ಕೋಲಾರ(Kolar) ಜಿಲ್ಲೆಯ ಇಬ್ಬರು ಜೆಡಿಎಸ್(JDS) ಶಾಸಕರು ಕಾಂಗ್ರೆಸ್(Congress) ಪಕ್ಷಕ್ಕೆ ಸೇರ್ಪಡೆ ಆಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಶಾಸಕ(MLA) ಕೊತ್ತೂರು ಮಂಜುನಾಥ್(Kotthur Manjunath) ಸ್ಪೋಟಕ ಹೇಳಿಕೆ ನೀಡಿದ್ದರು. ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಮತ್ತು ಶ್ರೀನಿವಾಸಪುರ ಜೆಡಿಎಸ್ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಅವರನ್ನ ಹಿರಿಯ ಅವರೇ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar) ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಇವರಿಬ್ಬರೂ ಕಾಂಗ್ರೆಸ್ಗೆ ಸೇರ್ಪಡೆ ಆಗುವ ಬಗ್ಗೆ ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಭಿಪ್ರಾಯ ಕೇಳಿದ್ದಾರೆ. ಅವರೂ ಒಪ್ಪಿಕೊಂಡಿದ್ದು, ನಾವೆಲ್ಲಾ ಒಪ್ಪಿಕೊಂಡಂತೆಯೇ ಆಗಿದೆ. ವೆಂಕಟಶಿವಾರೆಡ್ಡಿಗೆ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ(Loka Saba) ಟಿಕೆಟ್ ಕೊಡಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದರು.

ಮಾಧ್ಯಮಗಳ ಎದುರು ಆಪರೇಷನ್ಗೆ ರಿವರ್ಸ್ ಗೇರ್..!
ಈ ವಿಚಾರ ಮಾಧ್ಯಮಗಳಲ್ಲಿ ಅಲ್ಚೆಲ್ ಎಬ್ಬಿಸುತ್ತಿದ್ದ ಹಾಗೆ ಮಾಧ್ಯಮಗಳ ಎದುರು ಓಡೋಡಿ ಬಂದ ಜೆಡಿಎಸ್(JDS) ಶಾಸಕರಾದ ವೆಂಕಟಶಿವಾರೆಡ್ಡಿ ಹಾಗು ಸಮೃದ್ದಿ ಮಂಜುನಾಥ್, ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿರುವುದು ಶುದ್ಧ ಸುಳ್ಳು ಎಂದು ಹೇಳುವ ಮೂಲಕ ಯೂಟರ್ನ್(U-turn) ಹೊಡೆದಿದ್ದಾರೆ. ಕೋಲಾರದಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ ಶಾಸಕ ಸಮೃದ್ದಿ ಮಂಜುನಾಥ್, ನಾನೆಂದು ಪಕ್ಷ ಬಿಡುವ ಹೇಳಿಕೆ ನೀಡಿಲ್ಲ, ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಅನುದಾನ ಕೇಳುವುದಕ್ಕಾಗಿ ಭೇಟಿ ಮಾಡಿದ್ದೇನೆ. ಅದು ತಪ್ಪಾ..? ಎಂದು ಪ್ರಶ್ನಿಸಿದ್ದಾರೆ. ಭೇಟಿ ಮಾಡಿರುವುದು ತಪ್ಪು ಅನ್ನೋದಾದ್ರೆ ಸಿಎಂ ಸಿದ್ದರಾಮಯ್ಯ ಅವರು ಹೇಳಲಿ ಎಂದಿರುವ ಸಮೃದ್ಧಿ ಮಂಜುನಾಥ್, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರೋದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.
ಕಾಂಗ್ರೆಸ್ ಸೇರಲು ಆಹ್ವಾನ ಬಂದಿರುವುದು ಸತ್ಯ..!
ನಮ್ಮ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಆಹ್ವಾನ ನೀಡಿದ್ದು ನಿಜ, ನಾವೆಲ್ಲ ಮದುವೆ ಆಗಿರುವ ಸಂಸಾರಸ್ಥರು, ತೇಜೋವಧೆ ಮಾಡುವುದು ಸರಿಯಲ್ಲ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ತೋಟದಲ್ಲಿ ಇದ್ದಾರೆ. ತೋಟದಲ್ಲಿ ಕುಳಿತು ಅವರು ಈ ಸ್ಕೆಚ್ ಹಾಕಿದ್ದಾರೆ. ಜೆಡಿಎಸ್ನಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಲು ನನಗೆ ಆಫರ್ ಇದೆ. ಹಾಗಾಗಿ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕೊತ್ತೂರು ಮಂಜುನಾಥ್ ಬಾಯಿಂದ ಈ ರೀತಿಯ ಹೇಳಿಕೆ ಕೊಡಿಸಿರಬಹುದು. ಮೂರನೇ ವ್ಯಕ್ತಿ ಮೂಲಕ ಹೇಳಿಕೆ ಕೊಡಿಸಿರಬಹುದು ಎಂದಿದ್ದಾರೆ. ಇನ್ನು ಶಾಸಕ ವೆಂಕಟಶಿವಾರೆಡ್ಡಿ ಮಾತನಾಡಿ, ನನಗೆ ಮತದಾರ ಶಾಸಕ ಸ್ಥಾನ ನೀಡಿದ್ದಾನೆ. ಅವರ ನಂಬಿಕೆಗೆ ದ್ರೋಹ ಮಾಡಲ್ಲ. ಕಾಂಗ್ರೆಸ್ಗೆ ಬನ್ನಿ ಎಂದು ಕೆ.ಎಚ್ ಮುನಿಯಪ್ಪ, ಮುಂದಾಳತ್ವ ವಹಿಸಿ ಮಾತನಾಡಿದ್ದು ನಿಜ ಎಂದು ಆಪರೇಷನ್ ಹಸ್ತ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ಆಪರೇಷನ್ಗೆ ಪ್ರಮುಖ ಕಾರಣ ಏನು ಗೊತ್ತಾ..?
KH ಮುನಿಯಪ್ಪ ನೇತೃತ್ವದಲ್ಲಿ ನಾವು CM, DCM ಭೇಟಿ ಮಾಡಿದ್ದೇವೆ. ಅವರೇ ಎಲ್ಲಾ ಮಾತನಾಡಿದ್ರು, ಆದ್ರೆ ನಾವು ಜೆಡಿಎಸ್ ಬಿಡಲ್ಲ. KH ಮುನಿಯಪ್ಪ ಅವರು ನಮ್ಮನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆದ್ರು ಎಂದಿದ್ದಾರೆ. ಆದರೆ ಲೋಕಸಭಾ ಚುನಾವಣೆಗೂ ಮುನ್ನ ಆಪರೇಷನ್ ನಡೆದರೆ ಕಾಂಗ್ರೆಸ್ಗೆ ಲಾಭವಿದೆ. ಅದೇ ಕಾರಣಕ್ಕೆ ಆಪರೇಷನ್ಗೆ ತಯಾರಿ ನಡೆದಿದೆ. ಅದೂ ಅಲ್ಲದೆ ಕೋಲಾರದಲ್ಲಿ ರಮೇಶ್ ಕುಮಾರ್ ಹಾಗು ಕೆ ಎಚ್ ಮುನಿಯಪ್ಪ ಎರಡು ಬಣಗಳಿದ್ದು, ಎರಡೂ ಬಣಗಳು ಒಪ್ಪುವಂತಹ ನಾಯಕ ಅಭ್ಯರ್ಥಿ ಆಗಬೇಕಿದೆ. ಕೆ.ಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಹೆಸರು ಬಲವಾಗಿ ಕೇಳಿಬರುತ್ತಿದೆ. ಎರಡೂ ಗುಂಪನ್ನು ಸಮರ್ಥವಾಗಿ ನಿಭಾಯಿಸುವ ಬಗ್ಗೆ ಮಾತುಕತೆ ನಡೆದಿದೆ. ಇಬ್ಬರು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ಆದರೆ ಗೆಲ್ಲಿಸುವುದು ಸುಲಭ. ಅದೇ ಕಾರಣಕ್ಕಾಗಿ ಕೆ.ಎಚ್ ಮುನಿಯಪ್ಪ ಕಸರತ್ತು ನಡೆಸಿದ್ದಾರೆ ಎನ್ನಲಾಗ್ತಿದೆ. ಇಬ್ಬರೂ ಶಾಸಕರು ಈಗಾಗಲೇ ಒಂದು ಮೆಟ್ಟಿಲು ಇಳಿದಿದ್ದು, ಚುನಾವಣೆ ಹತ್ತಿರ ಆಗುತ್ತಿದ್ದಂತೆ ಜಾಗ ಖಾಲಿ ಮಾಡುವ ಸಾಧ್ಯತೆ ದಟ್ಟವಾಗಿದೆ.
#JDS #Congress #KotthurManjunata #Siddaramaiah #DKShivakumar #Kolara












