೀಸಲಾತಿ ಸಿಗದಿದ್ದರೆ ಸಿಎಂ ಮನೆ ಎದುರು ಧರಣಿ ಮಾಡುತ್ತೇವೆ ಅಲ್ಲಿಗೂ ಆಗದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡಿ ಕೊನೆಗೆ ಮಣಿಯದಿದ್ದರೂ 25 ಲಕ್ಷ ಜನ ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೇವೆ ಎಂದು ಹೇಳಿದ್ದಾರೆ.