

ಭಾರತ ಯುದ್ಧ ಘೋಷಿಸುವ ಸಾಧ್ಯತೆ ಇರುವುದರಿಂದ ಪಾಕಿಸ್ತಾನವು ದಕ್ಷಿಣ ವಲಯದಲ್ಲಿ ಚೀನಾದ J-10 ಮತ್ತು JF-17 ಮಾದರಿಗಳು ಹಾಗೂ F-16ಗಳನ್ನು ಒಳಗೊಂಡಂತೆ ಹಲವಾರು ಸುಧಾರಿತ ಫೈಟರ್ ಜೆಟ್‌ಗಳನ್ನು ನಿಯೋಜನೆ ಮಾಡಿದೆ. ಪಾಕಿಸ್ತಾನವು ತನ್ನ ಪ್ರಮುಖ ಜೀವನಾಡಿ ಎಂದು ಪರಿಗಣಿಸುವ ಕರಾಚಿ ಬಂದರು ಸೇರಿದಂತೆ ಪ್ರಮುಖ ಕಾರ್ಯತಂತ್ರದ ಸ್ಥಳಗಳ ಮೇಲೆ ಸಂಭವನೀಯ ದಾಳಿಯ ನಿರೀಕ್ಷೆಯಲ್ಲಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಪಾಕಿಸ್ತಾನವು ಗಡಿಯಲ್ಲಿ ಸೈನಿಕರ ಚಲನೆಯನ್ನು ಹೆಚ್ಚಿಸಿದೆ, ರಕ್ಷಣಾತ್ಮಕ ಸ್ಥಾನಗಳನ್ನು ಬಲಪಡಿಸಲು ಮಿಲಿಟರಿ ಟ್ರಕ್‌ಗಳನ್ನು ಇರಿಸಿದೆ. ಇದು ಭಾರತದ ಮಿಲಿಟರಿ ಕ್ರಮಗಳ ಬಗ್ಗೆ ಪಾಕಿಸ್ತಾನದ ಎಚ್ಚರಿಕೆಯನ್ನು ಸೂಚಿಸುತ್ತದೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಎನ್‌ಕ್ರಿಪ್ಟ್ ಮಾಡಲಾದ ಅಪ್ಲಿಕೇಶನ್‌ಗಳ ಮೂಲಕ ಉಗ್ರರೊಂದಿಗೆ ಸಂವಹನ ನಡೆಸಲಾಗಿದೆ ಎನ್ನಲಾಗಿದೆ. ಈ ರೀತಿಯ ಸಂಭಾಷಣೆ ನಡೆಸುವ ಮೂಲಕ 10ಕ್ಕೂ ಹೆಚ್ಚು ಸ್ಥಳೀಯ ಕಾರ್ಯಕರ್ತರು, ಉಗ್ರರಿಗೆ ಸಹಾಯ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯು ದಾಳಿಯ ಸಮಯದಲ್ಲಿ 10ಕ್ಕೂ ಹೆಚ್ಚು ಕಾಶ್ಮೀರಿ ಭೂಗತ ದಾಳಿಕೋರರೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಎನ್ಐಎ ಬಹಿರಂಗಪಡಿಸಿದೆ.

ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಮುಖ್ಯಸ್ಥರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಅನಿಲ್ ಚೌಹಾಣ್ ಜೊತೆ ರಾಜನಾಥ್ ಸಿಂಗ್ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಮೂರು ಸೇನೆಗಳ ಸಾಮರ್ಥ್ಯದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧ ಸೇನೆ ಯಾವ ರೀತಿ ಸಿದ್ಧವಾಗಿದೆ, ಮುಂದೆ ಏನಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಸಮರ್ಥರು. ಪಾಕಿಸ್ತಾನದ ಬಳಿ ಏನೆಲ್ಲಾ ವ್ಯವಸ್ಥೆ ಇದೆ ಎಂಬ ಸಂಪೂರ್ಣ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮುಹಮ್ಮದ್ ಆಸಿಫ್, ನೆರೆಯ ಭಾರತದ ಮಿಲಿಟರಿ ಆಕ್ರಮಣ ಸನ್ನಿಹಿತವಾಗಿದೆ ಅಂತ ಹೇಳಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿರುವ ಖ್ವಾಜಾ, ನೆರೆಯ ಭಾರತದ ಮಿಲಿಟರಿ ಆಕ್ರಮಣ ಸನ್ನಿಹಿತವಾಗಿದೆ. ಇಸ್ಲಾಮಾಬಾದ್ ತನ್ನ ಪಡೆಗಳನ್ನು ಬಲಪಡಿಸಿದೆ. ನಮ್ಮ ಪಡೆಗಳನ್ನು ಬಲಪಡಿಸಿದ್ದೇವೆ. ಏಕೆಂದರೆ ಅದು ಈಗ ಸನ್ನಿಹಿತವಾಗಿದೆ. ಆದ್ದರಿಂದ ಆ ಪರಿಸ್ಥಿತಿಯಲ್ಲಿ ಕೆಲವು ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಸೇನೆ ದಾಳಿಯ ಸಾಧ್ಯತೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದಿದ್ದಾರೆ.


