ಆಡಳಿತರೂಢ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಶಿವಸೇನಾ ಸಂಸದ ಸಂಜಯ್ ರಾವುತ್ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರಸ್ತುತ ಅಧಿಕಾರದಲ್ಲಿರುವ ಏಕಪಕ್ಷೀಯ ಸರ್ಕಾರದ ಆಳ್ವಿಕೆಗೆ ಅಂತ್ಯ ಹಾಡಲಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಂಜಯ್ ರಾವತ್, ʻಕಾಂಗ್ರೆಸ್ ಇಲ್ಲದೆ ದೇಶದಲ್ಲಿ ಸರ್ಕಾರ ರಚನೆಯಾಗುವುದಿಲ್ಲ ದೇಶದಲ್ಲಿ ಆಳವಾಗಿ ಬೇರೂರಿವ ಪಕ್ಷವೆಂದರೆ ಅದು ಕಾಂಗ್ರೆಸ್. ದೇಶದಲ್ಲಿ ಪ್ರಮುಖ ವಿರೋಧ ಪಕ್ಷವೆಂದರೆ ಅದು ಕೂಡ ಕಾಂಗ್ರೆಸ್ʼ ಎಂದು ಹೇಳಿದ್ದಾರೆ.
ಬಿಜೆಪಿ ಹಲವು ದಶಕಗಳ ಕಾಲ ಅಧಿಕಾರದಲ್ಲಿ ಉಳಿಯಲಿದೆ ಎಂಬ ಪ್ರಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾವುತ್. ಬಿಜೆಪಿ ಭಾರತೀಯ ರಾಜಕೀಯದಲ್ಲಿ ಆಡಳಿತ ಪಕ್ಷವಾಗಲ್ಲ, ವಿರೋಧ ಪಕ್ಷವಾಗಿ ಉಳಿಯಲಿದೆ ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿ ತನ್ನನ್ನು ತಾನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತದೆ.
ವಿಶ್ವದ ಅತಿ ದೊಡ್ಡ ಪಕ್ಷ ಚುನಾವಣೆಯಲ್ಲಿ ಸೋತರೆ ಅದು ವಿರೋಧ ಪಕ್ಷದಲ್ಲಿ ಕೂರುತ್ತದೆ ಎಂದು ಹೇಳಿದ್ದಾರೆ. ಉದಾಹರಣೆಗೆ ಮಹಾರಷ್ಟ್ರದಲ್ಲಿ ಬಿಜೆಪಿ ಹೊಂದಿರುವ ಅತಿ ದೊಡ್ಡ ವಿರೋಧ ಪಕ್ಷವಾಗಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿಯ ಬಹುಕಾಲದ ಮಿತ್ರ ಪಕ್ಷ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಮಹಾರಾಷ್ಟ್ರದಲ್ಲಿ ʻಮಹಾ ವಿಕಾಸ್ ಅಘಾಡಿʼ ಎಂಬ ಮೈತ್ರಿಕೂಟದಡಿ ಅಧಿಕಾರ ನಡೆಸುತ್ತಿದೆ. ಪ್ರಸ್ತುತ ನಾವು ದಾದ್ರಾ-ನಾಗರ್ ಹವೇಲಿ ಮತ್ತು ಗೋವಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದೇವೆ. ಉತ್ತರ ಪ್ರದೇಶ ಚುನಾವಣೆಗೆ ಇನ್ನು ಸಮಯವಿದೆ ನಾವು ಯುಪಿಯಲ್ಲಿ ಸಣ್ಣ ಆಟಗಾರರಷ್ಟೇ ಆದರೆ ನಾವು ಅಲ್ಲಿಯೂ ಸಹ ಸ್ಪರ್ಧಿಸುತ್ತೇವೆ ಎಂದು ರಾವತ್ ಹೇಳಿದ್ದಾರೆ.
ಮಾತನಾಡುವ ವೇಳೆ ರಾವತ್ ಮಾಧ್ಯಮಗಳು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಒತ್ತಿ ಒತ್ತಿ ಹೇಳಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೋನಾ ಕಾರಣದಿಂದ ಸಂಸತ್ತಿನ ಸೆಂಟ್ರಲ್ ಹಾಲ್ಗೆ ಮಾಧ್ಯಮ ಮಿತ್ರರಿಗೆ ಪ್ರವೇಶ ನೀಡುತ್ತಿಲ್ಲ. ಆದರೆ, ಅದರ ಹಿಂದಿನ ನಿಜವಾದ ಕಾರಣವೇನೆಂದರೆ ವರದಿಗಾರರನ್ನು ಸಂಸತ್ತಿನ ಒಳಗೆ ಬರಲು ಅವಕಾಶ ಕೊಟ್ಟರೆ ಅನೇಕ ವಿಷಯಗಳು ಹೊರಬರಬಹುದು ಎಂಬ ಭಯ ಆಡಳಿತ ಪಕ್ಷದವರನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.
ಮುದ್ರಣ ಮಾಧ್ಯಮ ಮತ್ತು ಎಲೆಟ್ರಾನಿಕ್ ಮಾಧ್ಯಮಗಳು ಎದುರಿಸುತ್ತಿರುವ ವಿವಿಧ ಸಾವಲುಗಳನ್ನು ಒತ್ತಿ ಹೇಳಿದ ರಾವತ್. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಶವಗಳು ತೇಲುತ್ತಿರುವ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿತ್ತು. ಆದಾಯ ತೆರಿಗೆ ಇಲಾಖೆ ಆ ಪತ್ರಿಕೆಯ ಕಚೇರಿ ಮೇಲೆ ದಾಳಿ ನಡೆಸಿತ್ತು ಕೇಂದ್ರ ಸರ್ಕಾರವು ಯಾವಾಗಲೂ ತನ್ನ ಪರವಾಗಿರುವ ಅನುಕೂಲಕರ ವರದಿಯನ್ನು ಬಯಸುತ್ತದೆ ಎಂದು ರಾವತ್ ಕೇಂದ್ರ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.
ಇಂದಿನ ದಿವಸ ಟಾಪ್ ಟೆನ್ ಉದ್ಯಮಗಳು ಮಾಧ್ಯಮವನ್ನು ಖರೀದಿಸಿವೆ. ಈ ಮೂಲಕ ಸರ್ಕಾರ ಮಾಧ್ಯಮದವರನ್ನು ಉದ್ಯಮಗಳ ಮೂಲಕ ನಿಯಂತ್ರಿಸಬಹುದು ಎಂದು ರಾವತ್ ಆರೋಪಿಸಿದ್ದಾರೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಪರವಾನಗಿ ಬಯಸುವ ಉದ್ಯಮಿಗಳು ಮಾಧ್ಯಮ ಸಂಸ್ಥೆಗಳಲ್ಲಿ ಮುದಲು ಹೂಡಿಕೆ ಮಾಡಿದ ನಂತರ ಅವರಿಗೆ ಪರವಾನಗಿಗಳನ್ನು ಕೊಡಲಾಗುತ್ತದೆ. ಇದರ ಹಿಂದೆ ಸರ್ಕಾರದ ಕೈವಾಡವಿದೆ ಎಂದು ಶಿವಸೇನೆ ಸಂಸದ(ರಾಜ್ಯಸಭೆ) ಸಂಜಯ್ ರಾವತ್ ಕೇಂದ್ರ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.