ಹುಬ್ಬಳ್ಳಿ,:”ಬಿಜೆಪಿ ಸರ್ಕಾರ ಈ ಹಿಂದೆ ತನ್ನ ಪಕ್ಷದ ಕಾರ್ಯಕರ್ತರು, ಆರ್ ಎಸ್ ಎಸ್, ಭಜರಂಗದಳದವರ ಮೇಲಿದ್ದ ಅನೇಕ ಪ್ರಕರಣಗಳನ್ನು ವಾಪಾಸ್ ಪಡೆದಿತ್ತು. ರಾಜಕೀಯ ಕಾರಣಕ್ಕೆ ಹಳೇ ಹುಬ್ಬಳ್ಳಿ ಪ್ರಕರಣದ ಕುರಿತು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಾಸ್ ಪಡೆದಿರುವ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಉತ್ತರಿಸಿದ ಅವರು “ಬಿಜೆಪಿ ಕಾಲದಲ್ಲಿ ಎಷ್ಟು ಕೇಸ್ ಗಳನ್ನು ವಾಪಾಸ್ ಪಡೆಯಲಾಗಿತ್ತು ಎನ್ನುವ ಬಗ್ಗೆ ತಿಳಿದಿದೆಯೇ? ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ” ಎಂದು ಹೇಳಿದರು.
ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.ಇದು ಸುಳ್ಳೇ ಎಂದು ಕೇಳಿದಾಗ “ರಾಜಕೀಯ ಒತ್ತಡಗಳಿಗೆ ಈ ರೀತಿ ಆಗಿರುತ್ತದೆ. ಪ್ರಕರಣ ದಾಖಲಾಗಿದ್ದವರದ್ದು ಯಾವುದೇ ತಪ್ಪಿಲ್ಲ ಎಂದು ಸಾಬೀತಾಗಿದೆ.ನಾವು ನ್ಯಾಯವನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿದ್ದೇವೆ. ಇತರೇ ವಿಚಾರಗಳ ಬಗ್ಗೆ ಆನಂತರ ಮಾತನಾಡೋಣ” ಎಂದರು.
ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಕ್ಷ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ಇದಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ನೀಡಿದ್ದಾರೆ” ಎಂದರು.