ಬೆಂಗಳೂರು: ಒಳಮೀಸಲಾತಿ ಜಾರಿ ಮಾಡಲೇ ಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿರುವ ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಮುಖಂಡರು, ಒಳಮೀಸಲಾತಿ ಜಾರಿ ಮಾಡುವವರೆಗೆ ನೇಮಕಾತಿ ಪ್ರಕ್ರಿಯೆಗಳನ್ನು ಮುಂದೂಡುವಂತೆ ಆಗ್ರಹಿಸಿದ್ದಾರೆ.ಶನಿವಾರ ಗೃಹಕಚೇರಿ ಕೃಷ್ಣಾದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ನೇತೃತ್ವದ ನಿಯೋಗವು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸುಮಾರು 2 ಗಂಟೆಗಳ ಸುದೀರ್ಘ ಸಮಾಲೋಚನೆ ನಡೆಸಿತು.
ಸಭೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಶಿವಣ್ಣ, ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಶಾಸಕ ಬಸಂತಪ್ಪ, ಶ್ರೀನಿವಾಸ್, ಮಾಜಿ ಶಾಸಕ ಧರ್ಮಸೇನ, ಡಾ|ತಿಮ್ಮಯ್ಯ ಅವರೂ ವಿಷಯದ ಬೆಳಕು ಚೆಲ್ಲಿದರಲ್ಲದೆ, ಒಳಮೀಸಲಾತಿ ವಿಚಾರದಲ್ಲಿ ರಾಜಕೀಯ ಬದ್ಧತೆ ಮತ್ತು ಇಚ್ಛಾಶಕ್ತಿ ಪ್ರದರ್ಶಿಸಲು ಇದು ಸಕಾಲ ಎಂದೂ ಗಮನ ಸೆಳೆದಿದ್ದಾರೆ.
ನೀತಿ ಸಂಹಿತೆ ಅಡ್ಡಿ ಆಗಲಾರದು.
ಸಚಿವ ಮುನಿಯಪ್ಪ ಹಾಗೂ ತಿಮ್ಮಾಪುರ ಮಾತನಾಡಿ, ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಒಳಮೀಸಲಾತಿ ವಿಚಾರವನ್ನು ಸಂಪುಟ ದಲ್ಲಿ ಮಂಡಿಸಲು ನೀತಿ ಸಂಹಿತೆ ಅಡ್ಡಿಯಾಗಲಾರದು ಎಂದು ಭಾವಿಸಿದ್ದೇವೆ. ಈಗಾಗಲೇ ಸದಾಶಿವ ಆಯೋಗದ ವರದಿ, ಸುಪ್ರೀಂಕೋರ್ಟ್ ಆದೇಶ ನೀಡಿರುವುದರಿಂದ ಇದು ಹಳೆಯ ವಿಚಾರ. ಹೀಗಾಗಿ ಸಂಪುಟದಲ್ಲಿ ಮಂಡಿಸಬಹುದು. ಆದರೂ ಒಮ್ಮೆ ಚುನಾವಣ ಆಯೋಗದೊಂದಿಗೆ ಸಮನ್ವಯ ಸಾಧಿಸುವುದು ಒಳಿತು ಎಂದು ಸಲಹೆ ನೀಡಿದರಲ್ಲದೆ, ತೆಲಂಗಾಣದಲ್ಲೂ ಕಾಂಗ್ರೆಸ್ ಸರಕಾರವೇ ಅಧಿಕಾರ ದಲ್ಲಿದ್ದು, ಅಲ್ಲಿನ ಸರಕಾರ ಎಲ್ಲ ನೇಮಕಾತಿಗಳನ್ನೂ ನಿಲ್ಲಿಸಿದೆ.
2 ತಿಂಗಳಲ್ಲಿ ಒಳಮೀಸಲಾತಿ ಜಾರಿ ಗೊಳಿಸುವುದಾಗಿ ಭರವಸೆ ನೀಡಿದೆಯಲ್ಲದೆ, ಅನಂತರವಷ್ಟೇ ನೇಮಕಾತಿ ಪ್ರಕ್ರಿಯೆ ಮುಂದುವರಿಸುವುದಾಗಿ ಹೇಳಿದೆ. ಹರಿಯಾಣದಲ್ಲಿ ಒಳಮೀಸಲಾತಿ ಜಾರಿಯಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಒಳಮೀಸಲಾತಿ ಜಾರಿಗೊಳಿಸಬೇಕು. ಅಲ್ಲಿಯವರೆಗೆ ನೇಮಕಾತಿ ಪ್ರಕ್ರಿಯೆಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ.