ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಕಾಶ್ಮೀರಿ ಪಂಡಿತರ ವಿಚಾರವಾಗಿ ಆಡಳಿತರೂಢ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತಂದು ಅವರಿಗೆ ಪುನರ್ವಸತಿ ಕಲ್ಪಿಸುವ ಬದಲು ‘ದಿ ಕಾಶ್ಮೀರ್ ಫೈಲ್ಸ್’ ಎಂಬ ಸಿನಿಮಾ ತೋರಿಸಿ ಉತ್ತರ ಭಾರತದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ವಿಶೇಷ ಜಮ್ಮು ಕಾಶ್ಮೀರ ಬಜೆಟ್ ಕುರಿತ ಚರ್ಚೆಯ ವೇಳೆ ಈ ವಿಚಾರ ಪ್ರಸ್ತಾಪಿಸಲಾಗಿದೆ. ಬಿಜೆಪಿಯ ಒಡೆದು ಆಳುವ ರಾಜನೀತಿಯನ್ನು ಸಿನಿಮಾ ಮೂಲಕ ಜನರಲ್ಲಿ ಬಿತ್ತರಿಸಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಚರ್ಚೆಯ ಆರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ವಿವೇಕ್ ತನ್ಖಾ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ ಬಳಿಕ, ಅಲ್ಲಿ ರಾಜ್ಯ ಸರ್ಕಾರವೇ ಇಲ್ಲದಂತಾಗಿದೆ. ಜನರ ಸ್ಥಳೀಓಯ ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದೆ.ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯ ಯತ್ನಗಳು ನಡೆಯಬೇಕಿದೆ ಎಂದರು.
“ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಎಷ್ಟು ಜನ ಪಂಡಿತರ ಕಾಶ್ಮೀರಕ್ಕೆ ವಾಪಸ್ಸಾಗಿದ್ದಾರೆ? ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ನಾನು ಖಾಸಗಿ ಮಸೂದೆಯನ್ನು ಮಂಡಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.
ಇವರೊಂದಿಗೆ ದನಿಗೂಡಿಸಿದ ಸಮಾಜವಾದಿ ಪಕ್ಷದ ಸದಸ್ಯೆ ರಾಮ್ ಗೋಪಾಲ್, ಕೇಂದ್ರ ಸರ್ಕಾರವು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಕಾಶ್ಮೀರ್ ಫೈಲ್ಸ್ ಸಿನಿಮಾಗಿಂತಲೂ ಬಿಜೆಪಿ ನಾಯಕರ ಭಾಷಣಗಳು ಹೆಚ್ಚು ಅಪಾಯಕಾರಿ, ಎಂದಿದ್ದಾರೆ.

ಆರ್ ಜೆ ಡಿ ಸಂಸದ ಮನೋಜ್ ಝಾ ಮಾತನಾಡಿ, ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯದಂತೆಯೇ ಭಾರತವು ಮತ್ತಷ್ಟು ಗಾಯಗಳನ್ನು ನೊಡಿದೆ. ದೇಶದ ವಿಭಜನೆ, 1984ರ ಸಿಖ್ಖ್ ಮಾರಣಹೋಮ,2002ರ ಗೋಧ್ರಾ ದಂಗೆಯಂತಹ ಗಾಯಗಳನ್ನು ಭಾರತ ಕಂಡಿದೆ. ಈ ಗಾಯಗಳನ್ನೇ ಮತ್ತೆ ಮತ್ತೆ ನೆನಪಿಸುವುದರಿಂದ ಆ ಗಾಐಗಳು ಗುಣವಾಗುವುದಿಲ್ಲ, ನೊಂದವರಿಗೆ ನ್ಯಾಯ ಸಿಗುವುದಿಲ್ಲ, ಎಂದು ಹೇಳಿದ್ದಾರೆ.
ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ ಅವರು “ಗೃಹ ಇಲಾಖೆಯ ಲಿಖಿತ ಉತ್ತರದ ಪ್ರಕಾರ ಕೇವಲ 17% ಕಾಶ್ಮೀರಿ ಪಂಡಿತರಿಗಾಗಿ ಮನೆಗಳನ್ನು ನಿರ್ಮಿಸಲಾಗಿದೆ. ಸರ್ಕಾರ ಅವರಿಗೆ ನ್ಯಾಯ ಒದಗಿಸುವುದು ಬಿಡಿ, ಕನಿಷ್ಟ ಸವಲತ್ತುಗಳನ್ನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಚರ್ಚೆಯಲ್ಲಿ ಭಾಗವಹಿಸಿ ತೃಣಮೂಲ ಕಾಂಗ್ರೆಸ್ ಸಂಸದ ನದೀಮುಲ್ ಹಕ್, ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರವನ್ನು ಒಂದು ಪೊಲೀಸ್ ರಾಜ್ಯವನ್ನಾಗಿಸಿದೆ.
2019ರ ಬಳಿಕ ಕಾಶ್ಮೀರದಲ್ಲಿ ಹಲವು ಬಾರಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ತಮಗೆ ಬೇಕಾದ ನರೇಟಿವ್ ಗಳನ್ನು ಜನರ ಮುಂದಿಡುವ ಕೆಲಸವನ್ನು ಮಾತ್ರ ಕೇಂದ್ರ ಸರ್ಕಾರ ಮಾಡಿದೆ, ಎಂದು ಆರೋಪಿಸಿದ್ದಾರೆ.






