ಮತ ಎಣಿಕೆಯ ವೇಳೆ ವಿವಿಪ್ಯಾಟ್ ಸ್ಲಿಪ್ ಗಳನ್ನು ಎಣಿಸಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಮತ ಎಣಿಕೆ ಕೇಂದ್ರಗಳ ಅಧಿಕಾರಿಗಳು ಯಾವ ಪ್ರಕ್ರಿಯೆಗಾಗಿ ತರಬೇತಿ ಪಡೆದಿದ್ದಾರೋ ಅದೇ ಪ್ರಕ್ರಿಯೆ ಮುಂದುವರೆಯಲಿ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.
ಈ ಕುರಿತ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು, ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಕುರಿತು ವಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿ, ಈ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.
“ನಾವು ಮಧ್ಯ ಪ್ರವೇಶಸಲು ಬಯಸುವುದಿಲ್ಲ. ಈಗಾಗಲೇ ಇರುವ ಪ್ರಕ್ರಿಯೆ, ಅಭ್ಯಾಸ ಹಾಗೂ ಕಾನೂನುಗಳನ್ನು ಮುಂದುವರೆಸಬೇಕು,” ಎಂದು ಎನ್ ವಿ. ರಮಣ ನೇತೃತ್ವದ ಪೀಠವು ಹೇಳಿದೆ.
ಜಸ್ಟೀಸ್ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿಯನ್ನು ಒಳಗೊಂಡಂತಹ ಪೀಠವು, ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸದೇ, ಸಾಧಾರಣ ವಿಚಾರಣೆ ನಡೆಸುವುದಾಗಿ ಹೇಳಿದೆ.
Also read : BJP ಮತಯಂತ್ರಗಳನ್ನು ಕದ್ದು ಸಾಗಿಸುತ್ತಿದೆ, ವಾರಣಾಸಿಯಲ್ಲಿ ಸಿಕ್ಕಿಬಿದ್ದ ಟ್ರಕ್ ಅದಕ್ಕೆ ಸಾಕ್ಷಿ: ಅಖಿಲೇಶ್ ಗಂಭೀರ ಆರೋಪ
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಬುಧವಾರದಂದು ಈ ಅರ್ಜಿಯ ತುರ್ತು ವಿಚಾರಣೆ ನಡೆಯಬೇಕು ಎಂದು ವಾದ ಮಂಡಿಸಿದ್ದರು.
ಇವಿಎಂ ಕಳ್ಳತನದ ಆರೋಪ ಮಾಡಿದ ಅಖಿಲೇಶ್ ಯಾದವ್!
ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಇವಿಎಂಗಳನ್ನು ಕದ್ದೊಯ್ಯಲಾಗಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಮತ ಎಣಿಕೆಗೆ ಇನ್ನೇನು ಕೆಲವೇ ಗಮಟೆಗಳಿರುವಾಗ ಅಖಿಲೇಶ್ ಈ ಆರೋಪವನ್ನು ಮಾಡಿದ್ದಾರೆ.
“ಮೂರು ಟ್ರಕ್ ಗಳಲ್ಲಿ ಇವಿಎಂಗಳನ್ನು ಹೊತ್ತೊಯ್ಯಲಾಗಿದೆ. ಇವುಗಳಲ್ಲಿ ಒಂದು ಟ್ರಕ್ ಸಮಾಜವಾದಿ ಪಾರ್ಟಿಯ ಕಾರ್ಯಕರ್ತರ ದೃಷ್ಟಿಗೆ ಬಿದ್ದಿದೆ. ಇದರ ವೀಡಿಯೋಗಳು ಲಭ್ಯವಾಗಿವೆ,” ಎಂದು ಅವರು ಪತ್ರಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಚುನಾವಣೋತ್ತರ ಸಮೀಕ್ಷೆಗಳ ವಿರುದ್ದ ಕಿಡಿಕಾರಿರುವ ಯಾದ್ವ, ಈ ಸಮೀಕ್ಷೆಗಳಿಗೆ ಹಣ ನೀಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ದುರ್ಬೀನು ಹಾಕಿ ಸ್ಟ್ರಾಂಗ್ ರೂಂ ಕಾವಲಿಗೆ ನಿಂತ ಅಭ್ಯರ್ಥಿ:
ಮೀರತ್ ಹಸ್ತಿನಾಪುರ ಕ್ಷೇತ್ರದ ಸಮಾಜವಾದಿ ಪಕ್ಷ ಲೋಕದಳ ಅಭ್ಯರ್ಥಿ ಯೋಗೇಶ್ ವರ್ಮಾ ಅವರು ಮತ ಎಣಿಕೆ ಕೇಂದ್ರದ ಹೊರಗೆ ದುರ್ಬೀನು ಹಾಕಿ ಕಾವಲಿಗೆ ನಿಂತಿದ್ದಾರೆ.
“ಪಂಚಾಯತ್ ಚುನಾವಣೆಯ ವೇಳೆ ಆಡಳಿತ ಪಕ್ಷವು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿತ್ತು. ನಮ್ಮ ಹೊರಾಟ ಅದೇ ಆಡಳಿತ ಪಕ್ಷದ ವಿರುದ್ದ. ಜನರ ಮತಗಳನ್ನು ಕಳೆದುಕೊಳ್ಳದಂತೆ ಜಾಗರೂಕರಾಗಿದ್ದೇವೆ,” ಎಂದು ವರ್ಮಾ ಹೇಳಿದ್ದಾರೆ.