ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಭಾವದಿಂದ ವಿದ್ಯುತ್ ಉತ್ಪಾದನೆ ಕುಂಠಿತವಾದ ಹಿನ್ನೆಲೆಯಲ್ಲಿ ರೈತರಿಗೆ ಪೂರೈಕೆ ಮಾಡುವ 3 ಫೇಸ್ ವಿದ್ಯುತ್ ಅನ್ನು 5 ಗಂಟೆ ಕೊಡಲು ನಿರ್ಧಾರ ಮಾಡಿದ್ದೆವು. ಆದರೆ, ಈಗ 5 ಗಂಟೆ ವಿದ್ಯುತ್ ಸಾಕಾಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರತಿನಿತ್ಯ 7 ಗಂಟೆಯ ಕಾಲ ತ್ರಿಫೇಸ್ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಧನ ಇಲಾಖೆಯ ಜೊತೆ ಪರಿಶೀಲನೆ ಸಭೆ ನಡೆಸಿದ್ದೇನೆ. 7 ಗಂಟೆ ವಿದ್ಯುತ್ ಕೊಡ್ತೀವಿ ಅಂತ ಹೇಳಿದ್ದೆವು. ಆದರೆ, ನಾವು 5 ಗಂಟೆ ಕೊಡುತ್ತಿದ್ದೆವು. ಏಕೆಂದರೆ ಕೆಲವರು ರೈತರ ಪಂಪ್‌ಸೆಟ್‌ಗಳಿಗೆ 5 ಗಂಟೆ ಸಾಕು ಎಂದಿದ್ದರು. ಹೀಗಾಗಿ, 5 ಗಂಟೆ ತ್ರಿಫೇಸ್ ವಿದ್ಯುತ್ ನೀಡಿ ಎಂದು ಸೂಚನೆ ನೀಡಿದ್ದೆನು. ಆದರೆ, ಈಗ 5 ಗಂಟೆಗೆ ಸಾಕಗಲ್ಲ ಎಂಬ ಬೇಡಿಕೆ ಸಹ ಬಂದಿತ್ತು. ಆದ್ದರಿಂದ ಭತ್ತ ಬೆಳೆಯುವಂತಹ ಪ್ರದೇಶ ಸೇರಿ ಕೆಲವು ಭಾಗಗಳಲ್ಲಿ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈಗ ರಾಜ್ಯದ ಎಲ್ಲಾ ಕಡೆ 7 ಗಂಟೆ ವಿದ್ಯುತ್ ಕೊಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.