ಇಸ್ಲಾಮಾಬಾದ್, : ಪಂಜಾಬ್‌ನ ಝೀಲಂ ಜಿಲ್ಲೆಯ ಲಿಲ್ಲಾ ಇಂಟರ್‌ಚೇಂಜ್ ಬಳಿ ಮೋಟಾರ್‌ಸೈಕಲ್‌ನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಪಾಕಿಸ್ತಾನ ಸೇನೆಯ ಮಾಜಿ ಬ್ರಿಗೇಡಿಯರ್ ಅಮೀರ್ ಹಮ್ಜಾ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಎಮರ್ಜೆನ್ಸಿ ಸರ್ವಿಸಸ್ ಅಕಾಡೆಮಿಯ ಮಾಜಿ ಡೈರೆಕ್ಟರ್ ಜನರಲ್ ಆಗಿರುವ ಹಮ್ಜಾ ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದೆ. ಮಂಗಳವಾರ ನಡೆದ ದಾಳಿಯಲ್ಲಿ ಹಮ್ಜಾ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಹಾಗೂ ಮಗಳು ತೀವ್ರವಾಗಿ ಗಾಯಗೊಂಡಿದ್ದಾರೆ.ಮೃತರ ಸಹೋದರ ನೀಡಿದ ದೂರಿನ ಮೇರೆಗೆ ಮಾಜಿ ಬ್ರಿಗೇಡಿಯರ್ (ನಿವೃತ್ತ) ಅಮೀರ್ ಹಮ್ಜಾ ಅವರ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರು ಅಪರಿಚಿತ ದಾಳಿಕೋರರ ವಿರುದ್ಧ ಜೇಲಂನ ಲಿಲ್ಲಾಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ನಾಲ್ಕು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಮತ್ತು ಕೊಲೆ ಯತ್ನದ ಆರೋಪಗಳನ್ನು ಪಟ್ಟಿ ಮಾಡಲಾಗಿದೆ ಎಂದು ಎಕ್ಸ್‌ಪ್ರೆಸ್ ನ್ಯೂಸ್ ವರದಿ ಮಾಡಿದೆ. ಮೃತರ ಸಹೋದರ, ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಅಯೂಬ್ ದೂರಿನಲ್ಲಿ ಈದ್ ಹಬ್ಬದ ಕಾರಣಕ್ಕೆ ತಮ್ಮ ಸಹೋದರ ಬ್ರಿಗೇಡಿಯರ್ (ನಿವೃತ್ತ) ಅಮೀರ್ ಹಮ್ಜಾ ಅವರ ಪತ್ನಿ ಸಫಿಯಾ ಮತ್ತು ಮಗಳು ಮುಸ್ಕಾನ್ ಅವರೊಂದಿಗೆ ತಮ್ಮ ಇನ್ನೊಬ್ಬ ಪುತ್ರಿಯನ್ನು ಭೇಟಿ ಮಾಡಲು ಕಾರಿನಲ್ಲಿ ತೆರಳುತ್ತಿದ್ದರು.
ಅಯೂಬ್ ತನ್ನ ಸೋದರಸಂಬಂಧಿಯೊಂದಿಗೆ ತಾನೂ ಮೋಟಾರ್‌ಸೈಕಲ್‌ನಲ್ಲಿ ತನ್ನ ಸಹೋದರನ ಹಿಂದೆ ಸ್ವಲ್ಪ ದೂರದಿಂದ ಹೋಗುತ್ತಿದ್ದೆ ಎಂದು ಹೇಳಿದರು. ಲಿಲ್ಲಲ್ ಇಂಟರ್‌ಚೇಂಜ್ ಬಳಿ ತನ್ನ ಸಹೋದರನ ವಾಹನವು ನಿಧಾನಗೊಂಡ ತಕ್ಷಣ, ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಎರಡು ಮೋಟಾರ್‌ಸೈಕಲ್‌ಗಳು ಕಾರನ್ನು ಸುತ್ತುವರೆದು ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದವು ಎಂದು ಅವರು ಹೇಳಿದರು. ದಾಳಿಕೋರರು ತಮ್ಮ ಸಹೋದರ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಸ್ಥಳದಿಂದ ಓಡಿ ಹೋದರು ಎಂದು ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.
ನಿವೃತ್ತ ಬ್ರಿಗೇಡಿಯರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಅವರ ಪತ್ನಿ ಮತ್ತು 21 ವರ್ಷದ ಮಗಳು ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಸಹಾಯವಾಣಿ 1122 ಮೂಲಗಳು ಖಚಿತಪಡಿಸಿವೆ.
ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ಥಾನದ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕರು ಭಾರತದ ಜಮ್ಮು ಮತ್ತು ಕಾಶ್ಮೀರದ ಸುಂಜ್ವಾನ್ ಸೇನಾ ಶಿಬಿರದ ಮೇಲೆ 2018 ರಲ್ಲಿ ನಡೆಸಿದ ದಾಳಿಯ ಪ್ರಮುಖ ಸಂಚುಕೋರರಲ್ಲಿ ಬ್ರಿಗೇಡಿಯರ್ ಅಮೀರ್ ಹಮ್ಜಾ (ನಿವೃತ್ತ) ಒಬ್ಬರು ಎಂದು ಹೇಳಲಾಗಿದೆ. ಫೆಬ್ರವರಿ 10, 2018 ರಂದು ನಡೆದ ದಾಳಿಯಲ್ಲಿ ಇಬ್ಬರು ಜೂನಿಯರ್ ಕಮಿಷನ್ಡ್ ಆಫೀಸರ್‌ಗಳು (ಜೆಸಿಒ) ಸೇರಿದಂತೆ ಐವರು ಭಾರತೀಯ ಸೇನೆಯ ಯೋಧರು ಹತರಾಗಿದ್ದರು. ದಾಳಿಯಲ್ಲಿ 14 ಸೈನಿಕರು, ಐವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ 20 ಜನರು ಗಾಯಗೊಂಡಿದ್ದರು.
ಪಾಕಿಸ್ಥಾನದಲ್ಲಿ ಅಪರಿಚಿತ ಬಂಧೂಕುಧಾರಿಗಳಿಂದ ಭಾರತ ವಿರೋಧೀ ಭಯೋತ್ಪಾದಕರ ಹತ್ಯೆ ನಡೆಯುತ್ತಿರುವುದು ದೇಶಕ್ಕೆ ಒಳ್ಳೆಯದೇ ಆಗುತ್ತಿದೆ ಮತ್ತು ದುಷ್ಟರಿಗೆ ತಕ್ಕ ಶಾಸ್ತಿ ಆಗುತ್ತಿದೆ ಎಂದು ಜನವಲಯದ ಮಾತಾಗಿದೆ.