ಇಷ್ಟು ದಿನಗಳ ಕಾಲ ಎನ್ಆರ್‌ಸಿ ಬಗ್ಗೆ ನೀಡಿದ ಹೇಳಿಕೆಗಳು ಕೇವಲ ನಾಟಕವಾಗಿತ್ತೇ? ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುವುದು ಬಿಜೆಪಿಯ ಉದ್ದೇಶವಾಗಿತ್ತೇ? ಹಲವಾರು ಅಮಾಯಕ ಜನರ ಜೀವ ಹೋದದ್ದೆಲ್ಲಾ ಬಿಜೆಪಿ ಸರ್ಕಾರಕ್ಕೆ ಮಕ್ಕಳಾಟದಂತೆ ಕಂಡಿತೇ?
ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುತ್ತಾರಲ್ಲಾ ಹಾಗಾಯ್ತು ಕೇಂದ್ರ ಸರ್ಕಾರದ ಬುದ್ಧಿಗೇಡಿ ವರ್ತನೆ. ಹೊಸ ಪೌರತ್ವ ಕಾನೂನು ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರದಲ್ಲಿ ಇಡೀ ದೇಶ ಹೊತ್ತಿ ಉರಿಯುತ್ತಿದೆ. ಇದನ್ನು ನೋಡಿಕೊಂಡು ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ಇವೆರಡನ್ನೂ ಜಾರಿಗೆ ತಂದೇ ತರುವುದು ಶತಃಸಿದ್ಧ ಎಂದು ಇಡೀ ದೇಶದ ಜನತೆಗೆ ಸೆಡ್ಡು ಹೊಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವರ್ತಿಸಿದ್ದರು.
ಈ NRC ಯನ್ನು ಪ್ರಾಯೋಗಿಕವಾಗಿ ಅಸ್ಸಾಂನಲ್ಲಿ ಜಾರಿಗೆ ತಂದಿದ್ದು, ಇದನ್ನು ದೇಶವ್ಯಾಪಿ ವಿಸ್ತರಿಸಲು ನಿರ್ಧರಿಸಲಾಗಿತ್ತು. ಇದರ ಉದ್ದೇಶ ಸ್ಪಷ್ಟವಾಗಿತ್ತು. ಅದೆಂದರೆ, ಹತ್ತಾರು ವರ್ಷಗಳ ಕಾಲದಿಂದಲೂ ಭಾರತದಲ್ಲಿ ನೆಲೆಸಿರುವ ನೆರೆ ದೇಶಗಳ ನಾಗರಿಕರನ್ನು ಒಕ್ಕಲೆಬ್ಬಿಸುವುದಾಗಿತ್ತು. ಅಂದರೆ, ಈ ಕಾನೂನನ್ನು ಬಳಸಿಕೊಂಡು ಬಿಜೆಪಿಯ ಹಿಡನ್ ಅಜೆಂಡಾವಾದ ಹಿಂದೂಸ್ತಾನ ನಿರ್ಮಾಣದ ಯೋಜನೆಯನ್ನು ಜಾರಿಗೆ ತರುವುದಾಗಿತ್ತು. ಅದರಂತೆ ಅಸ್ಸಾಂನಲ್ಲಿ ಜಾರಿಗೆ ತಂದು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಆದರೆ, ಇಲ್ಲಿ ಆಗಿರುವ ದೊಡ್ಡ ಲೋಪವೆಂದರೆ ಬರೋಬ್ಬರಿ 19 ಲಕ್ಷಕ್ಕೂ ಅಧಿಕ ಜನರನ್ನು ಈ ಎನ್ಆರ್ ಸಿ ಪಟ್ಟಿಯಿಂದ ಹೊರಗಿಡಲಾಗಿದೆ.
ತಲೆತಲಾಂತರದಿಂದಲೂ ಅಸ್ಸಾಂನಲ್ಲಿಯೇ ವಾಸಿಸಿ ಮೂಲ ಭಾರತೀಯರಾಗಿ ಎಲ್ಲಾ ಸೌಲಭ್ಯಗಳನ್ನು, ದಾಖಲೆಗಳನ್ನು ಹೊಂದಿರುವ ಕುಟುಂಬಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಇಷ್ಟೇ ಅಲ್ಲ, ಒಂದು ಕುಟುಂಬದ ಕೆಲವು ಸದಸ್ಯರನ್ನು ಪಟ್ಟಿಯಲ್ಲಿ ಸೇರಿಸಿದ್ದರೆ, ಆ ಕುಟುಂಬದ ಯಜಮಾನರ ಹೆಸರುಗಳನ್ನೇ ಕೈಬಿಡಲಾಗಿದೆ.
ಇದು ಅಧಿಕಾರಿಗಳ ಹೊಣೆಗೇಡಿತನ ಒಂದಾದರೆ, ಬಹುತೇಕ ಕಡೆಗಳಲ್ಲಿ ಮುಸ್ಲಿಂ ಸಮುದಾಯದ ಕುಟುಂಬಗಳನ್ನೇ ಗುರಿಯಾಗಿರಿಸಿಕೊಂಡು ಆ ಸಮುದಾಯಗಳ ಸದಸ್ಯರ ಹೆಸರನ್ನು ಕೈಬಿಡಲಾಗಿದೆ.
ಇದು ಒಂದು ಕಡೆಯ ಲೋಪವಾದರೆ, ಮತ್ತೊಂದು ಕಡೆ ಈ ಎನ್ಆರ್ ಸಿ ವಿರುದ್ಧ ಇಡೀ ಅಸ್ಸಾಂ ರಾಜ್ಯದಲ್ಲಿ ಪ್ರತಿಭಟನೆಗಳು ಹಲವು ತಿಂಗಳಿಂದಲೂ ನಡೆಯುತ್ತಲೇ ಇವೆ. ಈ ಪ್ರತಿಭಟನೆಗಳು ಹಿಂಸಾರೂಪ ಪಡೆದು ತೀವ್ರ ಸ್ವರೂಪ ಪಡೆದುಕೊಂಡು ದೇಶದ ಇತರೆ ರಾಜ್ಯಗಳಿಗೆ ವ್ಯಾಪಿಸಿವೆ.
ಅಸ್ಸಾಂನಾದ್ಯಂತ ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿದ್ದರೂ ಇದನ್ನು ಲೆಕ್ಕಿಸದೇ ಕೇಂದ್ರ ಸರ್ಕಾರವು ಪ್ರತಿಭಟನೆಯ ಹಿಂದೆ ಪ್ರತಿಪಕ್ಷಗಳ ಕುಮ್ಮಕ್ಕು ಇದೆ ಎಂದು ಆರೋಪಿಸುತ್ತಲೇ ಬಂದಿತ್ತು. ಪ್ರತಿಪಕ್ಷಗಳ ನಾಯಕರು ಕೆಲವು ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹಿಂಸಾಚಾರಕ್ಕೆ ಅವರೇ ಕಾರಣ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಆರೋಪ ಮಾಡಿದ್ದರು.
ಇವರ ಈ ಆರೋಪಗಳು ಪ್ರತಿಭಟನೆಯ ಕಾವನ್ನು ಮತ್ತಷ್ಟು ಹೆಚ್ಚಾಗಲು ಕಾರಣವಾದವು. ಇದರ ಜತೆಯಲ್ಲಿಯೇ ಪೌರತ್ವ ತಿದ್ದುಪಡಿ ಕಾಯ್ದೆಯ ವಿವಾದವೂ ಪ್ರತಿಭಟನೆಗಳು ಉಗ್ರ ಸ್ವರೂಪ ತಾಳಲು ಕಾರಣವಾಯಿತು.
ಆದರೂ ಮೋದಿ ಮತ್ತು ಅಮಿತ್ ಶಾ ತಮ್ಮ ಭಂಡತನವನ್ನು ಬಿಡಲಿಲ್ಲ. ಏನೇ ಆಗಲಿ ದೇಶಾದ್ಯಂತ ಎನ್ ಆರ್ ಸಿಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ತಮ್ಮ ಪಕ್ಷದ ನಾಯಕರು ಮತ್ತು ಸಚಿವರ ಬಾಯಿಂದ ಹೇಳಿಸತೊಡಗಿ, ತಮಾಷೆಯನ್ನು ನೋಡತೊಡಗಿದರು.
ಇಲ್ಲಿ ಪ್ರಮುಖವಾಗಿ ಆರ್ ಎಸ್ ಎಸ್ ಅಜೆಂಡಾ ಈ ಎನ್ಆರ್ ಸಿ ಹಿಂದೆ ಅಡಗಿತ್ತು. ಏನೇ ಆಗಲು ಜಾರಿಗೆ ಇದನ್ನು ದೇಶವ್ಯಾಪಿ ಜಾರಿಗೆ ತರಬೇಕೆಂಬ ಆದೇಶ ಮೋದಿ ಸರ್ಕಾರಕ್ಕೆ ಬಂದಂತಿತ್ತು. ಈ ಕಾರಣದಿಂದಲೇ ಸರ್ಕಾರ ಹಠಕ್ಕೆ ಬಿದ್ದು ಎನ್ಆರ್ ಸಿಯನ್ನು ಜಾರಿಗೆ ತರಲು ಮುಂದಾಗಿತ್ತು.
ಆದರೆ, ಈ ಎನ್ಆರ್ ಸಿ ಜತೆಗೆ ಪೌರತ್ವ ತಿದ್ದುಪಡಿ ಕಾನೂನು ಸಹ ಸೇರಿಕೊಂಡಿದ್ದರಿಂದ ಪ್ರತಿಭಟನೆಗಳು ಇಮ್ಮಡಿಯಾಗತೊಡಗಿದವು. ಕಾಕತಾಳೀಯವೆಂಬಂತೆ ಈ ಪ್ರಸ್ತಾಪಗಳನ್ನು ಇಟ್ಟುಕೊಂಡು ಪ್ರಚಾರ ಮಾಡಿದ ಪರಿಣಾಮ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಬೇಕಾಯಿತು. ಈ ಮೂಲಕ ಬಿಜೆಪಿಗೆ ಮತ್ತು ಮೋದಿ ಅಲೆಗೆ ಸೋಲಿನ ಶಕೆ ಆರಂಭವಾಯಿತು.
ಇದೇ ರೀತಿ ಮುಂದುವರಿದರೆ ದೇಶದ ರಾಜಧಾನಿ ದೆಹಲಿ ವಿಧಾನಸಭೆಗೆ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲೂ ಸೋಲಿನ ಕಹಿ ಆಗಲಿದೆ ಎಂಬ ಲೆಕ್ಕಾಚಾರವನ್ನು ಅರಿತ ಬಿಜೆಪಿ ಇದೀಗ ಎನ್ ಆರ್ ಸಿಯನ್ನು ದೇಶಾದ್ಯಂತ ವಿಸ್ತರಣೆ ಮಾಡುವ ಪ್ರಸ್ತಾಪ ಸದ್ಯಕ್ಕಿಲ್ಲ ಎಂಬ ಘೋಷಣೆ ಮಾಡಿದೆ.
ದೇಶಾದ್ಯಂತ ಎನ್ಆರ್ ಸಿ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರದಲ್ಲಾಗಲೀ ಅಥವಾ ಸಂಪುಟ ಸಭೆಯಲ್ಲಾಗಲೀ ಚರ್ಚೆಯೇ ಆಗಿಲ್ಲ. ಇದರ ಪ್ರಸ್ತಾಪವೂ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಹಾಗಾದರೆ ಇಷ್ಟು ದಿನಗಳ ಕಾಲ ಎನ್ಆರ್ ಸಿ ಬಗ್ಗೆ ನೀಡಿದ ಹೇಳಿಕೆಗಳು, ಘೋಷಣೆಗಳು ಕೇವಲ ನಾಟಕವಾಗಿತ್ತೇ? ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುವುದು ಬಿಜೆಪಿಯ ಉದ್ದೇಶವಾಗಿತ್ತೇ? ಇಷ್ಟೊಂದು ಪ್ರಮಾಣದ ಪ್ರತಿಭಟನೆಗಳು ನಡೆದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವಾಗಿದ್ದು, ಹಲವಾರು ಅಮಾಯಕ ಜನರ ಜೀವ ಹೋದದ್ದೆಲ್ಲಾ ಬಿಜೆಪಿ ಸರ್ಕಾರಕ್ಕೆ ಮಕ್ಕಳಾಟದಂತೆ ಕಂಡಿತೇ? ಪ್ರತಿಭಟನೆ ಆರಂಭವಾದಾಗಲೇ ಎನ್ಆರ್ ಸಿಯನ್ನು ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟನೆ ನೀಡಿ ಈ ಅನಾಹುತಗಳನ್ನು ತಪ್ಪಿಸಬಹುದಿತ್ತಲ್ಲವೇ?
ಇದಕ್ಕೆಲ್ಲಾ ಬಿಜೆಪಿ ಮತ್ತು ನರೇಂದ್ರ ಮೋದಿ, ಅಮಿತ್ ಶಾ ಉತ್ತರ ಕೊಡುವುದರಿಂದ ಯಾಕೆ ನುಣುಚಿಕೊಳ್ಳುತ್ತಿದ್ದಾರೆ. ಸಂಪುಟ ಸಭೆಯಲ್ಲಾಗಲೀ ಅಥವಾ ಪಕ್ಷದ ಮಟ್ಟದಲ್ಲಾಗಲೀ ಇದರ ಪ್ರಸ್ತಾಪವೇ ಆಗಿಲ್ಲ ಎಂದು ಈಗ ಹೇಳುತ್ತಿರುವ ಮೋದಿ ಮತ್ತು ಶಾ ಅವರ ಪಕ್ಷದ ನಾಯಕರು ಮತ್ತು ಸಚಿವರು ಏಕೆ ಹೋದಲ್ಲೆಲ್ಲಾ ಬಂದಲ್ಲೆಲ್ಲಾ ದೇಶಾದ್ಯಂತ ಎನ್ಆರ್ ಸಿಯನ್ನು ವಿಸ್ತರಣೆ ಮಾಡುತ್ತೇವೆ ಎಂದು ಹೇಳಿಕೆಗಳನ್ನು ಕೊಟ್ಟು ಜನರಲ್ಲಿ ಗೊಂದಲ ಮೂಡಿಸಿದ್ದಾದರೂ ಏಕೆ? ಈ ಪ್ರತಿಭಟನೆಗೆ ಕಾರಣರಾದ ಈ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಲಿದೆಯೇ ಕೇಂದ್ರ ಸರ್ಕಾರ? ಅಥವಾ ಬಿಜೆಪಿ ನಾಯಕರು ತಮ್ಮ ಬಾಯಿ ಚಪಲ ತೀರಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡಿದ್ದರೇ? ಈ ಬಗ್ಗೆ ಸ್ಪಷ್ಟನೆಯನ್ನೇಕೆ ನೀಡುತ್ತಿಲ್ಲ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಬಿಜೆಪಿ ಸರ್ಕಾರ ಎನ್ಆರ್ ಸಿ ಮತ್ತು ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಪ್ರಸ್ತಾಪ ಮಾಡಿ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರದಲ್ಲಿತ್ತು. ಈ ಕಾರಣಕ್ಕಾಗಿಯೇ ಮೋದಿಯಾದಿಯಾಗಿ ಬಿಜೆಪಿ ಎಲ್ಲಾ ನಾಯಕರು ಎನ್ಆರ್ ಸಿ, ಪೌರತ್ವ ತಿದ್ದುಪಡಿ ಕಾನೂನಿನ ಜಪ ಮಾಡಿದ್ದರು. ಆದರೆ, ಈ ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾಗಿ ಪಕ್ಷ ಸೋಲನುಭವಿಸಿತು. ಇದಕ್ಕೆ ನೇರ ಹೊಣೆ ಮೋದಿ ಮತ್ತು ಅಮಿತ್ ಶಾ ಅವರೇ.
ದೇಶದಲ್ಲಿ ಕಿತ್ತು ತಿನ್ನುತ್ತಿರುವ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಸಂಘಪರಿವಾರದ ಹಿಡನ್ ಅಜೆಂಡಾವನ್ನು ದೇಶದ ನಾಗರಿಕರ ಮೇಲೆ ಹೇರುವುದಕ್ಕೇ ಹೆಚ್ಚು ಆಸಕ್ತಿ ತೋರಿದ ಬಿಜೆಪಿಗೆ ಮತದಾರ ಒಂದೊಂದೇ ರಾಜ್ಯದ ಮೂಲಕ ಸೋಲಿನ ರುಚಿಯನ್ನು ತೋರಿಸುತ್ತಿದ್ದಾನೆ. ರಾಷ್ಟ್ರೀಯವಾದವನ್ನು ಮುಂದಿಟ್ಟುಕೊಂಡು ತನ್ನ ಹಿಂದುತ್ವದ ಅಜೆಂಡಾವನ್ನು ಜಾರಿಗೊಳಿಸಲು ಯತ್ನಿಸಿದ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲಾರಂಭಿಸಿದ್ದಾನೆ.
ಕಳೆದ ಆರು ವರ್ಷಗಳಿಂದ ತನ್ನ ಅಧಿಕಾರ ದರ್ಪ, ದುರುಪಯೋಗದ ಮೂಲಕ ಮತ್ತು ಕೋಮು ಭಾವನೆಯನ್ನು ಕೆರಳಿಸುವ ಮೂಲಕ ಹಿಂದೂ ಮತಗಳನ್ನು ಕ್ರೋಢೀಕರಿಸಲು ಯತ್ನಿಸಿ ಅಲ್ಲಲ್ಲಿ ಸಫಲವಾಗಿದ್ದ ಬಿಜೆಪಿ ಇತ್ತೀಚಿನ ಚುನಾವಣೆಗಳಲ್ಲೂ ಅದನ್ನೇ ಮುಂದುವರಿಸಿದ್ದನ್ನು ಮತದಾರ ತಿರಸ್ಕರಿಸಿದ್ದಾನೆ. ಕಳೆದ ವರ್ಷದವರೆಗೆ ದೇಶದ ಭೂಪಟವನ್ನು ಅಂದ ಚೆಂದವಾಗಿ ಚಿತ್ರಿಸಿ ಅದರ ತುಂಬೆಲ್ಲಾ ಕೇಸರಿ ಬಣ್ಣವನ್ನಾಕಿ ಇನ್ನು ಇಡೀ ದೇಶ ಕೇಸರಿಮಯವಾಗಲಿದೆ ಎಂದು ಬೀಗುತ್ತಿದ್ದ ಬಿಜೆಪಿಗೆ ಮುಖಭಂಗವಾಗಲು ಆರಂಭವಾಗಿದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ತನ್ನ ಯೋಜನೆಗೆ ಎಳ್ಳುನೀರು ಬಿದ್ದಿದ್ದು, ಬಿಜೆಪಿ ಮುಕ್ತ ಭಾರತ ನಿರ್ಮಾಣಕ್ಕೆ ಇತ್ತೀಚೆಗೆ ನಡೆದ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶಗಳು ಅಡಿಪಾಯ ಹಾಕಿವೆ. ಈ ಬಿಜೆಪಿ ಅವನತಿ ಪರ್ವ ಇದೀಗ ಆರಂಭವಾಗಿದೆ. ಈ ಮೂಲಕ ಇಂದಲ್ಲಾ ನಾಳೆ ಬಿಜೆಪಿಯ ಗರ್ವಭಂಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.