ಬೆಂಗಳೂರು : ಲೋಕಸಭೆಯ ಅಧಿವೇಶನದಲ್ಲಿ ಭಾರತದ ಸಂಸದೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯವರ ಉತ್ತರವೇ ಇಲ್ಲದೆ ರಾಷ್ಟ್ರಪತಿಗಳ ವಂದನಾ ನಿರ್ಣಯ ಅಂಗೀಕಾರವಾಗಿದೆ. ಅಲ್ಲದೆ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡದೆಯೇ ಪಲಾಯನ ಮಾಡಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಪ್ರಧಾನಿ ಲೋಕಸಭೆಯಲ್ಲಿ ಮೌನವಾಗಿರುವುದು ಹೇಡಿತನದ ಕೃತ್ಯ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ, ಪ್ರಧಾನಿ ಉತ್ತರಿಸದೆ ಈ ರೀತಿಯ ನಿರ್ಣಯವನ್ನು ಅಂಗೀಕರಿಸಲಾಯಿತು. ಸಂಸತ್ತಿನಿಂದ ತಪ್ಪಿಸಿಕೊಳ್ಳುವ ಪ್ರಧಾನಿಯೊಬ್ಬರು ಹೊಣೆಗಾರಿಕೆಯಿಂದ ಹಾಗೂ ಉತ್ತರದಾಯಿತ್ವದಿಂದಲೂ ತಪ್ಪಿಸಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರವಾದ ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಎತ್ತಿದಾಗ, ಹಾಗೂ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಪುಸ್ತಕವನ್ನು ದಾಖಲೆಯಲ್ಲಿ ಇರಿಸಲು ಪ್ರಯತ್ನಿಸಿದಾಗ ಅವರಿಗೆ ತಮ್ಮ ಭಾಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ. ಈ ಪ್ರಸಂಗವನ್ನು ಇನ್ನಷ್ಟು ಗೊಂದಲಕ್ಕೀಡು ಮಾಡುವುದಕ್ಕೆ ಕಾರಣವೇನೆಂದರೆ, ಸರ್ಕಾರ ಮೊದಲು ವಿರೋಧ ಪಕ್ಷದ ಧ್ವನಿ ಸ್ಥಬ್ದಗೊಳಿಸಿತು, ಬಳಿಕ ಸ್ವತಃ ಮೌನಕ್ಕೆ ಜಾರಿಕೊಂಡಿದೆ ಎಂದು ಜರಿದಿದ್ದಾರೆ.

ಚೀನಾ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ, ಸೇನಾ ಮುಖ್ಯಸ್ಥರಿಗೆ ಪ್ರಧಾನ ಮಂತ್ರಿಯವರ ಮಾರ್ಗದರ್ಶನವು “ಜೋ ಉಚಿತ್ ಸಂಜೋ, ವೋ ಕರೋ” (ನಿಮಗೆ ಸೂಕ್ತವೆಂದು ಭಾವಿಸುವದನ್ನು ಮಾಡಿ) ಎಂದು ಪುಸ್ತಕವು ಹೇಳುತ್ತದೆ. ಹೀಗೆ ಹೇಳಿ ಮೋದಿ ಸಂಸತ್ತಿನಿಂದ ಓಡಿಹೋಗುವಂತಹ “ನಾಯಕತ್ವ” ಹೊಂದಿದ್ದಾರೆ. ಹೀಗೆ ಮಾಡುವುದರ ಮೂಲಕ, ಭಾರತದ ಬಹುಪಾಲು ಜನರನ್ನು ಪ್ರತಿನಿಧಿಸುವ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಪ್ರಶ್ನೆಗಳಿಗೆ ಉತ್ತರಿಸದೆ ಉಳಿದಿದ್ದರಿಂದ, ಪ್ರಧಾನ ಮಂತ್ರಿಗಳು ಲೋಕಸಭೆಗೆ ಹಾಜರಾಗದಿರಲು ನಿರ್ಧರಿಸಿದರು. ರಾಹುಲ್ ಗಾಂಧಿ ಮೊದಲೇ ಮೋದಿ ಭಯದಿಂದ ಸಂಸತ್ತಿಗೆ ಬರುವುದಿಲ್ಲ ಎಂದು ಎಚ್ಚರಿಸಿದ್ದರು. ಅವರ ಮುನ್ಸೂಚನೆಯ ಆ ಮಾತುಗಳು ನಿಜವಾಗಿವೆ. ತಮ್ಮ ನಿರ್ಧಾರಗಳ ಮೇಲೆ ವಿಶ್ವಾಸ ಹೊಂದಿರುವ ನಾಯಕ ಚರ್ಚೆಯಿಂದ ಬಚ್ಚಿಟ್ಟುಕೊಳ್ಳುವುದಿಲ್ಲ ಅಥವಾ ಸದನದಿಂದ ಓಡಿಹೋಗುವುದಿಲ್ಲ ಎಂದು ಪ್ರಧಾನಿ ಮೋದಿಗೆ ಸಿಎಂ ಟಾಂಗ್ ನೀಡಿದ್ದಾರೆ.

ಸಂಸದೀಯ ಚರ್ಚೆಯ ವೇಳೆ ಪ್ರಧಾನಿ ಅನುಪಸ್ಥಿತಿಯನ್ನು ಸಮರ್ಥಿಸಿಕೊಂಡ ಸ್ಪೀಕರ್ ಓಂ ಬಿರ್ಲಾ ಅವರ ಪಕ್ಷಪಾತದ ನಡವಳಿಕೆಯು ಲೋಕಸಭೆಯ ಘನತೆಯನ್ನು ಮತ್ತಷ್ಟು ಹಾನಿಗೊಳಿಸಿದೆ. ಸ್ಪೀಕರ್ ಕಾರ್ಯಾಂಗಕ್ಕೆ ಗುರಾಣಿಯಾಗಿ ಕಾರ್ಯನಿರ್ವಹಿಸುವ ಬದಲು ಸಂಸತ್ತನ್ನು ರಕ್ಷಿಸಲು ಮುಂದಾಗಬೇಕು ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ವಿರೋಧ ಪಕ್ಷದವರನ್ನು ಮೌನಗೊಳಿಸಿದಾಗ ಮತ್ತು ಪ್ರಧಾನಿ ಚರ್ಚೆಯಲ್ಲಿ ಭಾಗವಹಿಸದೆ ಇದ್ದಾಗ, ಸಂಸತ್ತು ಅರ್ಥಹೀನವಾಗುತ್ತದೆ. ಇದು ಬಿಜೆಪಿ-ಆರ್‌ಎಸ್‌ಎಸ್ ಮಾದರಿಯ ದೊಡ್ಡ ಭಾಗವಾಗಿದೆ – ಸಂಸತ್ತನ್ನು ದುರ್ಬಲಗೊಳಿಸುವುದು, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಮತ್ತು ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಹೀನ ಮಾಡುವುದು. ಪ್ರಜಾಪ್ರಭುತ್ವವು ಭಯ, ಮೌನ ಮತ್ತು ತಪ್ಪಿಸಿಕೊಳ್ಳುವಿಕೆಯ ಮೇಲೆ ಬದುಕಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದಾರೆ.





