ಕಳೆದ ಒಂದು ವಾರದಿಂದ ರಾಜ್ಯ ರಾಜಕೀಯ ಚರ್ಚೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ ಎಸ್) ಮತ್ತು ಅದರ ಹಿಂದುತ್ವ ಅಜೆಂಡಾದ ಸುತ್ತ ಗಿರಕಿಹೊಡೆಯತೊಡಗಿವೆ.
ಇಬ್ಬರು ಮಾಜಿ ಮುಖ್ಯಮಂತ್ರಿಗಳು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಅವರಲ್ಲಿ ಒಬ್ಬರು, “ಆರ್ ಎಸ್ ಎಸ್ ದೇಶದ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ಮನುಸ್ಮೃತಿ ಕಾಲಕ್ಕೆ ದೇಶವನ್ನು ಕೊಂಡೊಯ್ಯಲು ಆರ್ ಎಸ್ ಎಸ್ ಪ್ರಯತ್ನಿಸುತ್ತಿದೆ. ಇಡೀ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಅವರ ಅಜೆಂಡಾ” ಎಂದು ಹೇಳುವ ಮೂಲಕ, “ಇದನ್ನೆಲ್ಲಾ ದೇಶದ ಯುವಕರು ಅರ್ಥಮಾಡಿಕೊಳ್ಳದೇ ಇದ್ದರೆ ದೇಶಕ್ಕೆ ಗಂಡಾತರ ಕಾದಿದೆ” ಎಂದಿದ್ದಾರೆ.
ಮತ್ತೊಬ್ಬರು, “ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ಯಾರಿಗೆ ನಂಬಿಕೆ ಇಲ್ಲವೋ ಅವರನ್ನು ತಾಲಿಬಾನಿಗಳೆಂದು ಕರೆಯುತ್ತಾರೆ. ಬಿಜೆಪಿ, ಆರ್ ಎಸ್ ಎಸ್ ನವರಿಗೆ ದೇಶದ ಪ್ರಜಾಪ್ರಭುತ್ವ ಮೇಲೆ ನಂಬಿಕೆಯಿಲ್ಲ. ಹಾಗಾಗಿ ಅವರು ಕೂಡ ತಾಲಿಬಾನ್ ಸಂಸ್ಕೃತಿಯವರು” ಎಂದಿದ್ದಾರೆ. ಹಾಗೇ, “ಆರ್ ಎಸ್ ಎಸ್, ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ. ತಾಲಿಬಾನಿಗಳಿಗೆ ಹೇಗೆ ಮನುಷ್ಯತ್ವ, ಸಂಸ್ಕೃತಿ ಇಲ್ಲವೋ ಅದೇ ರೀತಿ ಆರ್ ಎಸ್ ಎಸ್, ಬಿಜೆಪಿಯವರು ಕೂಡ ತಾಲಿಬಾನಿಗಳಂತೆ ವರ್ತಿಸುತ್ತಾರೆ” ಎಂದಿದ್ದಾರೆ.
ಈ ಎರಡು ಆರಂಭಿಕ ಹೇಳಿಕೆಗಳ ಬಳಿಕ ಆ ಕುರಿತ ಪರ- ವಿರೋಧದ ಸರಣಿ ಹೇಳಿಕೆ-ಪ್ರತಿಹೇಳಿಕೆಗಳೇ ಕಳೆದ ಒಂದು ವಾರದಿಂದ ಸದ್ದು ಮಾಡುತ್ತಿವೆ.
ಆದರೆ, ಈ ಇಬ್ಬರು ನಾಯಕರು ಇದೀಗ ದಿಢೀರ್ ಜ್ಞಾನೋದಯವಾದವರಂತೆ ‘ಆರ್ ಎಸ್ ಎಸ್ ಅಪಾಯಕಾರಿ’ ಎನ್ನುತ್ತಿರುವುದು ನಿಜವೇ ಆಗಿದ್ದರೆ, ರಾಜ್ಯದಲ್ಲಿ ಬಿಜೆಪಿ, ಭಜರಂಗದಳ ಮತ್ತಿತರ ಸಂಘ ಪರಿವಾರ ಸಂಘಟನೆಗಳು ಮತ್ತು ಸ್ವತಃ ಆರ್ ಎಸ್ ಎಸ್ ಸಂಘಟನಾತ್ಮಕವಾಗಿ ಶಕ್ತಿ ವರ್ದಿಸಿಕೊಂಡ ಕಳೆದ ಒಂದೂವರೆ ದಶಕದ ಅವಧಿಯಲ್ಲೇ ಮುಖ್ಯಮಂತ್ರಿಗಳಾಗಿ ರಾಜ್ಯದ ಗುಪ್ತಚರ ಮತ್ತು ಪೊಲೀಸ್ ಇಲಾಖೆಗಳ ಮೇಲೆ ಸಂಪೂರ್ಣ ಅಧಿಕಾರ ಹೊಂದಿದ್ದ ಈ ಇಬ್ಬರು ನಾಯಕರು ಯಾಕೆ ಆ ಬಗ್ಗೆ ಕ್ರಮಕೈಗೊಳ್ಳಲಿಲ್ಲ? ಎಂಬ ಪ್ರಶ್ನೆ ಏಳುವುದು ಸಹಜ.
ಏಕೆಂದರೆ, ಹದಿನೈದು ವರ್ಷಗಳ ಹಿಂದೆ ಬಹುತೇಕ ಕರಾವಳಿ ಮತ್ತು ಮಡಿಕೇರಿ- ಚಿಕ್ಕಮಗಳೂರು ವ್ಯಾಪ್ತಿಗೆ ಸೀಮಿತವಾಗಿದ್ದ ಸಂಘ ಮತ್ತು ಅದರ ಪರಿವಾರಗಳ ಕಾರ್ಯಚಟುವಟಿಕೆಗಳು ಇದೀಗ ರಾಜ್ಯದ ಮೂಲೆಮೂಲೆಗೂ ವಿಸ್ತರಿಸಿವೆ. ಅದರಲ್ಲೂ ಭಜರಂಗದಳ, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ ಮುಂತಾದ ಪರಿವಾರ ಸಂಘಟನೆಗಳು ವ್ಯಾಪಕವಾಗಿ ಹರಡಿದ್ದು, ಕಳೆದ ಹದಿನೈದು ವರ್ಷಗಳ ಅವಧಿಯಲ್ಲೇ. ಆ ಮೊದಲು ಬಹುತೇಕ ಕರಾವಳಿ ಮತ್ತು ಮಲೆನಾಡಿನ ಒಂದೆರಡು ಜಿಲ್ಲೆಗಳಿಗೆ ಸೀಮಿತವಾಗಿದ್ದ ಈ ಕಟ್ಟರ್ ಹಿಂದುತ್ವವಾದಿ ಸಂಘಟನೆಗಳು ಇದೀಗ ಚಾಮರಾಜನಗರದಿಂದ ಬೀದರ್ ವರೆಗೆ ವಿಸ್ತರಿಸಿವೆ.ಇನ್ನು ಆರ್ ಎಸ್ ಎಸ್ ಸಂಘಟನೆಯ ಚಟುವಟಿಕೆಗಳಂತೂ ಸಮಾಜದ ಯಾವ ರಂಗವನ್ನೂ ಬಿಟ್ಟಿಲ್ಲ. ಈ ಮೊದಲು ಕೇವಲ ಧರ್ಮ ಮತ್ತು ದೇಶಭಕ್ತಿ ಮುಂತಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯಕ್ಕೆ ಸೀಮಿತವಾಗಿ ಶಾಖೆ, ಬೈಠಕ್ ಚಟುವಟಿಕೆ ನಡೆಸುತ್ತಿದ್ದ ಸಂಘ, ಈಗ ಶಿಕ್ಷಣ, ಆರೋಗ್ಯ, ಕೃಷಿ, ಕಾನೂನು, ಪರಿಸರ, ಪತ್ರಿಕೋದ್ಯಮ, ಉದ್ಯಮ, ಹಣಕಾಸು ಮುಂತಾದ ವಲಯಗಳಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ತೊಡಗಿಸಿಕೊಂಡಿದೆ.
ಅದರಲ್ಲೂ ಹದಿನೈದು ವರ್ಷಗಳ ಹಿಂದೆ ತೀವ್ರ ನಕ್ಸಲ್ ಚಟುವಟಿಕೆಯ ಪ್ರದೇಶವಾಗಿದ್ದ ಮಲೆನಾಡಿನಲ್ಲಿ ಆರ್ ಎಸ್ ಎಸ್ ತನ್ನ ಸಂಘಟನೆಯನ್ನು ವಿಸ್ತರಿಸಿದ ಸಂಗತಿಯಂತೂ ಕಳೆದ ಒಂದೂವರೆ ದಶಕದಲ್ಲಿ ಸಂಘ, ರಾಜ್ಯದಲ್ಲಿ ಯಾವ ಮಟ್ಟಿಗೆ ತನ್ನ ಜಾಲ ವಿಸ್ತರಿಸಿದೆ ಎಂಬುದಕ್ಕೆ ಅತ್ಯುತ್ತಮ ನಿದರ್ಶನ.

ಒಂದು ಅಧ್ಯಯನದ ಪ್ರಕಾರ, 2007-08ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಹೊತ್ತಿಗೆ ನಕ್ಸಲ್ ಕಾಡರ್ ನೇಮಕಾತಿಯ ಮೂಲಗಳಾಗಿದ್ದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳ ವ್ಯಾಪ್ತಿಯ ಕಾಡಿನ ಹಾಡಿಗಳ ಗಿರಿಜನ, ಬುಡಕಟ್ಟು ಸಮುದಾಯ, ದಲಿತರ ಕೇರಿಗಳಲ್ಲಿ ‘ಲಾಲ್ ಸಲಾಮ್’ ಬದಲಿಗೆ ಈಗ, ‘ನಮಸ್ತೆ ಸದಾವತ್ಸಲೆ’ ಕೇಳುತ್ತಿದೆ. ಯಾವ ಜನಪ್ರತಿನಿಧಿಯೂ, ಯಾವ ಸರ್ಕಾರಿ ಸಿಬ್ಬಂದಿಯೂ ತಲುಪದ ಕಾಡೊಳಗಿನ ಹಾಡಿಗಳಿಗೂ ಸಂಘದ ಕಾರ್ಯಕರ್ತರು ತಲುಪಿದ್ದಾರೆ ಮತ್ತು ಅಲ್ಲಿನ ಕಡುಬಡ ಮಕ್ಕಳ ಶಿಕ್ಷಣ, ವಿದ್ಯಾವಂತ ಯುವಕರಿಗೆ ಉದ್ಯೋಗ, ಕೂಲಿಕಾರ್ಮಿಕರಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸುವುದು ಮುಂತಾದ ನೆರವಿನ ಮೂಲಕ, ಆ ದುರ್ಬಲ ವರ್ಗಗಳ ಶೋಷಿತ ಸಮುದಾಯಗಳು ನಕ್ಸಲಿಸಂನತ್ತ ವಾಲದಂತೆ, ವ್ಯವಸ್ಥೆಯ ವಿರುದ್ಧ ಬಂಡೇಳದಂತೆ ತಡೆಯುವ ವ್ಯವಸ್ಥಿತ ಕಾರ್ಯಾಚರಣೆಗಳು ನಡೆಯುತ್ತಿವೆ. ಹಾಗಾಗಿ ಕೇವಲ ಹತ್ತು ವರ್ಷದಲ್ಲಿ ಮಲೆನಾಡಿನ ವಿವಿಧ ಬುಡಕಟ್ಟು ಮತ್ತು ದಲಿತ ಹಾಡಿಗಳಲ್ಲಿ ಶಾಖಾ ವರ್ಗ ಚಟುವಟಿಕೆಗಳು ಸಾಮಾನ್ಯವಾಗಿವೆ.
ಆ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಬಿರುಸಾಗಿದ್ದಾಗಲೇ, ವಿವಿಧ ಶೈಕ್ಷಣಿಕ ಮತ್ತು ಹಣಕಾಸು ನೆರವಿನ ಮೂಲಕ ಆದಿವಾಸಿ-ಬುಡಕಟ್ಟು ಸಮುದಾಯಗಳ ವಿಶ್ವಾಸ ಗಳಿಸುವಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ಯಶಸ್ವಿಯಾದ ಪರಿಣಾಮ, ಇಂದು ಸಕಲೇಶಪುರದಿಂದ ಆರಂಭವಾಗಿ ಮೂಡಿಗೆರೆ, ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಶಿರಸಿ, ಯಲ್ಲಾಪುರ, ಜೋಯಿಡಾ, ಖಾನಾಪುರದವರೆಗೆ ದಟ್ಟ ಮಲೆನಾಡಿನ ಕಾಡುಗಳಲ್ಲಿ ‘ಕೇಸರಿ’ ಕಣಕಣದಲ್ಲೂ ಬೆರೆತುಹೋದಂತಿದೆ. ನಕ್ಸಲಿಸಂ ಮಲೆನಾಡಿನಲ್ಲಿ ವಿಸ್ತರಿಸುತ್ತಿದ್ದ ಹೊತ್ತಿನಲ್ಲೇ ಹಾಡಿಗಳ ಯುವಕ-ಯುವತಿಯರಿಗೆ ಹಿಂದುತ್ವವಾದಿ, ರಾಷ್ಟ್ರೀಯವಾದಿ ವಿಚಾರಧಾರೆಯ ಮೂಲಕ ಪರ್ಯಾಯವೊಂದನ್ನು ನೀಡಬೇಕು ಮತ್ತು ವಿಶೇಷವಾಗಿ ಶಾಲಾ ಮಕ್ಕಳಿಗೆ ಕಲಿಕೆಯ ಹಂತದಲ್ಲೇ ಸಂಘವನ್ನು ಪರಿಚಯಿಸಬೇಕು ಎಂಬ ನಿರ್ದಿಷ್ಟ ಯೋಜನೆಯ ಮೂಲಕವೇ ಆರ್ ಎಸ್ ಎಸ್ ಅಂತಹ ಬದಲಾವಣೆಗೆ ಯತ್ನಿಸಿತ್ತು. ಅದೀಗ ಒಂದೂವರೆ ದಶಕದಲ್ಲಿ ನಿರೀಕ್ಷೆಗೂ ಮೀರಿ ಫಲಕೊಟ್ಟಿದ್ದು, ‘ಕ್ಯಾಚ್ ದೆಮ್ ಯಂಗ್’ ಎಂಬ ಮಾತಿನಂತೆ ಪ್ರಾಥಮಿಕ ಶಾಲಾ ಹಂತದಿಂದಲೇ ಆದಿವಾಸಿ-ಬುಡಕಟ್ಟು-ದಲಿತ ಮಕ್ಕಳು ಶಾಖೆಗಳ ಭಾಗವಾಗಿದ್ದಾರೆ!
ಇದು ಮಲೆನಾಡಿನ ಕೆಲವೇ ಕೆಲವು ತಾಲೂಕುಗಳ ವ್ಯಾಪ್ತಿಯ ಆದಿವಾಸಿ-ಬುಡಕಟ್ಟು ಮತ್ತು ದಲಿತ ಹಾಡಿ-ಕೇರಿಗಳಲ್ಲಿ ಸಂಘ ವ್ಯಾಪಿಸಿರುವ ರೀತಿ. ಇನ್ನು ಈ ವ್ಯಾಪ್ತಿಯ ಇತರೆ ಸಮುದಾಯಗಳಲ್ಲಿ ಸಂಘ ಮತ್ತು ಸಂಘದ ಪರಿವಾರ ಸಂಘಟನೆಗಳು ವಿಸ್ತರಿಸಿರುವ ರೀತಿ ಹಲವು ಬಗೆಯದು. ಶಾಲಾ-ಕಾಲೇಜು ಮಕ್ಕಳ ನಡುವೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮಗಳು, ಶಾಖಾ ಚಟುವಟಿಕೆಗಳ ಮೂಲಕ ಅಂತಹ ವಿಸ್ತರಣೆ ನಡೆದಿದ್ದರೆ, ನಿರುದ್ಯೋಗಿ, ಅರೆಬರೆ ಶಿಕ್ಷಿತ ಯುವಕರ ನಡುವೆ ಭಜರಂಗ ದಳ, ಶ್ರೀರಾಮ ಸೇನೆಯಂತಹ ಸಂಘಟನೆಗಳ ಮೂಲಕ ವಿಸ್ತರಣೆ ನಡೆದಿದೆ.

ಇನ್ನು ಸಾವಯವ ಕೃಷಿ ಪರಿವಾರ, ಕೃಷಿ ಪ್ರಯೋಗ ಪರಿವಾರ, ಗೋ ಸಂರಕ್ಷಣೆ ಅಭಿಯಾನ, ಪರಿಸರ ಪರಿವಾರ, ಸೇವಾ ಭಾರತಿಯ ನೂರಾರು ಅಂಗಸಂಸ್ಥೆಗಳು, ವಿದ್ಯಾಭಾರತಿ, ಸಂವಾದ ಮುಂತಾದ ಬೇರೆ ಬೇರೆ ಪರಿವಾರ ಸಂಘಟನೆಗಳು ಕೃಷಿ, ಗ್ರಾಮೀಣ ಬದುಕು, ಶಿಕ್ಷಣ, ಮಾಧ್ಯಮ ರಂಗಗಳಲ್ಲಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚುರುಕಾಗಿವೆ. ಆ ಮೂಲಕ ಸಂಘದ ನೆಲೆಯನ್ನು ಗಣನೀಯವಾಗಿ ವಿಸ್ತರಿಸಿವೆ.
ಆದರೆ, ಎರಡು ಅವಧಿಗೆ ಮುಖ್ಯಮಂತ್ರಿಯಾದ ಎಚ್ ಡಿ ಕುಮಾರ ಸ್ವಾಮಿ ಮತ್ತು ಐದು ವರ್ಷಗಳ ಕಾಲ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಈಗ ದಿಢೀರನೇ ಸಂಘದ ಈ ಯಾವ ಚಟುವಟಿಕೆಗಳೂ ಈವರೆಗೆ ತಮ್ಮ ಗಮನಕ್ಕೇ ಬಂದಿಲ್ಲವೇನೋ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿರುವುದು ವಿಪರ್ಯಾಸ. ಅದರಲ್ಲೂ ಆರ್ ಎಸ್ ಎಸ್ ನ ರಾಜಕೀಯ ಅಂಗವಾದ ಬಿಜೆಪಿಯೊಂದಿಗೆ ಕೈಜೋಡಿಸಿ ಅಂದಿನ ಧರಂ ಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ, ಮುಖ್ಯಮಂತ್ರಿ ಸ್ಥಾನಕ್ಕೇರಿದ ಕುಮಾರಸ್ವಾಮಿಯವರು ಇಂದು ಆರ್ ಎಸ್ ಎಸ್ ಬಗ್ಗೆ ಜ್ಞಾನೋದಯದ ಮಾತುಗಳನ್ನಾಡುತ್ತಿದ್ದಾರೆ. ಆದರೆ, ‘ಅವರು ಅಂದು ಬಿಜೆಪಿ ಜೊತೆ ಕೈಜೋಡಿಸಿದ್ದು ರಾಜ್ಯದಲ್ಲಿ ಕೋಮುವಾದಿ, ಮತೀಯ ಶಕ್ತಿಗಳಿಗೆ ಬಲ ನೀಡುತ್ತದೆ. ಕೋಮುವಾದಿ ಪಕ್ಷದೊಂದಿಗೆ ಜನತಾ ಪರಿವಾರದ ಭಾಗವಾದ ಜೆಡಿಎಸ್ ಕೈಜೋಡಿಸಿದ್ದು ಸರಿಯಲ್ಲ’ ಎಂದು ಹೇಳಿದ್ದ ಸಾಹಿತಿ ಡಾ ಯು ಆರ್ ಅನಂತಮೂರ್ತಿಯರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, “ಯಾರ್ರೀ ಅದು ಅನಂತಮೂರ್ತಿ” ಎಂದು ಕೇಳಿದ್ದು, ಇದೇ ಕುಮಾರಸ್ವಾಮಿ ಎಂಬುದನ್ನು ಚರಿತ್ರೆ ಮರೆಯಲಾರದು ಅಲ್ಲವೇ?
ಹಾಗೇ, ಇಂದು ದೇಶದ ಭವಿಷ್ಯದ ಬಗ್ಗೆ ಆತಂಕದ, ಕಾಳಜಿಯ ಮಾತನಾಡುತ್ತಿರುವ ಕುಮಾರಸ್ವಾಮಿಯವರು, ಮುಖ್ಯಮಂತ್ರಿಯಾಗಿ ತಮ್ಮ ಎರಡನೇ ಅವಧಿಯಲ್ಲಿ ನಡೆದಿದ್ದ ಉಡುಪಿ ಜಿಲ್ಲೆಯ ಜೋಕಟ್ಟೆಯ ಹಸನಬ್ಬ ಕೊಲೆ ಪ್ರಕರಣದ ವಿಷಯದಲ್ಲಿ ಎಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರು? ಗೋರಕ್ಷಕರು ಮತ್ತು ಪೊಲೀಸರ ಪರಸ್ಪರ ವಿಷವರ್ತುಲ ಹಸನಬ್ಬ ಎಂಬ ವ್ಯಕ್ತಿಯ ಬಲಿತೆಗೆದುಕೊಂಡ ಬಗ್ಗೆ ಮತ್ತು ಆ ಬಳಿಕ ಅಂತಹ ಉಗ್ರ ಹಿಂದುತ್ವವಾದಿಗಳ ಗೋರಕ್ಷಣೆಯ ಹೆಸರಿನ ಅಟ್ಟಹಾಸಗಳನ್ನು ತಡೆಯುವ ನಿಟ್ಟಿನಲ್ಲಿ ಅವರು ಎಷ್ಟು ಕಾಳಜಿ ವಹಿಸಿದ್ದರು? ಎಂಬುದು ಈಗಿರುವ ಪ್ರಶ್ನೆ. ಜೊತೆಗೆ, ಮಲೆನಾಡು ಭಾಗದ ಸೌಲಭ್ಯವಂಚಿತ, ಶೋಷಿತ ಶೋಷಿತ ಸಮುದಾಯಗಳ ಶಿಕ್ಷಣ, ಉದ್ಯೋಗ, ಆರೋಗ್ಯ ಮುಂತಾದ ಬಿಕ್ಕಟ್ಟುಗಳಿಗೆ ಕುಮಾರಸ್ವಾಮಿ ಅವರ ರಾಜಕೀಯ ಪಕ್ಷ ಮತ್ತು ಅದರ ಕಾರ್ಯಕರ್ತರು ಏನು ಮಾಡಿದ್ದಾರೆ? ಕನಿಷ್ಟಪಕ್ಷ ಕಡುಬಡತನ ಮತ್ತು ದುರ್ಗಮ ಪ್ರದೇಶದ ಭೌಗೋಳಿಕ ಸಮಸ್ಯೆಗಳಿಂದಾಗಿ ಶಿಕ್ಷಣ ವಂಚಿತರಾಗಿದ್ದ ಹಾಡಿಯ ಮಕ್ಕಳಿಗೆ ಶಿಕ್ಷಣ ನೀಡಲು ಮುಖ್ಯಮಂತ್ರಿಯಾಗಿ ಅವರು ಏನು ಮಾಡಿದ್ದಾರೆ? ಎಂಬ ಪ್ರಶ್ನೆಗಳೂ ಇವೆ.
ಹಾಗೇ ‘ಆರ್ ಎಸ್ ಎಸ್ ನವರು ತಾಲಿಬಾನಿಗಳು’ ಎಂಬ ಹೇಳಿಕೆ ನೀಡಿರುವ ಮತ್ತು 70ರ ದಶಕದಿಂದಲೂ ತಾವು ಆರ್ ಎಸ್ ಎಸ್ ವಿರುದ್ಧ ಮಾತನಾಡುತ್ತಿರುವುದಾಗಿ ಹೇಳಿಕೊಂಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿ ಒಂದು ಪೂರ್ಣ ಬಹುಮತದ ಸರ್ಕಾರದ ಚುಕ್ಕಾಣಿ ಹಿಡಿದಾಗ, ತಮ್ಮದೇ ಹೇಳಿಕೆಯ ಪ್ರಕಾರ, ‘ಅಪಾಯಕಾರಿ’ ಎನ್ನಲಾಗುತ್ತಿರುವ ಅಂತಹ ಸಂಘಟನೆಯ ಚಟುವಟಿಕೆಗಳನ್ನು ಯಾಕೆ ನಿಯಂತ್ರಿಸಲಿಲ್ಲ? ಅವರದೇ ಮಾತುಗಳ ಪ್ರಕಾರ, ಹಿಂದುತ್ವವಾದಿ ಸಂಘಟನೆಗಳು ಅಪಾಯಕಾರಿ ಎನ್ನುವುದೇ ಆದರೆ, ಅವರದೇ ಅವಧಿಯಲ್ಲಿ ತೀವ್ರ ಹಿಂದುತ್ವವಾದಿ ಸಂಘಟನೆಗಳ ಕೈವಾಡದ ಸಂಶಯವಿರುವ ಡಾ ಎಂ ಎಂ ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣ ತನಿಖೆಯ ವಿಷಯದಲ್ಲಿ ಸಿಎಂ ಆಗಿ ಅವರು ಎಷ್ಟು ಕ್ಷಿಪ್ರಗತಿಯಲ್ಲಿ ಪ್ರಕರಣಗಳನ್ನು ಬಯಲಿಗೆಳೆದರು ಎಂಬುದು ಕೂಡ ಗುಟ್ಟೇನಲ್ಲ!
ಹಾಗೇ, ಆರ್ ಎಸ್ ಎಸ್ ಮತ್ತು ಅದರ ಪರಿವಾರಗಳ ಅಜೆಂಡಾಗಳಿಗೆ ಆಕರ್ಷಿತರಾಗುತ್ತಿರುವ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಮಕ್ಕಳು ಮತ್ತು ಯುವಕರನ್ನು ‘ಅಂತಹ ಅಪಾಯದಿಂದ(ಅವರೇ ಹೇಳಿದಂತೆ)’ ಪಾರು ಮಾಡಲು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಯಾವೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದರು? ಎಂಬ ಪ್ರಶ್ನೆಗಳು ಮುಖಕ್ಕೆ ರಾಚದೇ ಇರಲಾರವು.
ಹಾಗಾಗಿ, ಈ ಇಬ್ಬರು ನಾಯಕರ ಆರ್ ಎಸ್ ಎಸ್ ಮತ್ತು ಹಿಂದುತ್ವವಾದಿ ಅಜೆಂಡಾದ ಕುರಿತ ಹೇಳಿಕೆಗಳ ಹಿಂದೆ ದೇಶ ಮತ್ತು ಸಮಾಜದ ಬಗೆಗಿನ ಪ್ರಾಮಾಣಿಕ ಕಾಳಜಿಗಿಂತ, ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಸಿಂಧಗಿ ಮತ್ತು ಹಾನಗಲ್ ಚುನಾವಣಾ ಕಣದ ಮೇಲಿನ ಕಾಳಜಿಯೇ ಹೆಚ್ಚಿದೆ. ಚುನಾವಣಾ ಲಾಭ-ನಷ್ಟದ ಲೆಕ್ಕಾಚಾರದ ಮೇಲೆ ಸಂಘಟನೆಗಳ ಪರ-ವಿರೋಧ ಹೇಳಿಕೆ ನೀಡುವ, ಚರ್ಚೆ ಹುಟ್ಟುಹಾಕುವ ಇಂತಹ ವರಸೆಗಳು ಏನನ್ನು ಸಾಧಿಸಬಲ್ಲವು ಎಂಬುದು ಪ್ರಶ್ನೆ.

ಕನಿಷ್ಟ ಇಂತಹ ಪ್ರಶ್ನೆಗಳು ಬಿಜೆಪಿಯ ಆಂತರಿಕ ವಲಯದಲ್ಲಿ ಪಕ್ಷದ ಮತ್ತು ಜನಪ್ರತಿನಿಧಿಗಳ ಮೇಲಿನ ಆರ್ ಎಸ್ ಎಸ್ ನಿಯಂತ್ರಣದ ಬಗ್ಗೆ ಮತ್ತು ಸರ್ಕಾರಿ ಯಂತ್ರದ ಮೇಲಿನ ಹಿಡಿತದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಬಲ್ಲವೆ? ಅಥವಾ ಹಿಂದುತ್ವವಾದಿ ಅಜೆಂಡಾಕ್ಕೆ ಪ್ರತಿಯಾಗಿ ಪ್ರಜಾಪ್ರಭುತ್ವವಾದಿ ಪರ್ಯಾಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಆರ್ ಎಸ್ ಎಸ್ ವಿಸ್ತರಣಾ ಕಾರ್ಯಕ್ರಮಗಳಿಗೆ ಪ್ರತಿಯಾಗಿ ಸೆಕ್ಯುಲರ್ ಅಜೆಂಡಾದ ಕಾರ್ಯಕ್ರಮಗಳು ಜಾರಿಗೆ ಬಂದು, ಬಡವರು, ಶೋಷಿತರಿಗೆ ಅವು ತಲುಪಬಲ್ಲವೆ? ಆ ಮೂಲಕ ಈಗಾಗಲೇ ಸಮಾಜದಲ್ಲಿ ಹರಡಿರುವ ಸಂಘಪರಿವಾರದ ಮತ-ಧರ್ಮಗಳ ಮೇಲೆ ಸಮಾಜವನ್ನು ಒಡೆದು ಆಳುವ ತಂತ್ರಗಾರಿಕೆಗೆ ಕಡಿವಾಣ ಹಾಕುವ ಮತ್ತು ಸೌಹಾರ್ದ ಸಮಾಜ ಕಟ್ಟುವ ಕೆಲಸಗಳಿಗೆ ಈ ನಾಯಕರ ಇಂತಹ ಹೇಳಿಕೆಗಳು ಪ್ರೇರಣೆಯಾಗಬಲ್ಲವೆ? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಗಮನಿಸಿದರೆ, ಇಬ್ಬರೂ ನಾಯಕರ ಹೇಳಿಕೆಗಳಿಗೆ ರಾಜಕಾರಣದ ತತಕ್ಷಣದ ಲಾಭದ ಹೊರತಾಗಿಯೂ ಮತ್ತೇನೂ ದೂರಗಾಮಿ ಪರಿಣಾಮಗಳು ಇದ್ದಂತೆ ಕಾಣುವುದೇ ಇಲ್ಲ!
ಹಾಗಾಗಿ, ಸಿದ್ದರಾಮಯ್ಯ ಮತ್ತು ಎಚ್ ಡಿ ಕುಮಾರಸ್ವಾಮಿ ಮತ್ತಿತರ ನಾಯಕರ ಸಂಘ ಮತ್ತು ಅದರ ಪರಿವಾರದ ಕುರಿತ ಈ ವಾಗ್ವಾದ ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರವಾಗಿ ಕಾಣುತ್ತದೆಯೇ ವಿನಃ, ನೈಜ ಕಾಳಜಿಯ, ಬದಲಾವಣೆಯ ಆಶಯದ ನೆಲೆಯ ಹೇಳಿಕೆಗಳಾಗಿ ವಿಶ್ವಾಸ ಹುಟ್ಟಿಸುವುದಿಲ್ಲ ಎಂಬುದು ವಾಸ್ತವ.