SARS-CoV-2 ನ ಓಮಿಕ್ರಾನ್ (Omicron) ರೂಪಾಂತರವು ಮಾನವ ಶ್ವಾಸನಾಳದಲ್ಲಿ ಡೆಲ್ಟಾ ರೂಪಾಂತರ ಮತ್ತು ಮೂಲ ಕೋವಿಡ್ ಗಿಂತ ವೇಗವಾಗಿ ಸೋಂಕನ್ನು ಹರಡುತ್ತದೆ. ಆದರೆ ಇದು ಶ್ವಾಸಕೋಶದ ಕೆಳಭಾಗಕ್ಕೆ ಸುಲಭವಾಗಿ ಸೋಂಕು ಹರಡುವುದಿಲ್ಲ ಮತ್ತು ಓಮಿಕ್ರಾನ್ ಪ್ರಕರಣಗಳಲ್ಲಿ ತೀವ್ರತರವಾದ ಕಾಯಿಲೆಯ ನಿದರ್ಶನಗಳು ಡೆಲ್ಟಾ ಮತ್ತು ಮೂಲ ಕೋವಿಡ್ ವೈರಸ್‌ಗೆ ಹೋಲಿಸಿದರೆ ತುಂಬಾ ಕಡಿಮೆ ಎಂದು ಹಾಂಗ್ ಕಾಂಗ್ ವಿಶ್ವವಿದ್ಯಾಲಯದ LKS ಫ್ಯಾಕಲ್ಟಿ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ .
ಸಂಶೋಧಕರು ಹೊಸದಾಗಿ ಮಂಡಿಸಿರುವ ಸಂಶೋಧನಾ ಪ್ರಬಂಧವನ್ನು ಇನ್ನೂ ಪರಿಶೀಲಿಸಲಾಗುತ್ತಿದೆಯಷ್ಟೇ. ಆದರೂ, ಹಿಂದಿನ ರೂಪಾಂತರಗಳಿಗೆ ಹೋಲಿಸಿದರೆ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟುಮಾಡುವಲ್ಲಿ ವೈರಸ್ ಏಕೆ ಕಡಿಮೆ ಯಶಸ್ವಿಯಾಗಿದೆ ಎಂಬುವುದನ್ನು ಈ ಸಂಶೋಧನೆಯು ವಿವರಿಸುವುದಿಲ್ಲ.
ಶ್ವಾಸನಾಳದ ವೈರಲ್ ಕಾಯಿಲೆಗಳನ್ನು ಪತ್ತೆಹಚ್ಚುವಾಗ ತೆಗೆದುಹಾಕಲಾಗುವ ಶ್ವಾಸಕೋಶದ ಅಂಗಾಶವನ್ನು ಬಳಸಿ ಈ ಸಂಶೋಧನೆಯನ್ನು ಕೈಗೊಳ್ಳಲಾಗಿದೆ. Omicron SARS-CoV-2 ರೂಪಾಂತರವನ್ನು ಪ್ರತ್ಯೇಕಿಸಿದ ನಂತರ, 2020 ರ ಮೂಲ SARS-CoV-2, ಡೆಲ್ಟಾ ರೂಪಾಂತರ ಮತ್ತು Omicron ರೂಪಾಂತರದೊಂದಿಗೆ ಹೋಲಿಸಿ ನೋಡಲಾಯಿತು. 24 ಗಂಟೆಗಳಲ್ಲಿ ಡೆಲ್ಟಾ ರೂಪಾಂತರ ಮತ್ತು ಮೂಲ SARS-CoV-2 ವೈರಸ್‌ಗಿಂತ ಓಮಿಕ್ರಾನ್ ಸುಮಾರು 70 ಪಟ್ಟು ವೇಗವಾಗಿ ಹರಡುತ್ತದೆ ಎಂದು ಸಂಶೋಧಕರು ಕಂಡುಕೊಂಡರು. ಇದಕ್ಕೆ ವ್ಯತಿರಿಕ್ತವಾಗಿ, ಓಮಿಕ್ರಾನ್ ರೂಪಾಂತರವು ಮೂಲ SARS-CoV-2 ವೈರಸ್‌ಗಿಂತ ಶ್ವಾಸಕೋಶದ ಅಂಗಾಂಶದಲ್ಲಿ ಕಡಿಮೆ ಪರಿಣಾಮಕಾರಿಯಾಗಿ (10 ಪಟ್ಟು ಕಡಿಮೆ) ಪುನರಾವರ್ತಿಸುತ್ತದೆ ಎಂಬುವುದನ್ನೂ ಕಂಡುಹಿಡಿಯಲಾಯಿತು.
ಆದರೆ “ರೋಗದ ತೀವ್ರತೆಯನ್ನು ವೈರಸ್ ಪುನರಾವರ್ತನೆಯಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ ಅದನ್ನು ಪ್ರತಿರಕ್ಷಣಾ ಪ್ರತಿಕ್ರಿಯೆಯಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ, ಇದು ಸಹಜ ಪ್ರತಿರಕ್ಷಣಾ ವ್ಯವಸ್ಥೆಯ ನಿಯಂತ್ರಣ ತಪ್ಪಲೂ ಕಾರಣವಾಗಬಹುದು” ಎಂದು ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಈ ಅಧ್ಯಯನದ ಮುಖ್ಯಸ್ಥರಾಗಿರುವ ಡಾ. ಮೈಕೆಲ್ ಚಾನ್ ಚಿ-ವೈ ಹೇಳಿದ್ದಾರೆ.” ವೈರಸ್ ಸ್ವತಃ ಕಡಿಮೆ ರೋಗಕಾರಕವಾಗಿದ್ದರೂ ಸಹ ಹೆಚ್ಚು ಜನರಿಗೆ ಸೋಂಕು ತಗುಲಿಸುವ ಮೂಲಕ ಹೆಚ್ಚು ತೀವ್ರವಾದ ರೋಗ ಮತ್ತು ಸಾವಿಗೆ ಕಾರಣವಾಗಬಹುದು. ಆದ್ದರಿಂದ, ಓಮಿಕ್ರಾನ್ ರೂಪಾಂತರವು ಲಸಿಕೆಗಳಿಂದಲೂ ಪಾರಾಗುತ್ತವೆ ಎಂದು ತೋರಿಸುವ ನಮ್ಮ ಇತ್ತೀಚಿನ ಅಧ್ಯಯನಗಳನ್ನು ಒಟ್ಟಾಗಿ ತೆಗೆದುಕೊಂಡರೆ, ಒಮಿಕ್ರಾನ್ ರೂಪಾಂತರ ಒಡ್ಡಿರುವ ಒಟ್ಟಾರೆ ಬೆದರಿಕೆಯು ಬಹಳ ಮಹತ್ವದ್ದಾಗಿದೆ” ಎಂದೂ ಅವರು ಹೇಳುತ್ತಾರೆ.
ಭಾರತವು ಇಲ್ಲಿಯವರೆಗೆ ಓಮಿಕ್ರಾನ್ ರೂಪಾಂತರದ ಕನಿಷ್ಠ 73 ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಈ ರೂಪಾಂತರದ ಮೂಲವಾದ ದಕ್ಷಿಣ ಆಫ್ರಿಕಾದ ಅಧ್ಯಯನದ ವರದಿಗಳು, ಓಮಿಕ್ರಾನ್ ಉಲ್ಬಣವು ವೇಗವಾಗಿ ಏರಿಕೆ ಕಂಡಿದೆ ಹಾಗೂ ಸುಮಾರು 78,000 ಪಾಸಿಟಿವ್ ಪ್ರಕರಣಗಳಲ್ಲಿ ಕನಿಷ್ಠ ನಾಲ್ಕನೇ ಒಂದು ಭಾಗವು ಓಮಿಕ್ರಾನ್ ರೂಪಾಂತರವಾಗಿದೆ ಎಂದು ಸೂಚಿಸುತ್ತದೆ. ಇತ್ತೀಚಿನ ಅಧ್ಯಯನಗಳು ಲಸಿಕೆ ಪಡೆದುಕೊಂಡವರಲ್ಲೂ ಓಮಿಕ್ರಾನ್ ವಿರುದ್ಧ ಉತ್ಪತ್ತಿಯಾಗುವ ಪ್ರತಿಕಾಯಗಳು ಡೆಲ್ಟಾ ರೂಪಾಂತರಗಳಿಗಿಂತ 20-40 ಪಟ್ಟು ಕಡಿಮೆ ಎಂದು ಸೂಚಿಸಿವೆ.
ಯುನೈಟೆಡ್ ಕಿಂಗ್‌ಡಮ್ ಇಲ್ಲಿಯವರೆಗೆ ಸುಮಾರು 10,000 ಒಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಕನಿಷ್ಠ 10 ಜನರು ಅಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಪ್ರಸ್ತುತ ದಿನವೊಂದಕ್ಕೆ ಸುಮಾರು 80,000 ಪ್ರಕರಣಗಳು ವರದಿಯಾಗುತ್ತಿವೆ. ಭಾರತದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ದಿನಕ್ಕೆ 5,000 ಕ್ಕೆ ಇಳಿದಿತ್ತು. ಆದರೆ ಗುರುವಾರ ಈ ಸಂಖ್ಯೆ ಸುಮಾರು 7,000 ಕ್ಕೆ ಏರಿಕೆ ಕಂಡಿದೆ ಮತ್ತು ಕೇರಳದಿಂದ ಸುಮಾರು 3,500 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಹೆಚ್ಚಿನವು ಡೆಲ್ಟಾ ಮತ್ತು ಅದರ ಸಂಬಂಧಿತ ರೂಪಾಂತರಗಳನ್ನು ಒಳಗೊಂಡಿವೆ ಎಂದು ವರದಿಯಾಗಿದೆ.
SARS-CoV2 ರೂಪಾಂತರಗಳ ಸಂಶೋದನೆಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿರುವ ಹಾಗೂ CSIR-IGIB ನಿರ್ದೇಶಕರಾಗಿರುವ ಅನುರಾಗ್ ಅಗರವಾಲ್ ಈ ಹೊಸ ಅಧ್ಯಯನವನ್ನು ‘ಆಸಕ್ತಿದಾಯಕ ಟ್ವಿಸ್ಟ್’ ಎಂದಿದ್ದು “ಮೂಲ SARS CoV2 / ಡೆಲ್ಟಾಗೆ ಹೋಲಿಸಿದರೆ ಓಮಿಕ್ರಾನ್ ಶ್ವಾಸಕೋಶಕ್ಕಿಂತ ವಾಯುಮಾರ್ಗಗಳಲ್ಲಿ ಉತ್ತಮವಾಗಿ ಸೋಂಕು ತಗುಲಿಸುತ್ತದೆ ಮತ್ತು ಪುನರಾವರ್ತಿಸುತ್ತದೆ. ನ್ಯುಮೋನಿಯಾಕ್ಕಿಂತ ಕಡಿಮೆ ತೀವ್ರತೆಯನ್ನು ಹೊಂದಿದ್ದು ಮೇಲ್ಭಾಗದ ಶ್ವಾಸನಾಳದ ಸೋಂಕು ಸಾಮಾನ್ಯ ಶೀತದಂತೆಯೇ ಇರಬಹುದು. ಆದರೆ ನಾನು ಇನ್ನೂ ಬೆದರಿಕೆಯ ಮಟ್ಟ ಹೆಚ್ಚು ಎಂದು ಭಾವಿಸುತ್ತೇನೆ” ಎಂಬುವುದಾಗಿ ಟ್ವೀಟ್ ಮಾಡಿದ್ದಾರೆ.