ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ರಾಜಾತಿಥ್ಯ ಪಡೆಯುತ್ತಿರುವ ವಿಡಿಯೋ ವೈರಲ್ ವಿವಾದದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡುವ ವೇಳೆ ನಟ ದರ್ಶನ್ ಜಾಮೀನು ರದ್ದಾಗಲು ಕಾಂಗ್ರೆಸ್ ಪಕ್ಷದ ನಾಯಕರು ಕಾರಣ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ದರ್ಶನ್ ಒಂದು ಸಿಗರೇಟ್ ಸೇದಿರುವುದಕ್ಕೆ ಸುಪ್ರೀಂ ಕೋರ್ಟ್‌ವರೆಗೂ ಹೋದರು. ಇಲ್ಲಿ ನಾನು ಯಾರನ್ನೂ ಬೆಂಬಲಿಸುತ್ತಿಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಆದರೆ ದರ್ಶನ್ ಒಂದು ಸಿಗರೇಟ್ ಸೇದಿದಕ್ಕೆ ಸುಪ್ರೀಂ ಕೋರ್ಟ್‌ವರೆಗೂ ಹೋಗಿ ಜಾಮೀನು ರದ್ದು ಮಾಡಿದ್ರಲ್ಲಾ, ಇವರಿಗೆ ಈಗ ಏನು ಮಾಡುತ್ತೀರಿ. ಈಗ ಸುಪ್ರೀಂ ಕೋರ್ಟ್‌ಗೆ ಹೋಗುತ್ತೀರಾ? ಇಷ್ಟೊಂದು ಅನಾಹುತ ಆಗಿದೆ. ಧೈರ್ಯ ಇದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಿ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

ಇನ್ನು ಪ್ರತಿಭಟನೆ ವೇಳೆ ಮಾತನಾಡಿದ ಆರ್.ಅಶೋಕ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ಅವರ ಹಾಟ್‍ಲೈನ್ ಮೂಲಕ ಈ ಜೈಲಿನಿಂದ ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಕರೆಗಳು ಹೋಗುತ್ತಿವೆ. ಇವರು 2 ವರ್ಷದಿಂದ ಕತ್ತೆ ಕಾಯುತ್ತಿದ್ದಾರಾ..? ಗುಪ್ತಚರ ವಿಭಾಗ ಎರಡು ವರ್ಷದಿಂದ ಸತ್ತು ಹೋಗಿದೆಯೇ..? ಪೊಲೀಸ್ ಠಾಣೆಗಳನ್ನು ಇವರು ಕಾಂಗ್ರೆಸ್ ಕಚೇರಿ ಮಾಡಿದ್ದಾರೆ ಎಂದು ಗುಡುಗಿದ್ದಾರೆ.

