ಬೆಂಗಳೂರಿನ ಕ್ರೈಸ್ತ ಆಡಳಿತ ಮಂಡಳಿಯ ಶಾಲೆಯೊಂದರಲ್ಲಿ ಬೈಬಲ್ ಹೇರಿಕೆ ಆರೋಪ ಕೇಳಿಬಂದ ಹಿನ್ನೆಲೆ ಸೂಕ್ತ ತನಿಖೆಗೆ ಆದೇಶಿಸಿರುವ ಶಿಕ್ಷಣ ಇಲಾಖೆ ಮತ್ತು ಸಚಿವ ಬಿಸಿ ನಾಗೇಶ್ ಅವರ ನಿಲುವಿಗೆ ಬೇಸರ ವ್ಯಕ್ತಪಡಿಸಿರುವ ಆರ್ಚ್ ಬಿಷಪ್ ಪೀಟರ್ ಮಚಾಡೊ, ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿರುವುದು ನನಗೆ ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ರಿಶ್ಚಿಯನ್ ಶಾಲೆಗಳಲ್ಲಿ ಬೈಬಲ್ ಬಳಸಲಾಗಿದೆಯೇ ಅಥವಾ ಧರ್ಮವನ್ನು ಕಲಿಸಲಾಗಿದೆಯೇ ಎಂಬುದರ ಕುರಿತು ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿರುವುದು ನನಗೆ ತುಂಬಾ ನೋವಾಗುತ್ತಿದೆ. ನಮ್ಮ ಶಾಲೆಯಲ್ಲಿ ಬೇರೆ ಧರ್ಮದ ಯಾವುದೇ ವಿದ್ಯಾರ್ಥಿ ಕ್ರಿಶ್ಚಿಯನ್ ಆಗಿಲ್ಲ ಎಂದು ಧೈರ್ಯದಿಂದ ಹೇಳುತ್ತೇನೆ ಎಂದಿದ್ದಾರೆ.
ಮುಂದುವರೆದು, ಕ್ರಿಶ್ಚಿಯನ್ ಅಲ್ಲದ ವಿದ್ಯಾರ್ಥಿಗಳು ಬೈಬಲ್ ಓದುವ ಅಗತ್ಯವಿಲ್ಲ ಮತ್ತು ಅವರಿಗೆ ಓದುವ ಕುರಿತು ಯಾವುದೇ ಸೂಚನೆಗಳನ್ನು ನೀಡಿಲ್ಲ. ಮುಂದಿನ ವರ್ಷ ಭಗವದ್ಗೀತೆಯನ್ನು ನೈತಿಕ ಶಿಕ್ಷಣ ಪಠ್ಯವಾಗಿ ಪರಿಚಯಿಸಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ, ಆದರೆ ಬೈಬಲ್ ಮತ್ತು ಕುರಾನ್ ಧಾರ್ಮಿಕ ಪಠ್ಯಗಳಾಗಿರುವ ಕಾರಣ ಅವುಗಳನ್ನು ಅನುಮತಿಸಲಾಗುವುದಿಲ್ಲಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.