ರಾಜ್ಯ ವಿಧಾನಸಭಾ ಚುನಾವಣೆಯ ಕಾವು ರಂಗೇರಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ಕೋಲಾರದಿಂದ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕಾಂಗ್ರೆಸ್ನ ಮೂರನೇ ಪಟ್ಟಿ ರಿಲೀಸ್ ಮಾಡಿದ್ದು ಕೋಲಾರ ಕ್ಷೇತ್ರದ ಟಿಕೆಟ್ ಡಿಕೆಶಿ ಆಪ್ತ ಕೊತ್ತೂರು ಮಂಜುನಾಥ್ರಿಗೆ ಸಿಕ್ಕಿದೆ.
ವರುಣ ಕ್ಷೇತ್ರದಿಂದ ಸಿದ್ದರಾಮಯ್ಯಗೆ ಟಿಕೆಟ್ ಸಿಕ್ಕ ಬಳಿಕ ಅವರನ್ನು ಕೆಳಗುರುಳಿಸಲು ಪ್ಲಾನ್ ಮಾಡಿದ್ದ ಬಿಜೆಪಿ ವರುಣದಲ್ಲಿ ವಿ. ಸೋಮಣ್ಣರನ್ನು ಕಣಕ್ಕಿಳಿಸಿದೆ. ಈ ಮೂಲಕ ಲಿಂಗಾಯತ ಮತಗಳನ್ನು ಸೆಳೆದು ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಪ್ಲಾನ್ ಮಾಡಿದೆ.
ಇಂತಹ ಪರಿಸ್ಥಿತಿಯಲ್ಲಿ ಕೋಲಾರದಲ್ಲಿ ಸ್ಪರ್ಧಿಸಿದರೆ ವರುಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲು ಸಾಧ್ಯವಾಗುವುದಿಲ್ಲ. ಅಲ್ಲದೇ ಸೋಮಣ್ಣ ಎದುರು ಸ್ವಕ್ಷೇತ್ರದಲ್ಲಿ ಸೋತರೆ ಪ್ರತಿಷ್ಠೆ ಹಾಳಾಗುತ್ತದೆ. ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ವರುಣದ ಜನತೆ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ತಮಗೆ ವರುಣ ಕ್ಷೇತ್ರವೊಂದೇ ಸಾಕು ಅಂತಾ ಹೈಕಮಾಂಡ್ ಬಳಿಯಲ್ಲೇ ಸಿದ್ದರಾಮಯ್ಯರೇ ಹೇಳಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.