ಮೈಸೂರು: ಕೆಎಂಎಫ್ ಕರ್ನಾಟಕದ ರೈತರ ಜೀವನಾಡಿಯಾಗಿದ್ದು, ಯಾವುದೇ ಕಾರಣಕ್ಕೂ ಕೆಎಂಎಫ್ ಹಾಗೂ ಅಮೂಲ್ ವಿಲೀನ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಮೂಲ್ ಹಾಗೂ ಕೆಎಂಎಫ್ ವಿಲೀನ ಇಲ್ಲ. ಈ ಬಗ್ಗೆ ಈಗಾಗಲೇ ನಾನೂ ಸೇರಿದಂತೆ ಮುಖ್ಯಮಂತ್ರಿಗಳು, ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕೆಎಂಎಫ್ ಕರ್ನಾಟಕದ ರೈತರ ಜೀವನಾಡಿಯಾಗಿದ್ದು, ಕೋಟ್ಯಾಂತರ ರೂ. ವಹಿವಾಟು ನಡೆಯುತ್ತಿದೆ. ನಂದಿನಿ ನಮ್ಮ ರಾಜ್ಯದ ಪ್ರಾಡೆಕ್ಟ್ ಆಗಿದ್ದು, ವಿಶ್ವದ ಹಲವು ಕಡೆಗಳಿಗೆ ವಹಿವಾಟು ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೆ ಅಮೂಲ್ ಜೊತೆಗೆ ಕೆಎಂಎಫ್ ವಿಲೀನ ಮಾಡುವುದಿಲ್ಲ. ಆದರೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಇದನ್ನ ರಾಜಕೀಯವಾಗಿ ಬಳಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಬೊಮ್ಮಾಯಿ ಅವರ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ ಮತ್ತು ಇದು ಅವರಿಗೆ ಶೋಭೆ ತರುವಂತದ್ದಲ್ಲ. ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗಿಂತ ಚಿಕ್ಕವರ, ದೊಡ್ಡವರ? ಎಂದು ಪ್ರಶ್ನಿಸಿದ ಸೋಮಶೇಖರ್, ರಾಹುಲ್ ಗಾಂಧಿ ಬಂದಾಗ ಸಿದ್ದರಾಮಯ್ಯ ಹೇಗೆ ವರ್ತಿಸುತ್ತಾರೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಕಿಡಿಕಾರಿದ ಅವರು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರ? ಯಾರೇ ಬಂದರೂ ಬಿಜೆಪಿ 150 ಸೀಟ್ ಗುರಿ ತಲುಪಲು ಪ್ಲ್ಯಾನ್ ಮಾಡುತ್ತಿದ್ದೇವೆ. ಬಿಎಸ್ ಯಡಿಯೂರಪ್ಪ ಈಗಾಗಲೇ ಭದ್ರ ಬುನಾದಿ ಹಾಕಿದ್ದು, ಬೊಮ್ಮಾಯಿ ಸಹ ಅಭಿವೃದ್ಧಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಕನಸು ಕಾಣುತ್ತಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಅಲ್ಲದೇ ಅಮಿತ್ ಶಾ ಅವರು ಮೈಸೂರು, ಕೋಲಾರ, ಚಾಮರಾಜನಗರ, ಮಂಡ್ಯ, ಹಾಸನ ಭಾಗದ ಪ್ರಮುಖರು ಮತ್ತು ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದು, ಪಕ್ಷ ಸಂಘಟನೆ ಬಗ್ಗೆ ಸಭೆಯಲ್ಲಿ ತಿಳಿಸಿದ್ದಾರೆ. ಅದರಂತೆ ಬೂತ್ ಅಭಿಯಾನ ಆರಂಭವಾಗಿದ್ದು, ಜನವರಿ 12ರ ನಂತರ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಯಡಿಯೂರಪ್ಪ ಹಾಗೂ ಜನಾರ್ಧನ ರೆಡ್ಡಿ ನಡುವಿನ ಹೋಲಿಕೆ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮ ನಾಯಕರು, ಅವರನ್ನ ರೆಡ್ಡಿ ಜೊತೆಗೆ ಏಕೆ ಹೋಲಿಕೆ ಮಾಡುತ್ತೀರಾ? ಬಿಎಸ್‌ವೈ ನಮ್ಮ ಅಗ್ರಗಣ್ಯ ನಾಯಕರು, ಅವರನ್ನ ಜನಾರ್ಧನ ರೆಡ್ಡಿ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ರೆಡ್ಡಿ ಅವರ ಕೊಡುಗೆ ಕರ್ನಾಟಕಕ್ಕೆ ಏನಿದೆ? ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಅವರೊಂದಿಗೆ ರೆಡ್ಡಿ ಅವರನ್ನ ಹೋಲಿಕೆ ಮಾಡುವುದು ಸರಿಯಿಲ್ಲ. ಇನ್ನೂ ವಿಜಯೇಂದ್ರ ಅವರನ್ನ ಯಾರು ಕಡೆಗಣಿಸುತ್ತಿಲ್ಲ. ಅವರು ಬಿಜೆಪಿ ಉಪಾಧ್ಯಕ್ಷರಾಗಿದ್ದು, ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.