
ಕ್ಯಾನ್ಸರ್ನಿಂದ ಬಳಲುತ್ತಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ, ಅಮೆರಿಕದ ಆಸ್ಪತ್ರೆಯಲ್ಲಿರುವ ಶಿವಣ್ಣನನ್ನು ಅಪರೇಷನ್ ಥಿಯೇಟರ್ಗೆ ಶಿಫ್ಟ್ ಮಾಡಲಾಗಿದೆ. ಶಿವಣ್ಣನಿಗೆ ಅಮೆರಿಕ ಕಾಲಮಾನ ಬೆಳಗ್ಗೆ 8 ಗಂಟೆಗೆ ಆಪರೇಷನ್ ನಡೆಯುತ್ತಿದೆ. ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಆಪರೇಶನ್ ಥಿಯೇಟರ್ಗೆ ಶಿಫ್ಟ್ ಮಾಡಿದ್ದು, ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿ ನಡೆಯುತ್ತಿದೆ. ಶಿವಣ್ಣನಿಗೆ ಮೂತ್ರ ಕೋಶ ಶಸ್ತ್ರಚಿಕಿತ್ಸೆ ಮಾಡ್ತಿದ್ದು, ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಲಿದೆ ಎನ್ನಲಾಗಿದೆ. ಡಾ.ಮುರುಗೇಶ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು, ಭಾರತೀಯ ಕಾಲಮಾನ ರಾತ್ರಿ 11:30ರ ಹೊತ್ತಿಗೆ ಸರ್ಜರಿ ಮುಗಿಯಲಿದೆ.
ನಟ ಶಿವರಾಜಕುಮಾರ್ ಶಸ್ತ್ರ ಚಿಕಿತ್ಸೆಗಾಗಿ ಆರಂಭ ಆಗುವ ಕೆಲವೇ ನಿಮಿಷಗಳ ಮುನ್ನ ಶಿವರಾಜಕುಮಾರ್ಗೆ ಕರೆ ಮಾಡಿದ ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಸಕ್ಸಸ್ ಆಗಲೆಂದು ಶುಭ ಹಾರೈಸಿದ್ದಾರೆ.. ಶಿವಣ್ಣ ಅವರ ಆತ್ಮವಿಶ್ವಾಸ, ಧೈರ್ಯ, ಸಹೃದಯತೆಗೆ ಈ ಸಣ್ಣ ಸಂಕಷ್ಟ ನಿವಾರಣೆ ಆಗಲಿದೆ. ಶಿವಣ್ಣ ಶೀಘ್ರ ಗುಣಮುಖರಾಗಿ ಬರಲೆಂದು ಹಾರೈಸುತ್ತೇನೆ. ನಾಡಿನ ಜನರ ಆಶೀರ್ವಾದ ಹಾರೈಕೆ ಶಿವರಾಜಕುಮಾರ್ ಅವರ ಜೊತೆಗಿದ್ದು ಅವರನ್ನು ಕಾಪಾಡಲಿದೆ ಎಂದಿದ್ದಾರೆ..
ಶಿವಣ್ಣ ಆರೋಗ್ಯ ಚೇತರಿಕೆಗಾಗಿ ಆಪ್ತರು, ಅಭಿಮಾನಿಗಳು ವಿಶೇಷ ಪೂಜೆ ನಡೆಸಿದ್ದಾರೆ. ಮೈಸೂರಿನ ಅಗ್ರಹಾರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ 101 ಶಿವಣ್ಣ ಅಭಿಮಾನಿಗಳು ಮುಡಿಕೊಟ್ಟು, ಉರುಳು ಸೇವೆ ಮಾಡಿ ಪೂಜೆ ಮಾಡಿದ್ದಾರೆ. ರಾಮನಗರದಲ್ಲೂ ಕೂಡ ಶಿವಣ್ಣ ಆರೋಗ್ಯ ಚೇತರಿಕೆ ಆಗಲಿ ಎಂದು ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿಗೆ ಅಭಿಮಾನಿಗಳು ಈಡುಗಾಯಿ ಒಡೆದು ಪೂಜೆ ಮಾಡಿದ್ದಾರೆ.

ಮಲೆನಾಡು ಶಿವಮೊಗ್ಗದಲ್ಲಿ ಕೋಟೆ ಮಾರಿಕಾಂಬಾ ದೇವಾಲಯಲ್ಲಿ ಶಿವಣ್ಣ ಹೆಸರಲ್ಲಿ ಅರ್ಚನೆ ಮಾಡಿಸಿ ಪೂಜೆ ಮಾಡಲಾಗಿದೆ. ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದು, ಶಿವಣ್ಣ ಚಿಕಿತ್ಸೆಯಿಂದ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.