ನವದೆಹಲಿ: ಹಿಂದುಳಿದ ಸಮುದಾಯಗಳಲ್ಲಿ ಬಡತನದ ಅಂಚಿನಲ್ಲಿರುವವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಗಳಲ್ಲಿ ಒಳ ಮೀಸಲಾತಿಗೆ (Caste Sub-Classification) ಅನುಮತಿ ನೀಡುವ ತನ್ನ ಆಗಸ್ಟ್ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ 10 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅರ್ಜಿಗಳನ್ನು ಪರಿಶೀಲಿಸಿದ ನಂತರ, ಹಿಂದಿನ ತೀರ್ಪಿನಲ್ಲಿ ಯಾವುದೇ ದೋಷ ಕಂಡಿಲ್ಲ. ಆದ್ದರಿಂದ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಕೋರ್ಟ್ ತೀರ್ಪು ನೀಡಿದೆ. ಅದೇ ರೀತಿ ಓಪನ್ ಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದ ಪರಿಶೀಲನಾ ಅರ್ಜಿಗಳನ್ನು ಸಹ ವಜಾಗೊಳಿಸಲಾಗಿದೆ.
ಆಗಸ್ಟ್ 1 ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು “ಸರ್ಕಾರರದ ಸಾಮಾಜಿಕ ಕಲ್ಯಾಣ ಯೋಜನೆಗಳು ಹೆಚ್ಚೆಚ್ಚು ಹಿಂದುಳಿದ ವರ್ಗಗಳಿಗೆ ತಲುಪುವುದಕ್ಕಾಗಿ ಒಳ ಮೀಸಲಾಗಿತಿ ಒದಗಿಸಲು ರಾಜ್ಯಗಳಿಗೆ ಅವಕಾಶ ನೀಡುವ ತೀರ್ಪು ನೀಡಿತ್ತು. ಏಳು ನ್ಯಾಯಧೀಶರ ಪೈಕಿ ಆರು ನ್ಯಾಯಾಧೀಶರು ಒಳಮೀಸಲು ಪರವಾಗಿ ತೀರ್ಪು ನೀಡಿದ್ದರು.
ಇದೇ ವೇಳೆ 2004ರಲ್ಲಿ ಇ.ವಿ.ಚಿನ್ನಯ್ಯ ವರ್ಸಸ್ ಸ್ಟೇಟ್ ಆಫ್ ಆಂಧ್ರಪ್ರದೇಶ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠ ನೀಡಿದ್ದ ತೀರ್ಪನ್ನು ನ್ಯಾಯಪೀಠ ರದ್ದುಗೊಳಿಸಿತ್ತು. ಒಂದು ಜಾತಿಯೊಳಗೆ ಎಲ್ಲರಿಗಿಂತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಉನ್ನತಿಗಾಗಿ ಒಳ ಮೀಸಲಾತಿ ನೀಡಲು ರಾಜ್ಯಗಳಿಗೆ ಸಾಂವಿಧಾನಿಕವಾಗಿ ಅಧಿಕಾರವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಾರತಮ್ಯದಿಂದಾಗಿ ಎಸ್ಸಿ / ಎಸ್ಟಿ ವರ್ಗಗಳ ಸದಸ್ಯರು ಹೆಚ್ಚಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಸಂವಿಧಾನದ 14 ವಿಧಿಯಡಿ ಜಾತಿಯ ಉಪ ವರ್ಗೀಕರಣವನ್ನು ಅನುಮತಿಸುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದರು. ಪರಿಶಿಷ್ಟ ಜಾತಿಗಳು ಸಾಮಾಜಿಕವಾಗಿ ವೈವಿಧ್ಯಮಯವಾಗಿವೆ ಎಂದು ಪ್ರಾಯೋಗಿಕ ಪುರಾವೆಗಳು ಇವೆ ಎಂದು ಹೇಳಲಾಗಿತ್ತು.
ಪ್ರಾತಿನಿಧ್ಯದ ಅಸಮರ್ಪಕತೆ ಇದೆ ಎಂದು ತೋರಿಸಲು ಯಾವುದೇ ಉಪ-ವರ್ಗೀಕರಣವನ್ನು ಪ್ರಾಯೋಗಿಕ ಅಂಕಿ ಅಂಶಗಳ ಆಧಾರದ ಮೇಲೆ ನಿರ್ಧರಿಸಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. ಅದಲ್ಲಿ ನಾಲ್ವರು ನ್ಯಾಯಾಧೀಶರು ಪರಿಶಿಷ್ಟ ಜಾತಿಗಳೊಳಗಿನ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹೆಚ್ಚು ಮುಂದುವರಿದವರು ಎಂದು ಪರಿಗಣಿಸಲ್ಪಟ್ಟವರಿಗೆ ನೀಡಲಾಗುವ ‘ಕೆನೆಪದರ’ ಎಂಬ ಪದವನ್ನು ಪರಿಗಣಿಸಿ ಕೋಟಾಗಳನ್ನು ನಿರಾಕರಿಸಬೇಕು ಎಂದು ಹೇಳಿದ್ದರು.
ಮುಂದಿನ ವರ್ಷ ಭಾರತದ ಮೊದಲ ದಲಿತ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ‘ಕೆನೆಪದರ’ವನ್ನು ಗುರುತಿಸಲು ನೀತಿಯನ್ನು ರೂಪಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಒಬ್ಬ ವ್ಯಕ್ತಿಯು ಒಂದು ಪ್ರದೇಶಕ್ಕೆ ಪ್ರವೇಶಿಸಿದಾಗ, ಇತರರು ಅಲ್ಲಿಗೆ ಪ್ರವೇಶಿಸದಂತೆ ತಡೆಯಲು ಎಲ್ಲಾ ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ ಸಾಮಾಜಿಕ ನ್ಯಾಯದ ಕಾರಣದಿಂದಾಗಿ ಮಾತ್ರ ಅವರು ಪ್ರಯೋಜನ ಪಡೆದಿದ್ದಾರೆ, ಸಾಕಷ್ಟು ಪ್ರಾತಿನಿಧ್ಯವಿಲ್ಲದವರಿಗೆ ಆ ಪ್ರಯೋಜನ ನೀಡಲು ರಾಜ್ಯವು ನಿರ್ಧರಿಸಿದಾಗ, ಅದನ್ನು ನಿರಾಕರಿಸಬಾರದು ” ಎಂದು ಅವರು ಹೇಳಿದ್ದಾರೆ.
ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ಕೆನೆಪದರ ಕುರಿತು ನ್ಯಾಯಮೂರ್ತಿ ಗವಾಯಿ ಅವರ ನಿಲುವನ್ನು ಒಪ್ಪಿಕೊಂಡಿದ್ದಾರೆ.