ಬೆಂಗಳೂರು: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಆರೋಪ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆ ಹಿರೇಹಡಗಲಿ ಮಹಾಸಂಸ್ಥಾನ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್ 16ಕ್ಕೆ ಪ್ರಕಟಿಸುವುದಾಗಿ ಬೆಂಗಳೂರಿನ ನ್ಯಾಯಾಲಯವು ಹೇಳಿದೆ.
ಹಾಲಶ್ರೀ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ವಾದ – ಪ್ರತಿವಾದ ಆಲಿಸಿದ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಟಿ ಗೋವಿಂದಯ್ಯ ಬುಧವಾರ ಆದೇಶ ಕಾಯ್ದಿರಿಸಿದರು. ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್, ತಡವಾಗಿ ಪ್ರಕರಣವಾಗಿ ದಾಖಲಿಸಲಾಗಿದೆ. ಅಲ್ಲದೇ, ಬಹುತೇಕ ಎಲ್ಲ ಹಣವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರ್ಜಿದಾರರ ವಿರುದ್ಧ ದಾಖಲಿಸಿರುವ ಸೆಕ್ಷನ್ಗಳು ಇಲ್ಲಿ ಅನ್ವಯಿಸುವುದಿಲ್ಲ ಎಂದು ವಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ಅಭಿಯೋಜಕರು, ಅರ್ಜಿದಾರರ ವಿಚಾರಣೆ ನಡೆಯುತ್ತಿದೆ. ಇನ್ನಷ್ಟೇ ಆರೋಪಪಟ್ಟಿ ಸಲ್ಲಿಕೆಯಾಗಬೇಕಿದೆ. ಅರ್ಜಿದಾರರು ಸ್ವಾಮೀಜಿಯಾಗಿದ್ದಾರೆ. ಇಂಥ ಪ್ರಕರಣದಲ್ಲಿ ಸಿಲುಕಿರುವುದರಿಂದ ಜಾಮೀನು ನೀಡಿದಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎಂದು ವಿವರಿಸಿದರು.