ನನ್ನ ಪಕ್ಷ ನಿಷ್ಠೆ ಪ್ರಶ್ನೆ ಮಾಡುವವರು ಮೂರ್ಖರು

“ನಾನು ವಿರೋಧ ಪಕ್ಷಗಳ ಕಾಲೆಳೆಯಲು ಈ ಸಾಲುಗಳನ್ನು ಪ್ರಸ್ತಾಪಿಸಿದ್ದೇನೆ. ನನ್ನ ಕೆಲವು ಸ್ನೇಹಿತರು ಇದರಲ್ಲಿ ರಾಜಕೀಯ ಮಾಡಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಹೊರಟಿದ್ದಾರೆ. ನಾನು ಹುಟ್ಟು ಕಾಂಗ್ರೆಸಿಗ ಎಂಬ ಹೇಳಿಕೆಗೆ ನಾನು ಬದ್ಧ. ಪಕ್ಷ ಹಾಗೂ ಗಾಂಧಿ ಕುಟುಂಬಕ್ಕೆ ಇರುವ ನನ್ನ ನಿಷ್ಠೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡುವವರು ಮೂರ್ಖರು. ರಾಜ್ಯ ರಾಜಕೀಯ ಇತಿಹಾಸದಲ್ಲಿ ನಾನು ಮಾಡಿರುವ ಹೋರಾಟವನ್ನು ಬೇರೆ ಯಾರೂ ಮಾಡಿಲ್ಲ. ಹೋರಾಟದಲ್ಲಿ ಅವರು ನನ್ನ ಸಮೀಪಕ್ಕೂ ಬರಲು ಸಾಧ್ಯವಿಲ್ಲ. ನಾನು ಈ ಮಾತನ್ನು ನನ್ನ ಸಮಕಾಲೀನರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಹಿರಿಯ ನಾಯಕರ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು.

“ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಅಧ್ಯಕ್ಷರು. ನಾನು ಅವರೊಂದಿಗೆ ಕಳೆದ 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ. ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೂರು ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೂರು ಕಾಂಗ್ರೆಸ್ ದೇವಾಲಯ ಸ್ಥಾಪಿಸಬೇಕು ಎಂಬ ಗುರಿ ಹೊಂದಿದ್ದೇನೆ. ಪ್ರತಿ ಕ್ಷೇತ್ರದಲ್ಲಿನ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯ ಮಹತ್ವ ಅರಿಯಬೇಕು ಎಂದು ಈ ತೀರ್ಮಾನ ಮಾಡಿದ್ದೇನೆ. ನಾನು ಎಷ್ಟು ವರ್ಷ ಅಧಿಕಾರದಲ್ಲಿ ಇರುತ್ತೇನೋ ಗೊತ್ತಿಲ್ಲ. ಆದರೆ ಪಕ್ಷದ ಇತಿಹಾಸ ಪುಟಗಳಲ್ಲಿ ನಾನು ಶಾಶ್ವತವಾಗಿ ಉಳಿಯಲು ಬಯಸುತ್ತೇನೆ. ನನ್ನನ್ನು ಟೀಕಿಸಿ, ಮಾರ್ಗದರ್ಶನ ನೀಡುತ್ತಿರುವ ನನ್ನ ಎಲ್ಲಾ ಸ್ನೇಹಿತರು ಹಾಗೂ ಮಾಧ್ಯಮದವರಿಗೆ ಧನ್ಯವಾದಗಳು” ಎಂದು ವಿವರಿಸಿದರು.
“ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದ ರಕ್ಷಣೆ ವೇಳೆ ನಾನು ಏನು ಮಾಡಿದೆ, ಅದರಿಂದ ನನ್ನ ವಿರುದ್ಧ ಎಷ್ಟು ಕೇಸ್ ದಾಖಲಾಯಿತು ಎಂದು ಎಲ್ಲರಿಗೂ ತಿಳಿದಿದೆ. ನಂತರ ಗುಜರಾತಿನ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲರು ಗೆಲ್ಲಲು ಅನುವಾಗುವಂತೆ ಶಾಸಕರನ್ನು ರಕ್ಷಣೆ ಮಾಡಿದೆ. ಇದಕ್ಕಾಗಿ ನನ್ನ ಮೇಲೆ, ನನ್ನ ಕುಟುಂಬ ಹಾಗೂ ಸ್ನೇಹಿತರು ಸೇರಿ 77 ಜನರ ಮೇಲೆ ಐಟಿ, ಸಿಬಿಐ ಹಾಗೂ ಇಡಿ ದಾಳಿ ನಡೆದವು. ಒಟ್ಟು 400 ಪ್ರಕರಣಗಳು ದಾಖಲಾದವು. ಇದರ ಬಗ್ಗೆ ಎಲ್ಲರಿಗೂ ಗೊತ್ತಿದೆ” ಎಂದು ತಿಳಿಸಿದರು.

“ಈ ಪ್ರಕ್ರಿಯೆಯಲ್ಲಿ ನಾನು ಎಷ್ಟು ಕಿರುಕುಳ ಅನುಭವಿಸಿದ್ದೇನೆ, ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದೇನೆ. ಇ.ಡಿ ಪ್ರಕರಣ ದಾಖಲಾದವು. ಈ ಎಲ್ಲಾ ಪ್ರಕರಣಗಳು ಸುಪ್ರೀಂ ಕೋರ್ಟ್ ನಲ್ಲಿ ವಜಾಗೊಂಡವು. ತಿಹಾರ್ ಜೈಲಿನಲ್ಲಿ ನನಗೆ ಕೂರಲು ಚೇರ್ ಇರಲಿಲ್ಲ. ಇದರ ಪರಿಣಾಮ ನನ್ನ ಮಂಡಿಗೆ ಆಗಿರುವ ಹಾನಿ ನನಗೆ ಮಾತ್ರ ಗೊತ್ತಿದೆ. 10X10 ಅಡಿ ಜಾಗದ ಸೆಲ್ ನಲ್ಲಿ ಅಲ್ಲೇ ಶೌಚಾಲಯ ಮಾಡಿ, ನೆಲದ ಮೇಲೆ ಮಲಗಿ, ಅವರು ಕೊಟ್ಟ ಆಹಾರ ತಿಂದು ನಾನು ಹೇಗೆ ಅಷ್ಟು ದಿನ ಕಳೆದಿದ್ದೇನೆ ಎಂದು ನನಗೆ ಮಾತ್ರ ಗೊತ್ತಿದೆ. ಇ.ಡಿ ದಾಖಲಿಸಿದ ಪ್ರಕರಣ ಏನಾಯ್ತು ಎಂದು ಯಾರೂ ಚರ್ಚೆ ಮಾಡುವುದಿಲ್ಲ. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ವಜಾ ಮಾಡಿದೆ. ಇದರ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಈ ಎಲ್ಲಾ ವಿಚಾರವನ್ನು ಸರಿಯಾಗಿ ದಾಖಲೆ ಹೋಗುವ ಸಂದರ್ಭ ಬಂದಾಗ ವಿವರವಾಗಿ ಹೇಳುತ್ತೇನೆ” ಎಂದರು.

“ನನ್ನ ಬಂಧನವಾದಾಗ, ಅನೇಕರು ಸಂತೋಷ ಪಟ್ಟರು. ಡಿ.ಕೆ. ಶಿವಕುಮಾರ್ ರಾಜಕಾರಣ ಮುಗಿದು ಹೋಯಿತು ಎಂದು ಭಾವಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚೆ ಮಾಡಿ ನನಗೆ ಕೆಪಿಸಿಸಿ ಅಧ್ಯಕ್ಷಗಿರಿಯ ಜವಾಬ್ದಾರಿ ನೀಡಿದರು. ಅಂದಿನಿಂದ ಇಂದಿನವರೆಗೂ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ಸೋಮವಾರ ರಾತ್ರಿ ಕೂಡ ನಗರ ಪ್ರದಕ್ಷಿಣೆ ಮುಗಿಸಿ ಮಲಗಿದಾಗ 3 ಗಂಟೆ” ಎಂದು ತಿಳಿಸಿದರು.