ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ನೇರಳೆ ಬಣ್ಣದ ಮಾರ್ಗದಲ್ಲಿ ಇಂದಿನಿಂದ ಸಂಚಾರ ಆರಂಭವಾಗಿದೆ
ಕೆ ಆರ್ ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳಲ್ಲಿ ಇಂದು ಬೆಳಗ್ಗೆಯಿಂದಲೇ ಮೆಟ್ರೋ ಸಂಚಾರ ಶುರುವಾಗಿದೆ. ಈ ಮೂಲಕ ನಮ್ಮ ಮೆಟ್ರೋ ಸೇವೆಯ ವ್ಯಾಪ್ತಿ ಹೆಚ್ಚಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸೇವೆ ಚಾಲನೆಗೆ ಸರ್ಕಾರದ ಯಾವುದೇ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ, ಸರಳವಾಗಿ ಈ ಮಾರ್ಗದಲ್ಲಿ ಸೇವೆ ಆರಂಭಿಸಲಾಗಿದೆ. ಸರ್ಕಾರದ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳಿಗೆ ಕಾಯದೇ ಮೆಟ್ರೋ ನೇರಳೆ ಮಾರ್ಗದಲ್ಲಿ ಸೇವೆಯನ್ನು ಶುರು ಮಾಡುವಂತೆ ಬಿಎಂಆರ್ಸಿಎಲ್ ಸೂಚನೆ ನೀಡಿತ್ತು.
ಸಂಸದ ತೇಜಸ್ವಿ ಸೂರ್ಯ ಆಗ್ರಹ: ಕೆ.ಆರ್.ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗ ಪ್ರಾರಂಭಿಸಲು ಸರ್ಕಾರ ವಿಳಂಬ ಮಾಡುತ್ತಿದ್ದು, ಆದಷ್ಟು ಬೇಗ ಚಾಲನೆ ನೀಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಆಗ್ರಹಿಸಿದ್ದರು. ಬೆಂಗಳೂರು ಮೆಟ್ರೋದಲ್ಲಿ ಪ್ರತಿದಿನ ಸುಮಾರು 5 ರಿಂದ 6 ಲಕ್ಷ ಜನ ಓಡಾಡುತ್ತಾರೆ. ಬೈಯಪ್ಪನಹಳ್ಳಿ-ಕೆ ಆರ್ ಪುರ ಮಾರ್ಗಕ್ಕೆ ಚಾಲನೆ ಸಿಕ್ಕರೆ ಸುಮಾರು 50-60 ಪ್ರತಿಶತದಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದರು.