ಕರ್ನಾಟಕ ಕಾರ್ಮಿಕ ಇಲಾಖೆ ಸೆಸ್ ಹೇರಿಕೆ ಮಾಡಲು ನಿರ್ಧಾರ ಮಾಡಿದೆ. Zomato, Dunzo, Swiggy, Zepto, Ola, ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಆನ್ಲೈನ್ ಶಾಪಿಂಗ್ ಮೇಲೆ ಸೆಸ್ ವಿಧಿಸಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. Zomato, Dunzo, Swiggy, Zepto, Ola ಮತ್ತು ಇತರೆ ಆನ್ಲೈನ್ ಶಾಪಿಂಗ್ನ ಏಗ್ರಿಗೇಟರ್ ಪ್ಲಾಟ್ಫಾರ್ಮ್ಗಳಲ್ಲಿ ಪ್ರತಿ ವಹಿವಾಟಿನ ಮೇಲೆ ಸೆಸ್ ಹೇರಲು ನಿರ್ಧಾರ ಮಾಡಲಾಗಿದೆ.
ಸೆಸ್ನಿಂದ ಸಂಗ್ರಹಿಸಲಾಗುವ ಹಣ ಗಿಗ್ ಕಾರ್ಮಿಕರ ಕಲ್ಯಾಣ ನಿಧಿಗಾಗಿ ಬಳಕೆ ಮಾಡಲು ಕಾರ್ಮಿಕ ಇಲಾಖೆ ನಿರ್ಧಾರ ಮಾಡಿದ್ದು, ಆನ್ಲೈನ್ ಮೂಲಕ ಖರೀದಿಸುವಾಗ ಹೆಚ್ಚುವರಿ ಹಣ ತೆರಬೇಕಿದೆ. ಉತ್ಪನ್ನಗಳು ಅಥವಾ ಸರಕುಗಳಿಗೆ ಶುಲ್ಕ ವಿಧಿಸುತ್ತಿಲ್ಲ. ಬದಲಿಗೆ ಸಾಗಾಟದ ಮೇಲೆ ಮಾತ್ರ ಸೆಸ್ ಹಾಕಲು ಪ್ಲಾನ್ ಮಾಡಿದ್ದು, ಸೆಸ್ ಹೇರಿಕೆ ಬಗ್ಗೆ ಕ್ಯಾಬಿನೇಟ್ನಲ್ಲಿ ಒಪ್ಪಿಗೆ ಪಡೆಯಲು ಕಾರ್ಮಿಕ ಇಲಾಖೆ ಮುಂದಾಗಿದೆ.
ಆನ್ಲೈನ್ ವ್ಯವಹಾರದ ಮೇಲೆ ಸೆಸ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ಸೆಸ್ ಹಾಕಬೇಕೆಂದು ತೀರ್ಮಾನ ಮಾಡಿದ್ದೇವೆ. 32 ಸಭೆಗಳನ್ನ ಇದಕ್ಕಾಗಿಯೇ ಮಾಡಲಾಗಿದೆ. ಅಮೆಜಾನ್, ಫ್ಲಿಪ್ ಕಾರ್ಟ್, ಸ್ವಿಗ್ಗಿ ಸೇರಿದಂತೆ ಆನ್ ಲೈನ್ ಕಂಪನಿಗಳ ಜೊತೆ ಸಭೆ ನಡೆಸಿ ಒಪ್ಪಿಗೆ ಪಡೆಯಲಾಗಿದೆ. ಇದಕ್ಕಾಗಿ ಡ್ರಾಫ್ಟ್ ಕೂಡಾ ಮಾಡಲಾಗಿದೆ ಎಂದಿದ್ದಾರೆ.
ಈಗ ರೆಡಿ ಆಗಿರುವ ಡ್ರಾಫ್ಟ್ನಲ್ಲಿ ಸ್ವಲ್ಪ ಬದಲಾವಣೆಯಾಗಬಹುದು. ಗಿಗ್ ವರ್ಕರ್ಸ್ ಬಳಕೆ ಮಾಡುವ ಎಲ್ಲಾ ಕಂಪನಿಗಳಿಗೆ ಇದು ಅನ್ವಯ ಆಗಲಿದೆ. ರಾಹುಲ್ ಗಾಂಧಿಯವರು ಗಿಗ್ ವರ್ಕರ್ಸ್ ಬಗ್ಗೆ ಹೇಳಿದ್ರು. ಅದೇ ರೀತಿ ಈ ಬಿಲ್ ತರುತ್ತಿದ್ದೇವೆ. ಗೂಡ್ಸ್ನಲ್ಲಿ ನಾವು ಏನು ಸೆಸ್ ಹಾಕಲು ಆಗೋದಿಲ್ಲ, ಅದಕ್ಕಾಗಿ ನಾವು ಟ್ರಾನ್ಸ್ಪೋರ್ಟ್ನಲ್ಲಿ ಸೆಸ್ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.