ಕೋವಿಡ್ ನಿಯಂತ್ರಣ ಹಿನ್ನೆಲೆ, ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದೆ. ಇತ್ತೀಚಿನ ವರದಿಯ ಪ್ರಕಾರ ಭಾರತ ಸೇರಿದಂತೆ 26 ದೇಶಗಳ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.
ಪಾಕಿಸ್ತಾನದಲ್ಲಿ ಕೋವಿಡ್ ಸಾಂಕ್ರಾಮಿಕ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ನ್ಯಾಷನಲ್ ಕಮಾಂಡ್ ಮತ್ತು ಆಪರೇಷನ್ ಸೆಂಟರ್ (ಎನ್‌ಸಿಒಸಿ) ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಅಂತರಾಷ್ಟ್ರೀಯ ವಾಯುಯಾನ ಮತ್ತು ಭೂಯಾನಕ್ಕೆ ಸಂಬಂಧಿಸಿದಂತೆ ಎ,ಬಿ,ಸಿ ಮೂರು ವಿಭಾಗಗಳನ್ನು ಮಾಡಿ, ಆಯಾ ಪಟ್ಟಿಗೆ ಸೇರಿದ ದೇಶಗಳಿಗೆ ಪ್ರಯಾಣದಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದೆ.
ಎ ಪಟ್ಟಿಗೆ ಸೇರಿದ ದೇಶಗಳ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್ -19 ಪರೀಕ್ಷೆಯಿಂದ ವಿನಾಯತಿ ನೀಡಲಾಗಿದೆ.

ಬಿ ಪಟ್ಟಿಗೆ ಸೇರಿದ ದೇಶಗಳ ಪ್ರಯಾಣಿಕರು ಪ್ರಯಾಣ ಮಾಡುವುದಕ್ಕೂ ಮುಂಚೆ ಅಂದರೆ 72 ಗಂಟೆಯೊಳಗೆ ಕೋವಿಡ್ ಪರೀಕ್ಷೆಗೊಳಪಟ್ಟ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದೆ.
ಸಿ ವಿಭಾಗದಲ್ಲಿರುವ ದೇಶಗಳಿಗೆ ಪ್ರವೇಶವನ್ನೇ ನಿರ್ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಪಟ್ಟಿಗೆ ಭಾರತ ಕೂಡ ಸೇರಿದೆ.
ಸಿ ವಿಭಾಗಕ್ಕೆ ಸೇರ್ಪಡೆಯಾದ ದೇಶಗಳೆಂದರೆ ಭಾರತ, ಇರಾನ್, ಬಾಂಗ್ಲಾದೇಶ, ಭೂತಾನ್, ಇಂಡೋನೇಷ್ಯಾ, ಇರಾಕ್, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ, ಫಿಲಿಪೈನ್ಸ್, ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಟುನೀಶಿಯಾ, ಬೊಲಿವಿಯಾ, ಚಿಲಿ, ಕೊಲಂಬಿಯಾ, ಕೋಸ್ಟರಿಕಾ, ಡೊಮಿನಿಕನ್ ರಿಪಬ್ಲಿಕ್, ಈಕ್ವೆಡಾರ್, ನಮೀಬಿಯಾ, ಪರಾಗ್ವೆ, ಪೆರು, ಟ್ರಿನಿಡಾದ್ & ಟೊಬಾಗೊ, ಉರುಗ್ವೆ ಸೇರಿವೆ.