ಕೃಷಿ ದೇಶದ ಮೂಲ ಕಸುಬು. ರೈತನ ಕೈ ಕೆಸಾರದರೆ ಜನರ ಬಾಯಿ ಮೊಸರು. ಉಳುವ ಯೋಗಿಯ ಶ್ರಮಕ್ಕೆ ಎಂತಹ ಕಾಣಿಕೆ ಕೊಟ್ಟರು ಅದು ಅಲ್ಪ. ಇದೇ ಕಾರಣಕ್ಕೆ ರೈತೇಜನ ಸುಖೀನೋ ಭವಂತು ಎಂದರೆ ತಪ್ಪಾಗಲಿಕ್ಕಿಲ್ಲ. ದೇಶದ ಬಹುಪಾಲು ಜನರು ರೈತಾಪಿಗಳನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಹಣ್ಣು ತರಕಾರಿ ಹೀಗೆ ದಿನ ನಿತ್ಯದ ಬದುಕಿನಲ್ಲಿ ರೈತರ ಪಾತ್ರ ದೊಡ್ಡದು. ಅಂಥಾ ರೈತರಿಗೆ ಸರ್ಕಾರ ಕೊಡಬಹುದಾದ ಕನಿಷ್ಠ ಗೌರವವೇ ಈ ಪದ್ಮ ಪ್ರಶಸ್ತಿಗಳು. ಇದೀಗ ಗಣ ರಾಜ್ಯದ ಅಂಗವಾಗಿ ರಾಜ್ಯದ ಐದು ಜನ ಕೃಷಿಕರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.
ಭವ್ಯ ಭಾರತದ ಗ್ರಾಮೀಣ ಭಾಗದಲ್ಲಿ ವಾಸಿಸುವ ಮಂದಿಗೆ ಕೃಷಿಯೇ ಜೀವಾಳ. ದಿನದ ಒಂದು ಹೊತ್ತು ಊಟ ತಿನ್ನಬೇಕಾದರೆ ಬೀಜ ಬಿತ್ತುವ ಕೈಗಳು ಮುಖ್ಯ. ಇಂದು ಗ್ರಾಮೀಣ ಪ್ರದೇಶದಲ್ಲಿ ಜೀವನ ಸಾಗಿಸುವ ಮಂದಿಗೆ ಕೃಷಿ ಚಟುವಟಿಕೆಗಳಿಲ್ಲದೆ ಬದುಕು ಕಷ್ಟ. ಹೊಸ ಹೊಸ ತಂತ್ರಜ್ಞಾನಗಳಿಂದ ಕೃಷಿ ಸಂಬಂಧಿತ ವಸ್ತುಗಳು ಆವಿಷ್ಕಾರವಾಗುತ್ತಲೇ ಇವೆ. ಗದ್ದೆಯಲ್ಲಿ ಊಳುವಿಕೆಗೂ ಟಿಲ್ಲರ್ , ಟ್ರಾಕ್ಟರ್ ಗಳೂ ಹೊಸ ವಿಧಾನಗಳಲ್ಲಿ ರೈತರಿಗೆ ಲಭಿಸುತ್ತಿದೆ.
ಕೃಷಿ ಕ್ಷೇತ್ರದಲ್ಲಿ ಏಳಿಗೆಯಾಗುತ್ತಿರುವ ಹಿನ್ನಲೆಯಲ್ಲಿ ರೈತರಿಗೆ ಆಧುನಿಕ ತಂತ್ರಜ್ಞಾನಗಳು ಕೈಗೆಟಕುವ ದರಗಳಲ್ಲಿ ಸಿಕ್ಕರೂ, ಪ್ರೋತ್ಸಾಹ ಧನಗಳು ಇಂದಿಗೂ ಕೆಲವು ರೈತರಿಗೆ ಸಿಗುತ್ತಿಲ್ಲ. ಅದೆಷ್ಟೋ ಜನ ರೈತರು ತಾವು ಬೆಳೆದ ಕೃಷಿಗಳಿಗೆ ನಿಗದಿತ ಬೆಲೆ ಸಿಗದೇ ನಷ್ಟ ಅನುಭವಿಸುತ್ತಿದ್ದು, ಸಾಲ ಮಾಡಿ, ಸಾಲ ತೀರಿಸಲಾಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ.
ಇದೀಗ ಒಟ್ಟು ಐದು ಮಂದಿ ಕೃಷಿ ಸಾಧಕರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಈ ಸಾಲಿನಲ್ಲಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ನಿವಾಸಿ ಅಬ್ದುಲ್ ಖಾದರ್ ನಡಕಟ್ಟಿನ್ ಕೂಡ ಒಬ್ಬರಾಗಿದ್ದಾರೆ. ಇವರು ಸಾಂಪ್ರದಾಯಿಕ ಕೃಷಿಗೆ ಆಧುನಿಕ ಸ್ಪರ್ಶದ ಟಚ್ ನೀಡುತ್ತಾ ನಾಲ್ಕು ದಶಕಗಳ ಹಿಂದೆ ಆಧುನಿಕ ಕೂರಿಗೆ ಆವಿಷ್ಕಾರ ಮಾಡಿ, ಉತ್ತರ ಕರ್ನಾಟಕದ ಮನೆ ಮಾತಾಗಿದ್ದಾರೆ.

ಬದುಕಿದ್ದಾಗ ಏನಾದರೂ ಸಾಧನೆ ಮಾಡಬೇಕು ಎನ್ನುವ ಇವರ ಛಲಕ್ಕೆ ಇಂದು ಇಂತಹ ಪ್ರಶಸ್ತಿ ದೊರಗಿರುವುದು ವಿಶೇಷವಾಗಿದ್ದು, 2004 ರಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಕೂರಿಗೆಗಳನ್ನು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ. ಕೂರಿಗೆಯೊಂದಿಗೆ ರೋಟೋವೇಟರ್, ಗೊಬ್ಬರ ಹಾಕುವ, ಬೀಜ ಬಿತ್ತುವ, ಎಡೆ ಹೊಡೆಯುವ ಯಂತ್ರ, ಔಷಧ ಸಿಂಪಡಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.