ಬೆಂಗಳೂರು: ಉಲ್ಫಾ ಉಗ್ರನ ಬಂಧನ ಬೆನ್ನಲ್ಲೇ ಪಾಕಿಸ್ತಾನ ಪ್ರಜೆ ಬಂಧನ ಮಾಡಲಾಗಿದೆ. ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಓರ್ವ ಪಾಕಿಸ್ತಾನ ಪ್ರಜೆಯನ್ನು ಬಂಧಿಸಲಾಗಿದೆ. ಜಿಗಣಿ ಬಳಿ ಅಪಾರ್ಟ್ಮೆಂಟ್ನಲ್ಲಿ ಪಾಕಿಸ್ತಾನ ಪ್ರಜೆ ಆತನ ಪತ್ನಿ ಬಾಂಗ್ಲಾದೇಶದ ಮಹಿಳೆ ಇಬ್ಬರು ಮಕ್ಕಳನ್ನು ಜಿಗಣಿ ಪೊಲೀಸರು ನಿನ್ನೆ ರಾತ್ರಿ ಬಂಧನ ಮಾಡಿದ್ದಾರೆ.
ಜಿಗಣಿ ಬಳಿಯ ಅಪಾರ್ಟ್ಮೆಂಟ್ನಲ್ಲಿ ಕುಟುಂಬ ಸಮೇತ ವಾಸವಿದ್ದರು ಎನ್ನಲಾಗಿದೆ. ತಡರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಧರ್ಮದ ವಿಚಾರದಲ್ಲಿ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೊನೆಗೆ ಅಲ್ಲಿ ಇರೋಕೆ ಆಗದೆ ಬಾಂಗ್ಲಾದೇಶಕ್ಕೆ ಎಸ್ಕೇಪ್ ಆಗಿದ್ದನು. ಢಾಕಾದಲ್ಲಿ ವಾಸವಿದ್ದಾಗ ಅಲ್ಲಿನ ಯುವತಿಯನ್ನೇ ವಿವಾಹವಾಗಿದ್ದ. ಬಳಿಕ 2014ರಲ್ಲಿ ಪತ್ನಿ ಜೊತೆ ಅಕ್ರಮವಾಗಿ ದೆಹಲಿಗೆ ಬಂದಿದ್ದು, ಸ್ಥಳೀಯ ವ್ಯಕ್ತಿ ನೆರವಿನಿಂದ ಗುರುತಿನ ದಾಖಲೆಗಳು ಸೃಷ್ಟಿ ಮಾಡಿಕೊಂಡು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದನು ಎನ್ನಲಾಗಿದೆ.
2018ರಲ್ಲಿ ಬೆಂಗಳೂರಿಗೆ ಬಂದಿದ್ದ ಕುಟುಂಬ ಇಬ್ಬರು ಮಕ್ಕಳ ಜೊತೆಗೆ ಜಿಗಣಿಯಲ್ಲಿ ವಾಸವಿದ್ದರು. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾಕ್ ಪ್ರಜೆ ಅರೆಸ್ಟ್ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಕೆ ಎಸ್ ನಾಗರಾಜ್, ಜಿಗಣಿ ಠಾಣೆಗೆ ಆಗಮಿಸಿದ್ದಾರೆ. ಇನ್ಸ್ಪೆಕ್ಟರ್ ಮಂಜುನಾಥ್ ಬಳಿ ಮಾಹಿತಿ ಸಂಗ್ರಹ ಮಾಡಿದ್ದು, ಜಿಗಣಿ ಪೊಲೀಸ್ ಠಾಣೆಗೆ ಸೈಬರ್ ಕ್ರೈಮ್ ಪೊಲೀಸರೂ ಕೂಡ ಆಗಮಿಸಿದ್ದಾರೆ.
ಪಾಕ್ ಪ್ರಜೆ ಬಂಧನ ಹಿನ್ನೆಲೆ ಜಿಗಣಿ ಪೊಲೀಸ್ ಠಾಣೆಗೆ ಅಧಿಕಾರಿಗಳು ಆಗಮಿಸುತ್ತಿದ್ದು, ಸೈಬರ್ ಕ್ರೈಮ್ ಡಿವೈಎಸ್ಪಿ ಪರಮೇಶ್ ಕೂಡ ಭೇಟಿ ನೀಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಮಾತನಾಡಿ, ನಮಗೆ ಬಂದ ಮಾಹಿತಿ ಪ್ರಕಾರ ಅವರು ನಾಲ್ಕೂ ಜನ ಹತ್ತು ವರ್ಷದಿಂದ ಭಾರತದಲ್ಲಿದ್ದಾರೆ. ಬೆಂಗಳೂರಿಗೆ ಬಂದು ಒಂದು ವರ್ಷ ಆಗಿದೆ. ಅವರನ್ನು ಕಸ್ಟಡಿಗೆ ತಗೊಂಡಿದ್ದಾರೆ. ತನಿಖೆ ನಡೀತಿದೆ. ಹತ್ತು ವರ್ಷದಿಂದ ಇದ್ದರೂ ಗುಪ್ತಚರ ಇಲಾಖೆಗೆ ಯಾಕೆ ಗೊತ್ತಾಗಿಲ್ಲ..? ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಹೆಸರು ಬದಲಾಯಿಸಿಕೊಂಡು ರೆಸ್ಟೋರೆಂಟ್ ನಡೆಸ್ತಿದ್ದಾರೆ ಅಂತ ಮಾಹಿತಿ ಬಂದಿದೆ. ನೋಡೋಣ ತನಿಖೆಯಲ್ಲಿ ಏನು ಮಾಹಿತಿ ಹೊರ ಬರುತ್ತದೆ ಎಂದಿದ್ದಾರೆ.