ಪಾಕಿಸ್ತಾನ್ ತಂಡ ಇಂಗ್ಲೆಂಡಿ ವಿರುದ್ಧ ಸರಣಿ ಸೋಲುವ ಮೂಲಕ ಟಿ20 ವಿಶ್ವಕಪ್ (T20 World Cup 2024) ಆಡಲು ತೆರಳಿದೆ.
ನಾಯಕತ್ವ ಕಳೆದುಕೊಂಡ 5 ತಿಂಗಳ ನಂತರ ಬಾಬರ್ ಮತ್ತೆ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕತ್ವ ಬದಲಾದರೂ ತಂಡದ ಪ್ರದರ್ಶನ ಮಾತ್ರ ಹಾಗೆಯೇ ಇದ್ದಂತಿದೆ. ನ್ಯೂಜಿಲೆಂಡ್ ಬಿ ತಂಡದ ವಿರುದ್ಧ ಸರಣಿ ಡ್ರಾ ಮಾಡಿಕೊಂಡಿದ್ದ ಪಾಕ್, ಐರ್ಲೆಂಡ್ ವಿರುದ್ಧ ಸರಣಿ ಗೆದ್ದಿತ್ತು. ನಂತರ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಕೊನೆಯ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು 7 ವಿಕೆಟ್ ಗಳಿಂದ ಸೋಲಿಸಿ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
ನಾಲ್ಕು ಪಂದ್ಯಗಳ ಸರಣಿಯ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್, ಉಳಿದ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಪ್ರಶಸ್ತಿಗೆ ಸೆಣಸಾಟ ಆರಂಭಿಸಲು ಸಜ್ಜಾಗಿದೆ. ಪಂದ್ಯದಲ್ಲಿ ಪಾಕಿಸ್ತಾನ ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಜೋಡಿ ನಾಯಕ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಇಬ್ಬರೂ ಪವರ್ಪ್ಲೇ ಅಂತ್ಯಕ್ಕೆ 59 ರನ್ ಗಳಿಸಿದ್ದರು. ನಂತರ ಪಾಕಿಸ್ತಾನ ಕೇವಲ 27 ರನ್ಗಳ ಅಂತರದಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡಿತು. ಆರನೇ ವಿಕೆಟ್ಗೆ ಉಸ್ಮಾನ್ ಖಾನ್ ಮತ್ತು ಇಫ್ತಿಕರ್ ಅಹ್ಮದ್ ನಡುವೆ 40 ರನ್ ಜೊತೆಯಾಟ ನೀಡಿದರು. ಪಾಕಿಸ್ತಾನ ತಂಡ ಇನ್ನೂ ಕಡಿಮೆ ಮೊತ್ತಕ್ಕೆ ಆಲೌಟ್ ಆಗುತ್ತಿತ್ತು. ಅಂತಿಮವಾಗಿ ತಂಡ 157 ರನ್ ಗಳಿಸಿತು.
ಸಾಧಾರಣ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ಪರ ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ನಾಯಕ ಜೋಸ್ ಬಟ್ಲರ್ 6.2 ಓವರ್ಗಳಲ್ಲಿ 82 ರನ್ ಗಳಿಸಿದರು. ವೇಗದ ಬೌಲರ್ ಹ್ಯಾರಿಸ್ ರೌಫ್ ಮೂರು ವಿಕೆಟ್ಗಳನ್ನು ಕಬಳಿಸುವ ಮೂಲಕ ಪ್ರತಿರೋಧ ತೋರಿದರು. ನಂತರ ಅಂತಿಮವಾಗಿ ಇಂಗ್ಲೆಂಡ್ ತಂಡ 15.3 ಓವರ್ಗಳಲ್ಲಿ ಗೆಲುವಿನ ದಡ ಸೇರಿತು.