ಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿರುವ ಹೇಳಿಕೆಯ ವಿರುದ್ಧ ನೆರೆಯ ಮತ್ತು ವಿಶ್ವಾಸಾರ್ಹ ದೇಶವಾದ ಮಾಲ್ಡೀವ್ಸ್ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ಕತಾರ್, ಕುವೈತ್, ಇರಾನ್, ಸೌದಿ ಅರೇಬಿಯಾ, ಜೋರ್ಡಾನ್ ಸೇರಿದಂತೆ 13 ದೇಶಗಳು ಅಸಮಾಧಾನ ವ್ಯಕ್ತಪಡಿಸಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಏಳುತ್ತಿರುವ ಈ ಚಂಡಮಾರುತದಿಂದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಭಾರತದ ನಡೆಯನ್ನು ಸಮರ್ಥಿಸಿಕೊಂಡಿದ್ದಾರಾದರೂ ಇಲ್ಲಿನ ಮಾಜಿ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಬಿಜೆಪಿ ನಾಯಕರು ಈ ಬೆಳವಣಿಗೆಯ ದೂರಗಾಮಿ ಪರಿಣಾಮಗಳ ಬಗ್ಗೆ ಆತಂಕಗೊಂಡಿದ್ದಾರೆ.
ಇತ್ತೀಚೆಗೆ ನಡೆದ ಉಕ್ರೇನ್-ರಷ್ಯಾ ಸಂಘರ್ಷದಲ್ಲಿ ಭಾರತವು ರಷ್ಯಾದ ಪರವಾಗಿ ನಿಂತಿದೆ ಎಂಬುದು ಅಮೆರಿಕದ ಲೆಕ್ಕಾಚಾರ. ಇದೇ ಕಾರಣಕ್ಕೆ ಅಮೇರಿಕಾ ಕೆಲ ದಿನಗಳ ಹಿಂದೆ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಹೀಯಾಳಿಸುವ ಹೇಳಿಕೆ ನೀಡಿತ್ತು. ಈಗ ಇಸ್ಲಾಮಿಕ್ ಭಾರತದ ಕಡೆ ಕೆಂಗಣ್ಣು ಬೀರುವುದಕ್ಕೂ ಅಮೇರಿಕಾವೇ ಕಾರಣ ಎಂದಿ ಆರ್ಎಸ್ಎಸ್ ಜೊತೆ ನಂಟು ಹೊಂದಿರುವ ರವೀಂದ್ರ ಜೈಸ್ವಾಲ್ ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕಾ ಎತ್ತಿದ್ದ ಪ್ರಶ್ನೆ ಆ ದೇಶವನ್ನು ಬೆಂಬಲಿಸುವ ಯುಎಇ, ಕುವೈತ್, ಕತಾರ್ನಂತಹ ದೇಶಗಳಿಗೆ ಸಂಜ್ಞೆಯಾಗಿತ್ತು. ಇದಕ್ಕಾಗಿ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಭಾರತೀಯ ರಾಜತಾಂತ್ರಿಕರ ‘ಚೇಷ್ಟೆಯ ಅಂಶ’ ಎಂದು ಕರೆಯುವುದನ್ನು ಜೈಸ್ವಾಲ್ ಸಮರ್ಥಿಸುವುದಿಲ್ಲ. ಉತ್ತರ ಪ್ರದೇಶದ ಬಿಜೆಪಿಯ ಮಾಜಿ ಶಾಸಕ ಪ್ರಭಾಶಂಕರ್ ಪಾಂಡೆ ಕೂಡ ಈ ವಿಚಾರದಲ್ಲಿ ಪಕ್ಷವು ಬಹಳ ಎಚ್ಚರಿಕೆಯಿಂದ ಮುಂದಡಿ ಇಡಬೇಕು ಎಂದು ಹೇಳುತ್ತಾರೆ.
ಇಸ್ಲಾಮಿಕ್ ರಾಷ್ಟ್ರಗಳ ಕೋಪವನ್ನು ಭಾರತ ಹೇಗೆ ಎದುರಿಸಲಿದೆ?
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರ ಹೇಳಿಕೆ ನಂತರವೂ ಬಿಜೆಪಿ ನಾಯಕರು ಪ್ರವಾದಿ ಮೊಹಮ್ಮದ್ ವಿರುದ್ಧ ತೆಗೆದುಕೊಂಡ ನಿಲುವಿನ ಬಗ್ಗೆ ಅಸಮಾಧಾನ ಕಡಿಮೆ ಆಗುತ್ತಿಲ್ಲ. ಅಸಮಾಧಾನ ಕಡಿಮೆ ಮಾಡಲು ಭಾರತೀಯ ರಾಜತಾಂತ್ರಿಕರು ತಮ್ಮ ಮಟ್ಟದಿಂದ ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ವಿದೇಶಾಂಗ ಸಚಿವರು ಅಥವಾ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕಾಗಬಹುದು ಎಂದು ವಿದೇಶಾಂಗ ವ್ಯವಹಾರಗಳ ತಜ್ಞ ಮತ್ತು ಹಿರಿಯ ಪತ್ರಕರ್ತ ರಂಜಿತ್ ಕುಮಾರ್ ಹೇಳುತ್ತಾರೆ. ಸಮಸ್ಯೆಯು ಗಂಭೀರವಾಗುತ್ತಿದ್ದು, ಅಂತರರಾಷ್ಟ್ರೀಯ ಸಮುದಾಯಕ್ಕೆ ವಿಶ್ವಾಸ ನೀಡಲು ಭಾರತವು ಉಪಕ್ರಮವನ್ನು ತೆಗೆದುಕೊಳ್ಳಬೇಕಾಗಬಹುದು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮನಿಂದೆಯ ಸೂಕ್ಷ್ಮತೆಯನ್ನು ಅರಿತು ಭಾರತ ಮುಂದೆ ಬರಬೇಕಿದೆ ಎಂದು ಮಾಜಿ ರಾಜತಾಂತ್ರಿಕ ಎಸ್.ಕೆ. ಶರ್ಮಾ ಹೇಳಿದ್ದಾರೆ. ಆಶ್ವಾಸನೆ ನೀಡಿದ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದನ್ನೂ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.
ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಇನ್ನೂ ಗಲಾಟೆ ನಡೆಯುತ್ತಿದೆ. ಭಾರತೀಯ ವಸ್ತುಗಳ ಬಹಿಷ್ಕಾರದ ಸಂದೇಶ ವೇಗವಾಗಿ ಹರಡುತ್ತಿದೆ. ಯುಎಇ, ಕತಾರ್, ಕುವೈತ್ ಸೇರಿದಂತೆ ಎಲ್ಲಾ ದೇಶಗಳಲ್ಲಿ ಅನೇಕ ಭಾರತೀಯರು ವಾಸಿಸುತ್ತಿದ್ದಾರೆ. ಭಾರತೀಯ ರೆಸ್ಟೋರೆಂಟ್ಗಳಿವೆ ಮತ್ತು ಹೆಚ್ಚಿನ ಸಂಖ್ಯೆಯ ಸರಕುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಇದೇ ರೀತಿಯ ಟ್ರೆಂಡ್ ಮುಂದುವರಿದರೆ ತೊಂದರೆ ಎದುರಾಗಬಹುದು.

ಏಕರೂಪ ನಾಗರಿಕ ಕಾನೂನಿನ ಕರಡು ಸ್ಥಗಿತವಾಗಲಿದೆಯೇ?
ಕಾನೂನು ಸಚಿವ ಕಿರಣ್ ರಿಜಿಜು ಅವರು ದೇಶದಲ್ಲಿ ಏಕರೂಪದ ನಾಗರಿಕ ಕಾನೂನನ್ನು ಪರಿಚಯಿಸುವುದು ಸೂಕ್ತವೆಂದು ಹೇಳಿದ್ದಾರೆ. ಕಾನೂನು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೂಡ ಎರಡು ವಾರಗಳ ಹಿಂದೆ ಇಂತಹ ಕಾನೂನಿನ ಪರವಾಗಿದ್ದರು. ಆದರೆ ಟಿವಿ ಚರ್ಚೆಯಲ್ಲಿ ನೂಪುರ್ ಶರ್ಮಾ ಅವರ ಹೇಳಿಕೆ ಹೊರಬಂದ ನಂತರ ಅವರು ಈ ಕಾನೂನಿನ ಕರಡು ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ತಯಾರಿಲ್ಲ.
ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿರುದ್ಧ ತೆಗೆದುಕೊಂಡಿರುವ ಕ್ರಮದಿಂದ ಬಿಜೆಪಿ ಅಂತರರಾಷ್ಟ್ರೀಯ ಸಮುದಾಯವೂ ತೃಪ್ತವಾದಂತಿಲ್ಲ. ಬಿಜೆಪಿಯ ಕೆಲವರು ಇದು ದೊಡ್ಡ ವಿಷಯವಲ್ಲ ಎಂದು ಹೇಳಬಹುದು. ಆದರೆ ಕೇಂದ್ರದ ಬಿಜೆಪಿ ಸರ್ಕಾರದ ಬಗ್ಗೆ ಅಂತಾರಾಷ್ಟ್ರೀಯ ಸಮಯದಾಯದಲ್ಲೂ ‘ಇದು ಕೋಮುವಾದಿ ಸರ್ಕಾರ’ ಎಂಬ ಅಭಿಪ್ರಾಯ ಇದೆ ಎಂಬುದನ್ನು ಅವರು ಮರೆಯಬಾರದು. ತ್ರಿವಳಿ ತಲಾಖ್ ಅಥವಾ ಸಿಎಎ, ಎನ್ಆರ್ಸಿ ವಿಷಯಗಳಲ್ಲೂ ಮೋದಿ ಸರ್ಕಾರದ ಮೇಲೆ ಇಂತಹುದೇ ಆರೋಪಗಳು ಕೇಳಿಬಂದಿದ್ದವು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಏನು?
ಧಾರ್ಮಿಕ ಸಹಿಷ್ಣುತೆಗೆ ಕನ್ನಡಿ ತೋರಿಸುವ ದೇಶಗಳಿಗೆ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಎಚ್ಚರಿಕೆ ನೀಡಿದ್ದಾರೆ. ಧರ್ಮ ಸಹಿಷ್ಣುತೆಯ ವಿಷಯದಲ್ಲಿ ಭಾರತವು ಯಾರಿಂದಲೂ ಕಲಿಯಬೇಕಾಗಿಲ್ಲ ಅಥವಾ ಅವರ ಉಪನ್ಯಾಸಗಳನ್ನು ಕೇಳಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ಜೊತೆಗೆ ಜೈವೀರ್ ಶೇರ್ಗಿಲ್ ಅವರು ಬಿಜೆಪಿಗೂ ಎಚ್ಚರಿಕೆ ನೀಡಿದ್ದಾರೆ. ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಬಿಜೆಪಿ ದೇಶದ ಜಾತ್ಯತೀತ ಗುರುತಿನೊಂದಿಗೆ ಆಟವಾಡಬಾರದು ಎಂದಿದ್ದಾರೆ. ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಇಸ್ಲಾಮೋಫೋಬಿಯಾದ ಮೂಲ ಸೃಷ್ಟಿಕರ್ತರಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ. ಬಿಜೆಪಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ತನ್ನ ಇಬ್ಬರು ವಕ್ತಾರರ ಮೇಲೆ ತೆಗೆದುಕೊಂಡಿದೆ ಎಂದು ಬಣ್ಣಿಸಿದ್ದಾರೆ. ಒಟ್ಟಿನಲ್ಲಿ ತನ್ನ ವಕ್ತಾರರಿಂದ ಬಿಜೆಪಿಯ ಅಂತಾರಾಷ್ಟ್ರೀಯ ವರ್ಚಸ್ಸಿಗೆ ಧಕ್ಕೆ ಆಗಿರುವುದಂತೂ ನಿಜ. ಅದನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಬಹಳ ಬೆವರು ಹರಿಸಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಭಾರತದ ವಿದೇಶಾಂಗ ನೀತಿಯ ಮೇಲೆ ದುಷ್ಪರಿಣಾಮ ಬೀರಲಿದೆ.