ಭಾನುವಾರ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದರು. ಸೋಮವಾರ ಏರೋ ಇಂಡಿಯಾ 2023ರ ಉದ್ಘಾಟನೆಗಾಗಿ ಭಾನುವಾರ ಸಂಜೆಯೇ ಬೆಂಗಳೂರಿಗೆ ಬಂದಿದ್ದ ಪ್ರಧಾನಿ, ಕೆಲವು ಗಣ್ಯ ವ್ಯಕ್ತಿಗಳನ್ನು ಔತಣಕೂಟಕ್ಕೆ ಆಹ್ವಾನ ಮಾಡಿದ್ದರು. ಅದರಲ್ಲಿ ನಟ ಯಶ್, ನಟ ಹಾಗು ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗು ಸೋಶಿಯಲ್ ಮೀಡಿಯಾ ಸ್ಟಾರ್ ರೇಡಿಯೋ ಜಾಕಿ ಅಯ್ಯೋ ಶ್ರದ್ಧಾ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ದಂಪತಿ, ವೆಂಕಟೇಶ್ ಪ್ರಸಾದ್ ದಂಪತಿ, ಜಾವಗಲ್ ಶ್ರೀನಾಥ್, ಮಯಾಂಕ್ ಅಗರ್ವಾಲ್ ಹಾಗು ಮನೀಷ್ ಪಾಂಡೆ ಕೂಡ ಔತಣ ಕೂಟದಲ್ಲಿ ಭಾಗಿಯಾಗಿ ಮಾತುಕತೆ ನಡೆಸಿದ್ರು.ಇಷ್ಟು ಜನರನ್ನು ಮಾತ್ರ ಔತಣ ಕೂಟಕ್ಕೆ ಆಹ್ವಾನ ಮಾಡಿದ್ದು ಯಾಕೆ..? ಅದು ಯಾವ ಆಧಾರದಲ್ಲಿ ಆಯ್ಕೆ ನಡೀತು ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಾಂತಾರ ಪ್ರಸಿದ್ಧಿಯೇ ಆಯ್ಕೆಗೆ ಮಾನದಂಡ ಆಯ್ತಾ..!?
ಕನ್ನಡದ ಕಾಂತಾರ ಸಿನಿಮಾ ಕನ್ನಡದಲ್ಲೇ ಚಿತ್ರೀಕರಣ ಆಗಿದ್ದರೂ ದೇಶಾದ್ಯಂತ ಎಲ್ಲಾ ಭಾಷೆಗಳಲ್ಲೂ ಡಬ್ಬಿಂಗ್ ಆಗಿ ಬಿಡುಗಡೆ ಆಗಿತ್ತು. ಕೆಲವೇ ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ ಬರೋಬ್ಬರಿ 400 ಕೋಟಿ ರೂಪಾಯಿ ಕಲೆಕ್ಟ್ ಮಾಡಿಕೊಂಡಿತ್ತು. ಅದರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗು ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಬಹುದು. ಆದರೆ ನಟ ನಿರ್ದೇಶದ ರಿಷಬ್ ಶೆಟ್ಟಿ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಪ್ರಧಾನಿ ಮೋದಿ ಬಗ್ಗೆ ಒಳ್ಳೆಯ ಮಾತನಾಡಿ, ರಾಹುಲ್ ಗಾಂಧಿ ಬಗ್ಗೆ ಪ್ರಶ್ನಿಸಿದಾಗ ನೋ ಕಾಮೆಂಟ್ಸ್ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಇನ್ನು ನಿರ್ಮಾಪಕ ವಿಜಯ್ ಕಿರಗಂದೂರು ಸಚಿವ ಅಶ್ವತ್ಥನಾರಾಯಣ ಭಾವ ಆಗಿರುವುದಕ್ಕೆ ಆಯ್ಕೆ ಮಾಡಲಾಯ್ತಾ..? ಇನ್ನು ನಟ ಯಶ್ ಕೂಡ ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ.
ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆಮಾಡಿದ್ದು ತಪ್ಪೇನು..?
ರಾಜಭವನದಲ್ಲಿ ದಿಗ್ಗಜರ ಜೊತೆ ಡಿನ್ನರ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದು ತಪ್ಪೇನು ಅಲ್ಲ ಎನ್ನಬಹುದು. ಆದರೆ ಚಿತ್ರರಂಗದಲ್ಲಿ ಈಗ ಹಿರಿಯರಾದ ಶಿವಣ್ಣ, ಉತ್ತಮ ಜ್ಞಾನ ಹೊಂದಿರುವ ರಮೇಶ್ ಅರವಿಂದ್, ಕಿಚ್ಚ ಸುದೀಪ್ರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಪ್ರಚಾರದ ತಂತ್ರಕ್ಕಾಗಿ ಸಿನಿಮಾ ನಟರನ್ನು ಬಳಕೆ ಮಾಡಿಕೊಂಡ್ರಾ..? ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳನ್ನು ಸೆಳೆಯುವ ಉದ್ದೇಶದಿಂದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಭಾರತೀಯ ಜನತಾ ಪಾರ್ಟಿ ಬಳಸಿಕೊಳ್ತಿದ್ಯಾ ಎನ್ನುವ ಅನುಮಾನ ಅಪ್ಪು ಅಭಿಮಾನಿಗಳನ್ನು ಕಾಡುತ್ತಿದೆ. ಪುನೀತ್ ರಾಜ್ಕುಮಾರ್ ಅಗಲಿಕೆಗೆ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ. ಪುನೀತ್ ಅವರ ಅಗಲಿಕೆ ದೇಶಕ್ಕೆ ಆದ ನಷ್ಟ. ಅಭಿಮಾನಿಗಳ ಜೊತೆ ನನಗೂ ನೋವಾಗಿದೆ. ಅಪ್ಪು ನಟನೆಯ ಸಾಕ್ಷ್ಯಚಿತ್ರ ಗಂಧದಗುಡಿ ಅದ್ಭುತ ಚಿತ್ರ. ಪುನೀತ್ ಸ್ಥಾಪಿಸಿದ ಪಿಆರ್ಕೆ ಪ್ರೊಡಕ್ಷನ್ನಲ್ಲಿ ಹೊಸಬರಿಗೆ ಅವಕಾಶ ಕೊಡ್ತಿರುವ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.
ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಮೋದಿ ಡಿನ್ನರ್..!
ಪ್ರಧಾನಿ ನರೇಂದ್ರ ಮೋದಿ ಮುಂಬರುವ ಚುನಾವಣೆಗಾಗಿ ತಿಂಗಳಿಗೆ ಮೂರ್ನಾಲ್ಕು ಬಾರಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಜನರನ್ನು ಸೆಳೆಯುವ ಉದ್ದೇಶದಿಂದ ಒಂದೊಂದೇ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಇದು ಕೇವಲ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಆರ್.ಜೆ.ಶ್ರದ್ಧಾ ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ಸಮಸ್ಯೆಗಳ ಬಗ್ಗೆ ಏಕಪಾತ್ರಾಭಿನಯದ ಮೂಲಕವೇ ಸಾಮಾಜಿಕ ಕ್ರಾಂತಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಮನ್ನಣೆ ಪಡೆದಿರುವ ಕಾರಣಕ್ಕೆ ಶ್ರದ್ಧಾ ಅವರನ್ನು ಆಯ್ಕೆ ಮಾಡಲಾಗಿತ್ತು. ಪ್ರಧಾನಿ ಕೂಡ ಅಯ್ಯೋ ಶ್ರದ್ಧಾ ಅಂತಾನೇ ಗುರುತಿಸಿದ್ದು ವಿಶೇಷ. ಇನ್ನು ಕರ್ನಾಟಕದಿಂದ ಖ್ಯಾತಿ ಪಡೆದ ಕ್ರಿಕೆಟಿಗರನ್ನು ಔಟಣ ಕೂಟಕ್ಕೆ ಕರೆದಿದ್ದು ಕೇವಲ ಪ್ರಚಾರದ ತಂತ್ರವೇ ಆಗಿದೆ ಎನ್ನುವುದು ಸತ್ಯ.