ಸಾಮಾಜಿಕ ಜಾಲತಾಣದಲ್ಲಿ ಮನಬಂದಂತೆ ಪೋಸ್ಟ್ ಮಾಡಿ ಪ್ರಚೋದನೆ ನೀಡುವ ಆರೋಪದಲ್ಲಿ ಬಡಪಾಯಿಗಳು ಅರೆಸ್ಟ್ ಆಗುವುದು, ಅವರ ಅಕೌಂಟ್ ಬ್ಲಾಕ್ ಆಗುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಈ ಸಾಮಾಜಿಕ ಜಾಲತಾಣ ಅನ್ನುವುದು ಅವರಿಗೆ ಮುಳುವಾಗುವ ಕಾಲ ಬಂದಿದೆ.
ಬಾಲಿವುಡ್ ಕಂಗನಾ ರಾಣವತ್ ಅವರ ಪೋಸ್ಟ್ ಗಳನ್ನು ನಿಯಮ ಬಾಹಿರ ಎಂಬ ಕಾರಣಕ್ಕೆ ಪದೇಪದೆ ಟ್ವಿಟರ್ ಡಿಲಿಟ್ ಮಾಡುತ್ತಿತ್ತು. ಆದರೆ ಇದೀಗ ಈ ಸಾಲಿಗೆ ಬಿಜೆಪಿ ನಾಯಕರು ಕೂಡ ಸೇರುತ್ತಿದ್ದು, ಪೊಲೀಸರು ಮುಲಾಜಿಲ್ಲದೇ ಎಫ್ ಐಆರ್ ಜಡಿಯುತ್ತಿದ್ದಾರೆ.
ಹೌದು, ಪ್ರವಾದಿ ಮೊಹಮದ್ ಪೈಂಗಬರ್ ಅವರ ವಿರುದ್ಧ ಬಿಜೆಪಿಯ ನುಪೂರ್ ಶರ್ಮ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯದ್ದು ಮಾತ್ರವಲ್ಲ ದೇಶದ ವರ್ಚಸ್ಸು ಕುಗ್ಗಿದೆ. ಅಲ್ಲದೇ ಅರಬ್ ರಾಷ್ಟ್ರಗಳ ವಹಿವಾಟಿಗೆ ಧಕ್ಕೆ ಬಂದಿದ್ದು, ಇದು ಮುಂದುವರಿದರೆ ತೈಲ ಆಮದಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ.
ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ 8 ಮಂದಿ ಗಣ್ಯರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಬಿಜೆಪಿಯ ನುಪೂರ್ ಶರ್ಮ, ಬಿಜೆಪಿ ದೆಹಲಿ ಘಟಕದ ಮಾಧ್ಯಮ ವಿಭಾಗದ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ನವೀನ್ ಕುಮಾರ್ ಜಿಂದಾಲ್, ಹಿರಿಯ ಪತ್ರಕರ್ತೆ ಸಾಬಾ ನಕ್ವಿ, ರಾಜಸ್ಥಾನ್ ನ ಹಿಂದೂ ಮಹಾಸಭಾದ ಪೂಜಾ ಶಕುಮ್ ಪಾಂಡೆ, ಮೌಲಾನಾ ಮುಫ್ತಿ ನದೀಂ, ಪೀಸ್ ಪಾರ್ಟಿ ಮುಖ್ಯ ವಕ್ತಾರ ಶದಾಬ್ ಚೌಹಾಣ್ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ದೆಹಲಿಯ ಐಎಫ್ ಎಸ್ ಒ ಘಟಕದ ಹಿರಿಯ ಪೊಲೀಸ್ ಅಧಿಕಾರಿ ಈ ವಿಷಯ ತಿಳಿಸಿದ್ದು, ಈ ಗಣ್ಯರ ಪೋಸ್ಟ್ ಗಳನ್ನು ಪರಿಶೀಲಿಸಿದಾಗ ಇವರು ಪ್ರಚೋದನಕಾರಿ ಪೋಸ್ಟ್ ಗಳನ್ನು ಸತತವಾಗಿ ಮಾಡುತ್ತಾ ಬಂದಿರುವುದು ಗಮನಕ್ಕೆ ಬಂದಿದೆ. ಇವರ ಪೋಸ್ಟ್ ಗಳಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಾವು ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.