ಇನ್ನು ವಸಂತಗಳೆಷ್ಟು ದಾಟಿದರೂ ಅಪ್ಪು ಜೀವಂತವಾಗಿರಲಿದ್ದಾರೆ. ವಿಧಿಯ ಬರಹವನ್ನೇ ಯುವರತ್ನ ಪುನೀತ್ ರಾಜ್ ಕುಮಾರ್ ತನ್ನ ಸಾವಿನ ಬಳಿಕ ತಿದ್ದಿ ಬರೆದಂತಿದೆ. ಹೌದು, ಅಪ್ಪು ಸಾವಿನ ಬಳಿಕ ತನ್ನ ಕಣ್ಣು ನಾಲ್ಕು ಜನರ ಬದುಕಿಗೆ ಬೆಳಕಾಗಲಿ ಎಂದು ಕೊಟ್ಟು ಹೋದರು. ಆದರೀಗ ಅದೇ ಅಪ್ಪುವಿನ ಕಣ್ಣು ನಾಲ್ಕಲ್ಲ ಹತ್ತಕ್ಕೂ ಹೆಚ್ಚು ಜನರ ಬದುಕಿಗೆ ಬೆಳಕು ಸುರಿಯಲಿದೆ. ಅಂಥದ್ದೊಂದು ಅಪರೂಪದ ಪ್ರಯತ್ನಕ್ಕೆ ವೈದ್ಯ ಲೋಕ ಮುಂದಾಗಿದೆ.
14 ಅಂಧರಿಗೆ ಬೆಳಕು ನೀಡಲಿವೆ ಅಪ್ಪು ಕಂಗಳು.!!
ಡಾ.ರಾಜ್ಕುಮಾರ್ ಅಂದರೆ ಕರುನಾಡ ಕಂಡ ಬಂಗಾರದ ಮನುಷ್ಯ. ತಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಚಿತ್ರಗಳು ಹಾಗೂ ಸರಳ ವ್ಯಕ್ತಿತ್ವದಿಂದಲೇ ಕರುನಾಡ ಕಣ್ಮಣಿಯಾದರು. ನಿಧನದ ಬಳಿಕ ಕಣ್ಣು ಕೊಟ್ಟು ಕಣ್ಣಪ್ಪನಾದರು. ಅಪ್ಪಾಜಿಯಂತೆ ಅಪ್ಪು ಕೂಡ ಕಣ್ಣು ನೀಡಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ವರು ಅಂಧರ ಬಾಳಿಗೆ ಬೆಳಕಾದರು.
ಅಪ್ಪು ಅವರ ಎರಡು ಕಣ್ಣುಗಳು,4 ಜನ ಅಂಧರ ಬಾಳಿಗೆ ಬೆಳಕು ನೀಡಿದೆ ಅನ್ನೋ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಅದಕ್ಕಿಂತ ದೊಡ್ಡ ಸುದ್ದಿಯೊಂದು ಬಂದಿದೆ. ಇದು ಅಪ್ಪು ಅಭಿಮಾನಿಗಳಷ್ಟೇ ಅಲ್ಲ, ಇಡೀ ಕರುನಾಡೇ ಹೆಮ್ಮೆಪಡಬೇಕಾದ ಸಂಗತಿ..

ದೇಶದಲ್ಲೇ ಮೊದಲ ಸಲ ವಿನೂತನ ಪ್ರಯೋಗಕ್ಕೆ ಮುನ್ನುಡಿ.!!
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂತಹದ್ದೊಂದು ವಿನೂತನ ಪ್ರಯತ್ನ ನಡೆಯುತ್ತಿದೆ. ಅದು ಕರುನಾಡಿನ ರಾಜಕುಮಾರ ಅಪ್ಪು ಅವರಿಂದಲೇ ಆರಂಭವಾಗುತ್ತಿದೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಒಂದೇ ಕಣ್ಣಿನ ವಿವಿಧ ಭಾಗಗಳನ್ನು ವಿವಿಧ ಮಂದಿಗೆ ನೀಡುವ ಹೊಸ ಪ್ರಯತ್ನ ಮಾಡಲು ನಾರಾಯಣ ನೇತ್ರಾಲಯದ ತಜ್ಞರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ಅವರ ಕಣ್ಣುಗಳಿಂದ ಇನ್ನೂ 10 ಅಂಧರಿಗೆ ದೃಷ್ಟಿ ಸಿಗಲಿದೆ. ಮುಂದಿನ10 ದಿನಗಳಲ್ಲಿ ಕನಿಷ್ಟ 10 ಅಂಧರಿಗೆ ದೃಷ್ಟಿ ನೀಡುವ ವಿನೂತನ ಆಪರೇಷನ್ ನಡೆಸಲು ಸಜ್ಜಾಗಿದ್ದಾರೆ ವೈದ್ಯರು. ಇದು ಯಶಸ್ವಿಯಾದರೆ ರಾಜರತ್ನ ಅಪ್ಪು ಮತ್ತೊಂದು ವಿನೂತನ ದಾಖಲೆಯ ಪುಟ ಸೇರಲಿದ್ದಾರೆ.
ಅಪ್ಪು ಸಾವಿನ ಬಳಿಕ 6 ಸಾವಿರ ನೋಂದಣೆ, 78 ಜನರಿಂದ ನೇತ್ರದಾನ !
ಪುನೀತ್ ಅವರು ಬರೀ ನಟರಾಗಿರಲಿಲ್ಲ. ಅವರ ಸಮಾಜ ಸೇವೆ, ಅವರ ಸರಳ ಆದರ್ಶ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅದನ್ನ ಇಡೀ ಕರುನಾಡು ಅನುಸರಿಸುತ್ತಿದ್ದು, ಈ ಮೂಲಕ ಅಪ್ಪು ಅವರನ್ನ ಜೀವಂತವಾಗಿಸಿದ್ದಾರೆ.

ಪುನೀತ್ ಅವರನ್ನೇ ಸ್ಫೂರ್ತಿಯಾಗಿಸಿಕೊಂಡು, ಯುವಕರು ನೇತ್ರದಾನ ಮಾಡಲು ಮುಂದೆ ಬರ್ತಿದ್ದಾರೆ. ಅಕ್ಟೋಬರ್ 29 ರಿಂದ ಇಲ್ಲಿಯವರೆಗೆ ದಾಖಲೆಯ 6 ಸಾವಿರ ಜನ ನೇತ್ರದಾನಕ್ಕೆ ನೋಂದಣಿ ಮಾಡಿದ್ರೆ, ಭರ್ತಿ 78 ಜನ ನೇತ್ರದಾನ ಮಾಡಿದ್ದಾರಂತೆ.
ತಮ್ಮ ಸಿನಿಮಾಗಳ ಮೂಲಕ ಯುವಪೀಳಿಗೆಗೆ ಸ್ಫೂರ್ತಿ ತುಂಬಿದ್ದ ಪುನೀತ್, ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಇಡೀ ಕರುನಾಡಿನ ಕಣ್ಮಣಿಯಾಗಿದ್ದಾರೆ. ಸಾವಿನ ಬಳಿಕ ಅಪ್ಪಾಜಿಯಂತೆ ಕಣ್ಣು ಕೊಟ್ಟು ಎಲ್ಲರಿಗೂ ಸ್ಫೂರ್ತಿಯಾಗಿದ್ದ ಅಪ್ಪು, 14 ಜನ ಅಂಧರ ಬಾಳಿಗೆ ಬೆಳಕಾಗುವ ಮೂಲಕ ಚಿರಸ್ಥಾಯಿಯಾಗಿದ್ದಾರೆ. ನಿಜಕ್ಕೂ ಅಪ್ಪು ಅಜರಾಮರ ಎನ್ನುವುದು ಸುಳ್ಳಲ್ಲ. ಅಭಿಮಾನಿಗಳ ಮೂಲಕ ಅಪ್ಪು ಮುಂದಕ್ಕೆ ಈ ಜಗತ್ತು ನೋಡಲಿದ್ದಾರೆ ಎಂಬುವುದು ವಾಸ್ತವ.