ಕಲಬುರಗಿ: ರಾಜ್ಯದಲ್ಲಿ ಈ ಆಪರೇಷನ್ ಕಮಲ ಆರಂಭವಾದುದ್ದು ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರರಿಂದ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ ಎಂದು ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತಿಳಿಸಿದರು.
ಕಲಬುರಗಿ ಜಿಲ್ಲೆಯ ಅಳಂದದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಮೂರೂವರೆ ವರ್ಷಗಳಿಂದ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಇವರು ಯಾವತ್ತೂ ಕೂಡ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ. ಎರಡು ಬಾರಿ ಕೂಡ ಆಪರೇಷನ್ ಕಮಲದ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.
ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ
ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ 104 ಸ್ಥಾನಗಳಲ್ಲಿ, ನಾವು 80 ಸ್ಥಾನಗಳಲ್ಲಿ ಗೆದ್ದಿದ್ದೆವು. ಆದರೆ ಶೇಕಡಾವಾರು ಮತದಲ್ಲಿ ನಾವು ಬಿಜೆಪಿ ಪಕ್ಷಕ್ಕಿಂತ ಶೇ.2ಹೆಚ್ಚು ಮತ ಗಳಿಸಿದ್ದೆವು. 2018ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಬಹುಮತ ಸಾಬೀತು ಮಾಡಲಾಗದೆ ಮೂರೇ ದಿನಕ್ಕೆ ರಾಜೀನಾಮೆ ನೀಡಿದರು. ಆ ನಂತರ ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ಏಕೈಕ ಕಾರಣಕ್ಕೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ವೆಸ್ಟೆಂಡ್ ಹೋಟೆಲ್’ನಲ್ಲಿ ಉಳಿದುಕೊಂಡು ಸಚಿವರು, ಶಾಸಕರನ್ನು ಭೇಟಿ ಮಾಡದ ಕಾರಣಕ್ಕೆ ಕೇವಲ 14 ತಿಂಗಳಿಗೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು. ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಈ ಮಾತು ಕುಮಾರಸ್ವಾಮಿ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ ಎಂದರು.
ಇಂದು ಬೆಲೆಯೇರಿಕೆ ಗಗನ ಮುಟ್ಟಿದೆ. ಹಿಂದೆ 450 ರೂ ಇದ್ದ 50 ಕೆ.ಜಿ ಡಿಎಪಿ ಬೆಲೆ ಇಂದು 1450 ರೂ. ಆಗಿದೆ. ಈ ಭಾಗದಲ್ಲಿ ಬೆಳೆದ ತೊಗರಿಬೇಳೆಗೆ ನೆಟೆರೋಗ ಬಂದು ಬೆಳೆನಷ್ಟವಾಗಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿರುವಾಗ 72,000 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದರೂ, ನಾನು ಮುಖ್ಯಮಂತ್ರಿಯಾಗಿರುವಾಗ ರಾಜ್ಯದ 22 ಲಕ್ಷದ 27 ಸಾವಿರ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 50 ಸಾವಿರ ವರೆಗಿನ 8,165 ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ. ಮೋದಿ ಅವರಾಗಲೀ, ಬೊಮ್ಮಾಯಿ, ಯಡಿಯೂರಪ್ಪ ಅವರಾಗಲೀ ಒಂದು ರೂಪಾಯಿ ಸಾಲಮನ್ನಾ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪತ್ರ ಬರೆದು ಒಂದೂವರೆ ವರ್ಷ ಆದರೂ ಯಾಕೆ ಏನು ಕ್ರಮ ಕೈಗೊಂಡಿಲ್ಲ. ಎನ್.ಒ.ಸಿ ಬಿಡುಗಡೆ ಮಾಡಲು ಶೇ.10 ಲಂಚ ನಿಗದಿ ಮಾಡಿದ್ದಾರೆ. ಒಂದು ಕೆಲಸಕ್ಕೆ ಶೇ. 40 ಲಂಚ, ಶೇ.18 ಜಿಎಸ್’ಟಿ, ಗುತ್ತಿಗೆದಾರರ ಲಾಭ ಕಳೆದು ಉಳಿಯುವುದು ಶೇ.20 ಮಾತ್ರ. ಇದರಲ್ಲಿ ಗುಣಮಟ್ಟದ ಕೆಲಸ ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಇದೇ ಕಾರಣಕ್ಕೆ ನಾನು ಈ ಸರ್ಕಾರವನ್ನು ಅಲಿಬಾಬಾ ಮತ್ತು 40 ಮಂದಿ ಕಳ್ಳರ ಕೂಟಕ್ಕೆ ಹೋಲಿಸಿದ್ದು ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ಸಿಮೆಂಟ್, ಕಬ್ಬಿಣ, ಹಾಲು, ಮೊಸರು, ಔಷಧಿ ಇವುಗಳ ಬೆಲೆ ಮಿತಿಮೀರಿದೆ. ಇದನ್ನೇ ಅಚ್ಚೇದಿನ್ ಎಂದು ಕರೆಯಬೇಕಾ ಮೋದಿಜೀ? ಅಗತ್ಯವಸ್ತುಗಳ ಮೇಲೆ ಜಿಎಸ್’ಟಿ ಹಾಕಿ ಬಡವರ ರಕ್ತ ಹೀರುತ್ತಿದ್ದಾರೆ ಇಂಥವರಿಗೆ ಮತ ಹಾಕ್ತೀರಾ ಎಂದು ಪ್ರಶ್ನಿಸಿದರು
ನಮ್ಮ ಪಕ್ಷವು ಮುಂದೆ ಅಧಿಕಾರಕ್ಕೆ ಬಂದಾಗ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ, ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ಸಹಾಯಧನ ನೀಡುತ್ತದೆ. ಇದಕ್ಕೆ ನಾನು ಡಿ.ಕೆ ಶಿವಕುಮಾರ್ ಅವರು ಸಹಿ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಾವು ಬಡವರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಅದನ್ನು 5 ಕೆ.ಜಿ ಗೆ ಇಳಿಸಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಬಡಜನರಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದರು.
ಬಸವಾದಿ ಶರಣರ ಕಾಲದ ಸಮಾನತೆಯ ಸಂಕೇತವಾದ ಅನುಭವ ಮಂಟಪವನ್ನು ಮರು ನಿರ್ಮಾಣ ಮಾಡಿದ್ದು ನಮ್ಮ ಸರ್ಕಾರ. ಗೋರೂರು ಚನ್ನಬಸಪ್ಪ ಅವರ ಸಮಿತಿ ಶಿಫಾರಸನ್ನು ಜಾರಿಗೊಳಿಸಬೇಕು ಎನ್ನುವಾಗ ಚುನಾವಣಾ ನೀತಿ ಸಂಹಿತೆ ಬಂತು. ಹಾಗಾಗಿ ಕೆಲಸ ಆರಂಭಿಸಲು ಸಾಧ್ಯವಾಗಿರಲಿಲ್ಲ. ಈಗ ಕೆಲಸ ಆರಂಭವಾಗಿ ಆಮೆ ವೇಗದಲ್ಲಿ ನಡೆಯುತ್ತಿದೆ. ನಾವು ಅಧಿಕಾರಕ್ಕೆ ಬಂದ 1 ವರ್ಷದೊಳಗೆ ಅಗತ್ಯ ಅನುದಾನ ನೀಡಿ ಅನುಭವ ಮಂಟಪದ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆ ಮಾಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಾನು ಮುಖ್ಯಮಂತ್ರಿಯಾಗಿರುವಾಗ 15 ಲಕ್ಷ ಮನೆಗಳ ನಿರ್ಮಾಣ ಮಾಡಿಕೊಟ್ಟಿದ್ದೆ. ಈ ಸರ್ಕಾರ ಬಂದ ಮೇಲೆ ಒಂದೇ ಒಂದು ಮನೆ ಕಟ್ಟಿಸಿಕೊಟ್ಟಿಲ್ಲ. ನಾವು ಕಟ್ಟಿಸಿಕೊಟ್ಟ ಮನೆಯನ್ನು ಪೂರ್ತಿಗೊಳಿಸಲು ಅನುದಾನ ನೀಡಿಲ್ಲ. ಈಗ ಮನೆ ಕಟ್ಟಿರುವುದಾಗಿ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಂಥವರ ಮಾತನ್ನು ನಂಬಬೇಡಿ. ಬಡವರಿಗೆ ಸೂರು ಕಟ್ಟಿಸಿಕೊಡದ ಈ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಹರಿಹಾಯ್ದರು.
ನಾವು ಪ್ರಜಾಧ್ವನಿಯನ್ನು ಹಮ್ಮಿಕೊಂಡಿರುವುದು ನಿಮ್ಮ ಧ್ವನಿಯನ್ನು ಕೇಳಿ, ನಿಮ್ಮ ಧ್ವನಿಗೆ ಅನುಗುಣವಾಗಿ ಸರ್ಕಾರ ನಡೆಸಲು. ಇದಕ್ಕೆ ನಿಮ್ಮ ಆಶೀರ್ವಾದ ಬೇಕು. 2023ರ ಚುನಾವಣೆಯಲ್ಲಿ ಬಿ.ಆರ್ ಪಾಟೀಲರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿ.ಆರ್ ಪಾಟೀಲರಿಗೆ ಉಜ್ವಲ ಭವಿಷ್ಯವಿದೆ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.











