ಬೆಂಗಳೂರು: “ಪ್ರತಿಭಟನೆ ಮಾಡಲು ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ. ಆದರೆ ಬಂದ್ ಮಾಡಲು ಅವಕಾಶವಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.”ನಾಳೆ ಸಾವರ್ಜನಿಕರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ಬಂದ್ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ನೀಡಿವೆ, ಅವನ್ನು ಪಾಲಿಸಬೇಕು. ದಯವಿಟ್ಟು ಕಾನೂನು ಪಾಲಿಸಿ, ಬಂದ್ ಮಾಡದೆ ಪ್ರತಿಭಟನೆ ಮಾಡಿ” ಎಂದು ಜನರಲ್ಲಿ ಅವರು ಮನವಿ ಮಾಡಿದರು.
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಾಳೆ “ನಾಳೆ ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಗೆ ಆನ್‌ಲೈನ್ ಬದಲಿಗೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು. ತಮಿಳುನಾಡಿನವರು 11,000 ಸಾವಿರ ಕ್ಯೂಸೆಕ್ಸ್ ನೀರು ಬೇಡಿಕೆ ಇಟ್ಟಿದ್ದು, ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಈಗ ಸಹಜವಾಗಿ 2,000 ಕ್ಯೂಸೆಕ್ಸ್ ನೀರು ಹೋಗುತ್ತಿರಬಹುದು” ಎಂದು ತಿಳಿಸಿದರು.
ಹಿರಿಯ ಕೃಷಿ ತಜ್ಞರು, ನೀರಾವರಿ ತಂತ್ರಜ್ಞರ ಸಭೆ ಕರೆದಿದ್ದು ಅಲ್ಲಿ ಚರ್ಚೆ ಮಾಡಲಾಗುವುದು. ಯಾರು ಭಾಗವಹಿಸುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಹೇಳಿದರು. ನಾಳಿನ ಬೆಳವಣಿಗೆ ನೋಡಿಕೊಂಡು ನ್ಯಾಯಾಲಯಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ, “ಈಗಾಗಲೇ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ತಾಂತ್ರಿಕ ಸಮಿತಿಯವರು 3,000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಶಿಫಾರಸ್ಸು ಮಾಡಿದ್ದಾರೆ. ನಾಳೆ ಪ್ರಾಧಿಕಾರದವರು ಏನು ಸೂಚನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು” ಎಂದು ತಿಳಿಸಿದರು.