ಬೆಂಗಳೂರು: ಖಾದಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಹಾಗೂ ಸ್ವದೇಶಿ ಉದ್ಯಮಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರ( state government ) ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಸಂಬಂಧ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯಗಳು ಮತ್ತು ಅನುದಾನಿತ ಸಂಸ್ಥೆಗಳ ಅಧಿಕಾರಿ-ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವ ಕುರಿತು ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಚರ್ಚೆ ನಡೆಸಿದ ನಂತರ, ಪ್ರತಿ ತಿಂಗಳ ಮೊದಲ ಶನಿವಾರ ಎಲ್ಲಾ ಸರ್ಕಾರಿ ಅಧಿಕಾರಿ-ನೌಕರರು ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರಿ ಸ್ವಾಮ್ಯದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮಳಿಗೆಗಳಿಂದ ಖಾದಿ ಬಟ್ಟೆಗಳನ್ನು ಖರೀದಿಸಲು ನೌಕರರಿಗೆ ಪ್ರೋತ್ಸಾಹ ನೀಡಲಾಗಿದ್ದು, ಈಗಾಗಲೇ ನೀಡಲಾಗುತ್ತಿರುವ ರಿಯಾಯಿತಿಯ ಹೊರತಾಗಿ ಅಧಿಕಾರಿ-ನೌಕರರಿಗೆ ಹೆಚ್ಚುವರಿಯಾಗಿ ಶೇ. 5 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಉಡುಪು ಸಂಹಿತೆಯ ಕುರಿತಾದ ಮಾರ್ಗಸೂಚಿಯನ್ನೂ ನೀಡಲಾಗಿದೆ. ಪುರುಷ ನೌಕರರು ಖಾದಿ ಬಟ್ಟೆಯ ಶರ್ಟ್-ಪ್ಯಾಂಟ್, ಓವರ್‌ಕೋಟ್ ಅಥವಾ ಇತರೆ ಶಿಸ್ತಿನ ಉಡುಗೆಗಳನ್ನು ಧರಿಸಬಹುದು. ಮಹಿಳಾ ನೌಕರರು ಖಾದಿ ಅಥವಾ ಖಾದಿ ಸಿಲ್ಕ್ ಸೀರೆ, ಚೂಡಿದಾರ್ ಹಾಗೂ ಇತರೆ ಶಿಸ್ತಿನ ಉಡುಗೆಗಳನ್ನು ಧರಿಸುವಂತೆ ಸೂಚಿಸಲಾಗಿದೆ.

ಈ ಯೋಜನೆಗೆ 2026ರ ಏಪ್ರಿಲ್ 21ರಂದು ನಡೆಯುವ ಸರ್ಕಾರಿ ನೌಕರರ ದಿನಾಚರಣೆ ಸಂದರ್ಭದಲ್ಲಿ ಅಧಿಕೃತ ಚಾಲನೆ ನೀಡಲಾಗುತ್ತದೆ. ಈ ಕುರಿತು ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಸುತ್ತೋಲೆ ಹೊರಡಿಸಲಾಗುವುದೆಂದು ತಿಳಿಸಲಾಗಿದೆ.











