ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹಿನ್ನಲೆ, ಕರ್ನಾಟಕದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು, ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ ಅನುಗುಣವಾಗಿ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಆಕ್ಸಿಜನ್ ಕೊರತೆ ವಿಚಾರದ ಬಗ್ಗೆ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಿದ್ದೇನೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ. ನಿನ್ನೆಯಿಂದಲೇ ಈ ಬಗ್ಗೆ ಗಮನ ಹರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರ ದುರಂತದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಹೇಳಿದ್ದೆ. ಇದೀಗ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಇದಕ್ಕೆ ನನ್ನ ಸ್ವಾಗತವಿದೆ. ಘಟನೆಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು ಎಂಬುದಷ್ಟೇ ನನ್ನ ಉದ್ದೇಶ. ಬೆಂಗಳೂರು, ಕೋಲಾರ, ಬೆಳಗಾವಿ, ಯಾದಗಿರಿ, ಬೀದರ್, ಕಲಬುರ್ಗಿಯಲ್ಲಿಯೂ ಆಕ್ಸಿಜನ್ ಕೊರತೆಯಿಂದ ಕರೋನಾ ಸೋಂಕಿತರು ಮೃತರಾಗಿರುವ ವರದಿಗಳು ಬಂದಿವೆ. ಈ ಬಗ್ಗೆಯೂ ನ್ಯಾಯಾಂಗ ತನಿಖೆಯಾಗಬೇಕು ಎಂದು ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 812 ಟನ್ ಆಕ್ಸಿಜನ್ ಉತ್ಪಾದನೆ ಆಗುತ್ತದೆ. ಆದರೆ, ಕೇಂದ್ರ ಸರ್ಕಾರ ರಾಜ್ಯದ ಬಳಕೆಗೆ ನಿಗದಿ ಮಾಡಿರುವುದು 675 ಟನ್ ಮಾತ್ರ. 130 ಟನ್ ಒರಿಸ್ಸಾದಿಂದ ನಿಗದಿ ಮಾಡಲಾಗಿದೆ. ಆಕ್ಸಿಜನ್ ಟ್ಯಾಂಕರ್‍ಗಳು ಒರಿಸ್ಸಾದಿಂದ ನಮ್ಮ ರಾಜ್ಯಕ್ಕೆ ಬರಲು 48 ಗಂಟೆಗಳು ಬೇಕು. ಆಕ್ಸಿಜನ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಇದೂ ಒಂದು ಕಾರಣ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರುವುದು ಇಡೀ ದೇಶಕ್ಕೆ ಗೊತ್ತು. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಬೆಡ್ ಬ್ಯಾಕಿಂಗ್ ದಂಧೆ ತಡೆಯುವುದಕ್ಕಷ್ಟೇ ಸೀಮಿತ ಆಗದೆ, ಎಲ್ಲ ಸಂಸದರನ್ನು ಪ್ರಧಾನಿಯವರ ಬಳಿಗೆ ಕರೆದುಕೊಂಡು ಹೋಗಿ ಆಕ್ಸಿಜನ್ ಪೂರೈಕೆಗೆ ಒತ್ತಡ ಹೇರಲಿ, ಕೇರಳದಲ್ಲಿ ಅವರ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಉತ್ಪಾದನೆ ಮಾಡಿಕೊಳ್ಳುತ್ತಾರೆ. ನಮ್ಮಲ್ಲಿ ಏಕೆ ಹೀಗಿಲ್ಲ? ಎಂದು ಪ್ರಶ್ನಿಸಿದ್ದಾರೆ. ತಜ್ಞರ ವರದಿ ಪ್ರಕಾರ ಮೇ ತಿಂಗಳಲ್ಲಿ ಕರೋನಾ ಸೋಂಕು ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ಎಲ್ಲ ಜಿಲ್ಲೆಗಳಲ್ಲಿ ಆಕ್ಸಿಜನ್ ತಯಾರಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು. ಅನೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್, ರೆಮಿಡಿಸಿವರ್ ಇಂಜೆಕ್ಷನ್ ಇಲ್ಲ. ಜೊತೆಗೆ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಅವರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ