ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್ ) ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿದ್ದು, ಮಂಗಳೂರಿನಲ್ಲಿ ನಡೆದಿರುವ ಪ್ರತಿಭಟನಾ ಸಮಾವೇಶಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ.
ಮಂಗಳೂರು ಹೃದಯಭಾಗದ ನೆಹರೂ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲು ಮಂಗಳೂರು ನಗರ ಪೊಲೀಸರು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೇತ್ರಾವತಿ ನದಿ ತೀರದ ಅಡ್ಯಾರ್-ಕಣ್ಣೂರು ಶಹಾ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಇದು ಮಂಗಳೂರು ನೆಹರೂ ಮೈದಾನಕ್ಕಿಂತಲೂ ವಿಶಾಲವಾದ ಪ್ರದೇಶವಾಗಿದೆ. ಉಡುಪಿ-ದಕ್ಷಿಣ ಕನ್ನಡ ಮುಸ್ಲಿಂ ಸೆಂಟ್ರಲ್ ಕಮಿತಿ ನೇತೃತ್ವದಲ್ಲಿ 32 ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಲಾದ ಸಮಾವೇಶಕ್ಕೆ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಪೊಲೀಸರ ಅಡೆತಡೆಗಳ ಹೊರತಾಗಿಯೂ ಉಭಯ ಜಿಲ್ಲೆಗಳ ಜನತೆ ಮಧ್ಯಾಹ್ನದ ಉರಿ ಬಿಸಿಲಿನಲ್ಲೇ ಮೈದಾನದಲ್ಲಿ ಸೇರತೊಡಗಿದ್ದರು. ಮಂಗಳೂರಿನ ಇತಿಹಾಸದಲ್ಲೇ ಇಷ್ಟೊಂದು ಜನರು ಒಂದೆಡೆ ಸೇರಿರಲಿಲ್ಲ ಎಂಬುದು ಎಲ್ಲರ ಅಭಿಪ್ರಾಯ.
ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಲಾಠಿಚಾರ್ಜ್, ಪೊಲೀಸ್ ಗೋಲಿಬಾರಿಗೆ ಇಬ್ಬರ ಬಲಿ, ಅನಂತರ ಸರಕಾರ ಮತ್ತು ಪೊಲೀಸ್ ಇಲಾಖೆಯ ವರ್ತನೆಗಳು, ಪೊಲೀಸರು ಹರಿಯಬಿಟ್ಟ ವಿಡಿಯೊ, ಸತ್ತವರ ಕುಟುಂಬಕ್ಕೆ ಪರಿಹಾರ ನಿರಾಕರಣೆ ಇತ್ಯಾದಿ ಜನವರಿ 15ರಂದು ಮಂಗಳೂರಿನ ನೇತ್ರಾವತಿ ನದಿ ತೀರದಲ್ಲಿ ಅಭೂತಪೂರ್ವ ಜನಸಂದಣಿ ಸೇರಲು ಕಾರಣವಾಯ್ತು.
ದೇಶದಾದ್ಯಂತ ನರೇಂದ್ರ ಮೋದಿ ಸರಕಾರ ತಂದಿರುವು ಮತ್ತು ತರುತ್ತಿರುವ ಹೊಸ ಕಾನೂನುಗಳ ವಿರುದ್ಧ ವಿರೋಧ ವ್ಯಾಪಕವಾಗಿ ಹರಡುತ್ತಿದ್ದಂತೆ, ದೇಶದಲ್ಲಿ ಮುಸ್ಲಿಮರ ಹಕ್ಕುಗಳ ಮೊಟಕು ಆಗುತ್ತಿವೆ ಎನ್ನುವಂತಹ ಆತಂಕದ ಪರಿಸ್ಥಿತಿ ಕರಾವಳಿಯಲ್ಲಿ ನಿರ್ಮಾಣವಾಗಿತ್ತು.
ನರೇಂದ್ರ ಮೋದಿ ಸರಕಾರದ ನೀತಿಗಳು, ಮುಖ್ಯಮಂತ್ರಿ ಯಡ್ಯೂರಪ್ಪ ಸರಕಾರದ ನಿಲುವುಗಳು, ಪೊಲೀಸ್ ಅತಿರೇಕಗಳು ಕರ್ನಾಟಕ ಕರಾವಳಿ ಭಾಗದ ಮುಸ್ಲಿಮರಲ್ಲಿ ಮುಂದೇನಾಗಬಹುದು ಎಂಬ ಭೀತಿ ಉಂಟಾಗಿದೆ. ಡಿಸೆಂಬರ್ 19ರ ಘಟನೆಗಳಿಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು 25 ಕ್ಕೂ ಹೆಚ್ಚು ಪ್ರಥಮ ವರ್ತಮಾನ ವರದಿಗಳನ್ನು ದಾಖಲಿಸಿದ್ದಾರೆ. ಪೊಲೀಸರು ಎಡವಿರುವುದನ್ನು ಮುಚ್ಚಿ ಹಾಕಲು ಹಲವು ಸುಳ್ಳು ಸಾಕ್ಷ್ಯಗಳನ್ನು ಮಾಧ್ಯಮಗಳ ಮೂಲಕ ಹರಿಯಬಿಟ್ಟಿದ್ದಾರೆ. ಆದರೆ, ಸಾರ್ವಜನಿಕರು ನೀಡಿದ ಯಾವುದೇ ದೂರುಗಳನ್ನು ಪೊಲೀಸರು ದಾಖಲಿಸಿಕೊಂಡಿಲ್ಲ. ಮಾಜಿ ಮೇಯರ್ ಕೆ.ಆಶ್ರಫ್ ಮೇಲೆ ಹಲ್ಲೆ ಆಗಿರುವ ದೂರನ್ನು ಕೂಡ ಪೊಲೀಸರು ದಾಖಲಿಸಿಕೊಂಡಿಲ್ಲ.
ಒಂದೆಡೆ ಈಗಾಗಲೇ ತನ್ನ ದೇಶದಲ್ಲಿ ಎರಡನೇ ದರ್ಜೆ ನಾಗರಿಕನಾಗುತ್ತಿರುವ ಅನುಭವ. ಇನ್ನೊಂದೆಡೆ ವಿಚಿತ್ರ ಕಾನೂನು ಕಟ್ಟಳೆಗಳು ಬರುತ್ತಿರುವುದು ಈ ಸಮುದಾಯದ ಜನರನ್ನು ಅಧೀರನ್ನಾಗಿಸಿದೆ. ಐಎಸ್ ಅಧಿಕಾರಿಯಾಗಿದ್ದ ಕಣ್ಣನ್ ಗೋಪಿನಾಥನ್ ಹೇಳುವಂತೆ ಒಬ್ಬ ಹೆದರಿಕೆಕೊಂಡು ಇರುವುದಕ್ಕೂ ಮಿತಿ ಇದೆ. ಈ ಕಾರಣಗಳಿಂದಾಗಿಯೇ ತನ್ನ ಪಾಡಿಗೆ ತಾವಿದ್ದ ಜನರು ಸೇರಿ ಪ್ರತಿಭಟನೆಗೆ ಧುಮುಕಿದ್ದಾರೆ.
ಡಿಸೆಂಬರ್ 19ರಿಂದ ಹೊರ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದ ಕೂಡ ಮೀಸಲು ಪೊಲೀಸ್ ಪಡೆಯನ್ನು ತಂದಿಟ್ಟುಕೊಂಡಿರುವ ಮಂಗಳೂರು ನಗರ ಪೊಲೀಸರು, ಜನವರಿ 15ರ ಬಂದೋಬಸ್ತಿಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಪೊಲೀಸರನ್ನು ಮಂಗಳೂರಿಗೆ ಕರೆಯಿಸಿಕೊಂಡಿದ್ದರು. ಒಂದರ್ಥದಲ್ಲಿ ಅದೊಂದು ನಿರುಪಯುಕ್ತ ಕೆಲಸವಾಗಿತ್ತು. ಪೊಲೀಸರು ಮೂಖಪ್ರೇಕ್ಷಕರಾಗಿ ನಿಂತುಕೊಳ್ಳಬೇಕಾಯಿತು. ಸಮಾವೇಶದ ಸಂಘಟಕರೇ 1200ಕ್ಕೂ ಹೆಚ್ಚು ಸ್ವಯಂಸೇವಕರನ್ನು ವಾಹನ ಸಂಚಾರ ಸೇರಿದಂತೆ ಎಲ್ಲೆಡೆ ನಿಯೋಜಿಸಿದ್ದರು. ಬೃಹತ್ ಪ್ರಮಾಣದಲ್ಲಿ ಜನಸಾಗರವಾಗಿದ್ದ ಸಮಾವೇಶ ಶಾಂತಯುತವಾಗಿ ಅಚ್ಚುಕಟ್ಟಾಗಿ ನಡೆಸುವುದರಲ್ಲಿ ಪೊಲೀಸರ ಪಾತ್ರವೇನು ಇರಲಿಲ್ಲ.
ಒಂದೆರಡು ವಾರಗಳ ಹಿಂದೆ ಇಂತಹದೊಂದು ಪ್ರತಿಭಟನಾ ಸಮಾವೇಶ ಮಂಗಳೂರಿನಲ್ಲಿ ನಡೆಯುವ ಸಾಧ್ಯತೆಯೇ ಇಲ್ಲ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ಸಮಾವೇಶ ನಡೆಯುವುದೆಂದು ನಿರ್ಧಾರ ಆಗಿತ್ತು. ಈ ಮಧ್ಯೆ, ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಥಳೀಯರ ಮುಖಂಡರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರ ಮತ್ತು ವಿರೋಧ ಎರಡೂ ಸಮಾವೇಶಗಳಿಗೆ ಅನುಮತಿ ಕೊಡುವ ಇಂಗಿತ ವ್ಯಕ್ತವಾಗಿತ್ತು. ಆದರೆ, ಮಂಗಳೂರು ನಗರ ಪೊಲೀಸರು ಮಂಗಳೂರು ನೆಹರೂ ಮೈದಾನದಲಿ ಸಮಾವೇಶ ನಡೆಸದೆ ನಗರದ ಹೊರವಲಯದಲ್ಲಿ ಸಭೆ ಸೇರುವಂತೆ ತಾಕೀತು ಮಾಡಿದ್ದರು. ಇದರ ಫಲವಾಗಿ ಮಂಗಳೂರು – ಬೆಂಗಳೂರು ಹೆದ್ದಾರಿಯಲ್ಲಿ ಅಡ್ಯಾರ್ – ಕಣ್ಣೂರು ಪ್ರದೇಶದಲ್ಲಿ ಸಮಾವೇಶ ನಡೆಸುವುದಕ್ಕೆ ಉಡುಪಿ – ದಕ್ಷಿಣ ಕನ್ನಡ ಸೆಂಟ್ರಲ್ ಕಮಿಟಿ ಮುಂತಾಯಿತು. ಆದರೆ, ಸೆಂಟ್ರಲ್ ಕಮಿಟಿಯ ನಿರ್ಧಾರಕ್ಕೆ ಕೆಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ಅಡ್ಯಾರ್ ಶಹಾ ಮೈದಾನದಲ್ಲಿ ನಡೆಯುವ ಇಷ್ಟೋಂದು ಅಭೂತಪೂರ್ವ ಯಶಸ್ಸು ಪಡೆಯುತ್ತದೆ ಎಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಕಾರ್ಯಕ್ರಮ ಕೂಡ ಅಚ್ಚುಕಟ್ಟಾಗಿ ನಡೆದಿತ್ತು. ಸಮಾವೇಶದಲ್ಲಿ ಭಾಗವಹಿಸಿದ ಐಎಎಸ್ ಅಧಿಕಾರಿಗಳಾಗಿದ್ದ ಹರ್ಷ್ ಮಂದರ್ ಮತ್ತು ಕಣ್ಣನ್ ಗೋಪಿನಾಥ್ ಅವರು ಹೊಸ ಕಾನೂನು ಕಟ್ಟಳೆಗಳ ಆಗು ಹೋಗುಗಳ ಬಗ್ಗ ಮಾತನಾಡಿದರು. ಕಣ್ಣನ್ ಗೋಪಿನಾಥ್ ಅವರು ಯಾವುದೇ ಚಿಂತನೆ ಇಲ್ಲದೆ ಕೆಲಸ ಮಾಡುವ ಕೇಂದ್ರ ಸರಕಾರ ಚಲಿಸುತ್ತಿರುವ ಕಾರಿನ ಹಿಂದೆ ಬೊಳುತ್ತಾ ಓಡುವ ನಾಯಿಗೆ ಹೋಲಿಸಿದರು.
ಜನರು ಬೀದಿಗಿಳಿದು ಹೋರಾಟ ನಡೆಸುವುದು ತೀವೃಗೊಳ್ಳುತ್ತಿರುವಂತೆ ಕೇಂದ್ರ ಸರಕಾರ ಕೂಡ ಹಿಂಜರಿಯತೊಡಗಿದೆ ಎಂಬ ಅಭಿಪ್ರಾಯವನ್ನು ಗೋಪಿನಾಥ್ ಅಭಿಪ್ರಾಯಪಟ್ಟರು. ಇವರಿಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಸಿಎಎ, ಎನ್ ಆರ್ ಸಿ ವಿರುದ್ಧದ ಹೋರಾಟದ ಮಂಜೂಣಿಯಲ್ಲಿ ಇರುವುದರಿಂದ ಮಂಗಳೂರಿನ ಸಮಾವೇಶಕ್ಕೆ ಕೂಡ ಇನ್ನೊಂದು ರೀತಿಯಲ್ಲಿ ಮಹತ್ವ ದೊರೆಯಿತು.
ಉಳ್ಳಾಲ, ಆಡಂಕುದ್ರು ಮುಂತಾದ ಪ್ರದೇಶದ ಜನರು ದೋಣಿಗಳಲ್ಲಿ ನೇತ್ರಾವತಿ ನದಿಯಲ್ಲಿ ಆಜಾದಿ ಘೋಷಣೆ ಕೂಗುತ್ತಾ ಸಮಾವೇಶ ಸ್ಥಳಕ್ಕೆ ಆಗಮಿಸಿರುವುದು ಮತ್ತೊಂದು ಆಕರ್ಷಣೆಯಾಗಿತ್ತು. ಒಟ್ಟಾರೆಯಾಗಿ ಮಂಗಳೂರಿನಲ್ಲಿ ನಡೆದಿರುವ ಈ ಸಮಾವೇಶವು ವಿವಾದಾತಮಕ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಹೊಸ ಆಯಾಮ ನೀಡಿದೆ ಎಂದರೆ ತಪ್ಪಾಗಲಾರದು.