ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರಾಕ್ಷೇಪಣಾ ಪತ್ರ (ಎನ್ಓಸಿ) ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಹಸಿರು ಪ್ರವರ್ಗದ ಕೈಗಾರಿಕಾ ಘಟಕಗಳಿಗೆ ಅನುಮತಿ ಕೋರಿ ಸಲ್ಲಿಸುವ ಅರ್ಜಿಗಳು ನಿಯಮಾನುಸಾರ ಇದ್ದಲ್ಲಿ 30 ದಿನಗಳೊಳಗೆ, ಕೇಸರಿ ಪ್ರವರ್ಗದ ಅರ್ಜಿಗಳನ್ನು 45 ದಿನಗಳ ಒಳಗೆ ಮತ್ತು ಕೆಂಪು ಪ್ರವರ್ಗದ ನಿರಾಕ್ಷೇಪಣಾ ಪತ್ರ ಕೋರಿ ಸಲ್ಲಿಸುವ ಅರ್ಜಿಗಳನ್ನು 90 ದಿನಗಳೊಳಗೆ ಇತ್ಯರ್ಥಪಡಿಸಬೇಕು,” ಎಂದು ಆದೇಶ ನೀಡಿದರು.
“ಮಂಡಳಿಯಲ್ಲಿ 1400ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಈ ರೀತಿ ವಿಳಂಬ ಮಾಡುವುದು ಸರಿಯಲ್ಲ. ಹೀಗಾಗಿ, ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿಯಾಗಬೇಕು. ಅನಗತ್ಯವಾಗಿ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು,” ಎಂದು ಎಚ್ಚರಿಕೆ ನೀಡಿದರು.