ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿದೆ. ಆದರೆ ಇದರ ನಡುವೆ ಬೇರೆ ದೇಶಗಳಿಗೆ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಹಸಿರು ನಿಶಾನೆ ತೋರಿದೆ.
ಇದರಿಂದ ಈಗಿರುವ ದಾಸ್ತಾನಿನ ಮೇಲೆ ಒತ್ತಡ ಬೀಳುವ ಆತಂಕ ಎದುರಾಗಿದ್ದು, ಅಕ್ಕಿ ಬೆಲೆಯೂ ಹೆಚ್ಚಾಗಲಿದೆ. ಮೇ ತಿಂಗಳ ಬೆಲೆಗಳಿಗೆ ಹೋಲಿಸಿದರೆ ಈಗ ಬೆಲೆಗಳು ಈಗಾಗಲೇ ಹೆಚ್ಚಾಗಿದೆ. ಪರಿಣಾಮವಾಗಿ, ಕರ್ನಾಟಕವು ಎಫ್‌ಸಿಐ ದರದಲ್ಲಿ ಅಕ್ಕಿಯನ್ನು ಸಂಗ್ರಹಿಸಲು ಹೆಚ್ಚು ಕಷ್ಟಕರವಾಗಬಹುದು.
ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಕರ್ನಾಟಕವು ತನ್ನ ಅನ್ನ ಭಾಗ್ಯ ಯೋಜನೆಯ ಭರವಸೆ ಈಡೇರಿಸಲು ಒಂದಲ್ಲ ಒಂದು ಅಡಚಣೆ ಎದುರಿಸುತ್ತಿದೆ. ಅಕ್ಕಿ ಸಿಗದ ಕಾರಣ ಜನರಿಗೆ ಅಕ್ಕಿಯ ಬೆಲೆಗೆ ಸಮಾನವಾದ ಹಣ ನೀಡುವುದನ್ನು ಬಿಟ್ಟು ಸರ್ಕಾರಕ್ಕೆ ಯಾವುದೇ ದಾರಿಯಿಲ್ಲದಂತಾಗಿದೆ.