ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಡಾ||ಹೆಚ್ ಎಂ ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ಅವರು ನಾಡಪ್ರಭು ಕೆಂಪೇಗೌಡರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ‘AKGTV’ ಯೂಟ್ಯೂಬ್ ವಾಹಿನಿಯನ್ನು ಕಳೆದವರ್ಷ ಆರಂಭಿಸಿದ್ದರು. ಇದೇ ಸಂದರ್ಭದಲ್ಲಿ “ನಾಡಸಿಂಹ ಕೆಂಪೇಗೌಡ” ಎಂಬ ಅದ್ದೂರಿಗೀತೆಯನ್ನು ಸಹ ಬಿಡುಗಡೆ ಮಾಡಿದ್ದರು. ಈಗ ‘AKGTV’ ಗೆ ಮೊದಲನೇ ವಾರ್ಷಿಕೋತ್ಸವ. ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ವಾಹಿನಿ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ಪೂಜ್ಯ ಶ್ರೀ ನಂಜಾವಧೂತ ಸ್ವಾಮಿಗಳು, ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಆನಂದ ಗುರೂಜಿ, ನಿರ್ಮಾಪಕರಾದ ಉಮಾಪತಿ, ಸಂಜಯ್ ಗೌಡ, ದೀಪಕ್, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಗಣ್ಯರನ್ನು ಸ್ವಾಗತಿಸಿ ಮಾತನಾಡಿದ ಹೆಚ್ ಎಂ ಕೃಷ್ಣಮೂರ್ತಿ ಅವರು, ನಾಡಪ್ರಭು ಕೆಂಪೇಗೌಡರು ಮಾಡಿರುವ ಉಪಕಾರ ಅಪಾರ.ಅವರು ಮಾಡಿದ ಕಾರ್ಯಗಳ ಬಗ್ಗೆ, ಅವರು ಭೇಟಿ ನೀಡಿದ ಸ್ಥಳಗಳ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿಸಲು AKGTV ಆರಂಭಿಸಲಾಯಿತು.ವಾಹಿನಿ ಆರಂಭವಾಗಿ ಇಂದಿಗೆ ಒಂದು ವರ್ಷವಾಗಿದೆ.
ಈವರೆಗೂ ಶಿವಗಂಗೆ, ಹುಲಿಯೂರು ದುರ್ಗ ಮುಂತಾದ ಪುಣ್ಯಕ್ಷೇತ್ರಗಳಲ್ಲಿರುವ ಕೋಟೆ, ಕಲ್ಯಾಣಿ ಮುಂತಾದ ಸ್ಥಳಗಳನ್ನು ಹಲವು ಕಂತುಗಳ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮುಂದೆ ಕೂಡ ಅನೇಕ ಸ್ಥಳಗಳ ಕುರಿತು ಮಾಹಿತಿ ನೀಡಲಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ತಿಳಿಸಿದ ಹೆಚ್ ಎಂ ಕೃಷ್ಣಮೂರ್ತಿ ಅವರು, ನಾನು ಎಂಟು ವರ್ಷಗಳ ಹಿಂದೆ ನಟಿಸಿದ್ದ ಜೇಡ್ರಳ್ಳಿ ಚಿತ್ರವು ಕೆಲವೇ ದಿನಗಳಲ್ಲಿ ಸಿನಿಬಜಾರ್ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.