ರಾಜ್ಯದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಜಾತಿಗಳು ಎಂದರೆ ಒಕ್ಕಲಿಗರು ಹಾಗು ಲಿಂಗಾಯತರು ಎನ್ನುವುದು ಅಲಿಖಿತ ನಿಯಮ. ಯಾವುದೇ ಸರ್ಕಾರ ಜಾರಿಗೆ ಬಂದರೂ ಯಾವುದೇ ನಾಯಕರು ಮುಖ್ಯಮಂತ್ರಿ ಆದರೂ ಕೂಡ ಸಚಿವ ಸಂಪುಟದಲ್ಲಿ ಲಿಂಗಾಯತ ಹಾಗು ಒಕ್ಕಲಿಗ ಸಮುದಾಯ ನಾಯಕರು ಪ್ರಮುಖ ಖಾತೆಗಳು ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಎನ್ನುವುದು ಇಲ್ಲೀವರೆಗೂ ನಡೆದುಕೊಂಡು ಬಂದಿರುವ ವಿಚಾರ. ಆದರೆ ಇನ್ಮುಂದೆ ಈ ರೀತಿ ರಾಜಕೀಯ ಪ್ರಭಾವ ಕಡಿಮೆ ಆಗುತ್ತೆ ಅನ್ನೋ ಆತಂಕ ಎರಡೂ ಸಮುದಾಯದ ನಾಯಕರನ್ನು ಕಾಡುತ್ತಿದೆ. ಇದಕ್ಕೆ ಜಾತಿಗಣತಿ ಕಾರಣ ಆಗಿದೆ. ಈ ರೀತಿಯ ಆತಂಕವನ್ನು ಸೃಷ್ಟಿಸಿರುವುದು ಸಿದ್ದರಾಮಯ್ಯ ಸರ್ಕಾರ ತೆಗೆದುಕೊಳ್ತಿರೋ ನಿರ್ಧಾರ.
ಜಾತಿಗಣತಿ ಬಿಡುಗಡೆಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ..
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಜಾತಿಗಣತಿ ಮಾಡಿಸುವುದಾಗಿ ಈಗಾಗಲೇ ರಾಹುಲ್ ಗಾಂಧಿ ಘೋಷಣೆ ಮಾಡಿ ಆಗಿದೆ. ಆದರೆ ಅದಕ್ಕೂ ಮೊದಲೇ ಕರ್ನಾಟಕದಲ್ಲಿ ಈಗಾಗಲೇ ತಯಾರಾಗಿರುವ ಜಾತಿಗಣತಿ ಬಿಡುಗಡೆ ಮಾಡಲು ಅಂದಿನ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕಿತ್ತು. ಆ ಬಳಿಕ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲೂ ಮೌನಕ್ಕೆ ಶರಣಾಗಿತ್ತು. ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಮಾತ್ರ ಜಾತಿಗಣತಿ ಬಿಡುಗಡೆ ಮಾಡುವ ಬಗ್ಗೆ ಚಕಾರ ಎತ್ತದೆ ಸುಮ್ಮನಾಗಿತ್ತು. ಆದರೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾತಿಗಣತಿ ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿದೆ. ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡ ಒಕೆ ಹೇಳಿದೆ ಎನ್ನಲಾಗಿದೆ. ಅದರಲ್ಲೂ ರಾಹುಲ್ ಗಾಂಧಿ ಜಾತಿಗಣತಿ ಬಗ್ಗೆ ಬಹಿರಂಗ ಹೇಳಿಕೆ ಜೊತೆಗೆ ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆಯೂ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಜಾತಿಗಣತಿ ಬಿಡುಗಡೆಗೆ ಚರ್ಚೆ ನಡೆಸಿರುವ ಸಿಎಂ ಸಿದ್ದರಾಮಯ್ಯ..
ಜಾತಿಗಣತಿ ಬಿಡುಗಡೆಗೆ ಕಾಂಗ್ರಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಿದ್ದ ಹಾಗೆ ರಾಜ್ಯ ಸರ್ಕಾರ ಆ್ಯಕ್ಟೀವ್ ಆಗಿದ್ದು, ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಹೊಂದಿರೋ ಪ್ರಬಲ ಜಾತಿಗಳ ವಿರೋಧದ ನಡುವೆಯೂ ಜಾತಿಗಣತಿ ಬಿಡುಗಡೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಪ್ರಬಲ ನಾಯಕರ ವಿರೋಧ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೈ ಕೊಡುತ್ತಾರಾ..? ಅನ್ನೋ ಲೆಕ್ಕಾಚಾರವೂ ಶುರುವಾಗಿದೆ. ಲಾಭ ತರುವ ಲೆಕ್ಕಾಚಾರದಲ್ಲಿ ವರದಿ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಚಿಂತನೆ ಮಾಡಿದ್ದಾರೆ ಎನ್ನಲಾಗ್ತಿದೆ. ರಾಹುಲ್ ಗಾಂಧಿ ಅಭಯ ಸಿಕ್ಕಿರುವ ಹಿನ್ನೆಲೆ, ಜಾತಿಗಣತಿ ಬಿಡುಗಡೆಗೆ ಉತ್ಸುಕತೆ ತೋರಿಸಿದ್ದು, ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ಸಭೆ ಮಾಡಿದ್ದಾರೆ. ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಜೊತೆಗೂ ಸಭೆ ಮಾಡಿದ್ದು, ವರದಿಯ ಕೆಲಸದ ಬಗ್ಗೆ ವಿಸ್ತೃತ ಚರ್ಚೆ ಮಾಡಿದ್ದು, ಯಾವ ಹಂತದಲ್ಲಿ ಕೆಲಸ ಸಾಗುತ್ತಿದೆ..? ವರದಿಯನ್ನು ಯಾವಾಗ ಕೊಡಬಹುದು. ವರದಿಯ ಸಾಧಕ- ಬಾಧಕಗಳ ಬಗ್ಗೆ ಸಭೆ ನಡೆಸಲಾಗಿದೆ.
ಕಾಂಗ್ರೆಸ್‌ಗೆ ರಾಜಕೀಯ ಲಾಭ ತರುವುದು ಹೇಗೆ..?
ಕಾಂಗ್ರೆಸ್ ಜಾತಿಗಣತಿ ಹಿಂದೆ ಬಿದ್ದಿರುವುದು ಸರಿಯೋ ತಪ್ಪೋ..? ಅನ್ನೋದು ಬೇರೆ ಸಂಗತಿ. ಆದರೆ ಕಾಂಗ್ರೆಸ್ ಮಾತ್ರ ರಾಜಕೀಯ ಲಾಭ ತಂದುಕೊಂಡುವ ಲೆಕ್ಕಾಚಾರದಲ್ಲಿದೆ. ರಾಜ್ಯದಲ್ಲಿ ಒಕ್ಕಲಿಗರು ಹಾಗು ಲಿಂಗಾಯತ ಸಮುದಾಯ ರಾಜಕೀಯವಾಗಿ ಹೆಚ್ಚಿನ ಶಕ್ತಿ ಪಡೆದುಕೊಂಡಿದೆ. ಆದರೆ ರಾಜ್ಯದಲ್ಲಿ ಪರಿಶಿಷ್ಟ ವರ್ಗ ಹಾಗು ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆ ಇದ್ದಾರೆ. ಅದೇ ರೀತಿಯಲ್ಲಿ ಮುಸ್ಲಿಮರು ಕೂಡ ಹೆಚ್ಚಿನ ಜನಸಂಖ್ಯೆ ಹೊಂದಿದ್ದಾರೆ ಎನ್ನುವುದು ವರದಿಯಲ್ಲಿದೆ ಎನ್ನಲಾಗ್ತಿದೆ. ಈ ಸಮುದಾಯಗಳು ರಾಜ್ಯದಲ್ಲಿ ಹೆಚ್ಚಾಗಿದ್ದಾರೆ ಎಂದು ರಾಜ್ಯದ ಎದುರಿಗೆ ಇಟ್ಟರೆ, ಆ ಸಮುದಾಯಗಳ ಮತಗಳು ಕಾಂಗ್ರೆಸ್‌ಗೆ ಬರಲಿವೆ ಅನ್ನೋದು ಕಾಂಗ್ರೆಸ್ ನಾಯಕರ ಲೆಕ್ಕ. ಅದೂ ಸತ್ಯವೂ ಕೂಡ ಇರಬಹುದು. ಈಗಾಗಲೇ ಕಳೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಕಾಂಗ್ರೆಸ್ ಬೆಂಬಲಿಸಿತ್ತು. ಇದೀಗ ಬಲಾಢ್ಯ ಸಮುದಾಯಗಳು ಪರಿಶಿಷ್ಟ ವರ್ಗ ಹಾಗು ಪರಿಶಿಷ್ಟ ಪಂಗಡ ಎಂದು ಘೋಷಣೆ ಮಾಡುವ ಮೂಲಕ ಲಾಭ ಪಡೆಯುವ ಲೆಕ್ಕಾಚಾರದಲ್ಲಿದೆ ಎನ್ನಬಹುದು.
ಕೃಷ್ಣಮಣಿ









