ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಅಧಿನಿಯಮಗಳ ಪ್ರಕಾರ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಾರ ಮಾಡಲು ಹಿಂದೂಯೇತರರಿಗೆ ಅವಕಾಶವಿಲ್ಲ ಎಂಬ ಅಧಿನಿಯಮವಿದೆ ಎಂದು ಕರ್ನಾಟಕ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಬುಧವಾರ ಮಾರ್ಚ್ 23 ರಂದು ವಿಧಾನಸಭೆಗೆ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕ ಯು.ಟಿ ಖಾದರ್ ಮತ್ತು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಕರಾವಳಿ ಕರ್ನಾಟಕದ ದೇವಸ್ಥಾನಗಳ ಸುತ್ತ ಹಿಂದೂಯೇತರ ವ್ಯಾಪಾರಿಗಳು ವ್ಯಾಪಾರ ಮಾಡುವುದನ್ನು ಏಕೆ ತಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದಕ್ಕೆ ಉತ್ತರಿಸಿ ಕೇಳಿದ ಪ್ರಶ್ನೆಗೆ ಮಾಧುಸ್ವಾಮಿ ಅವರು ಈ ಮೇಲಿನ ಮಾತನ್ನು ಹೇಳುವ ಮೂಲಕ ಉತ್ತರಿಸಿದ್ದಾರೆ.
ಇದಲ್ಲದೆ, ಮುಂಬರುವ ಜಾತ್ರೆಗಳಲ್ಲಿ (ದೇವಸ್ಥಾನಗಳ ಉತ್ಸವಗಳಲ್ಲಿ) ಮುಸ್ಲಿಂ ವ್ಯಾಪಾರಿಗಳಿಗೆ ಸ್ಟಾಲ್ಗಳನ್ನು ಹಾಕುವಂತಿಲ್ಲ ಎಂದು ಪೋಸ್ಟರ್ಗಳನ್ನು ಹಾಕಲಾಗುತ್ತಿರುವುದನ್ನು ಕಂಡ ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
2002 ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆಯಡಿ ರೂಪಿಸಲಾದ ನಿಯಮ 12 ರ ಪ್ರಕಾರ, ಹಿಂದೂಯೇತರರಿಗೆ ಸರ್ಕಾರಿ ಸ್ವಾಮ್ಯದ ದೇವಾಲಯಗಳಿಗೆ ಸೇರಿದ ನೆಲ, ಕಟ್ಟಡ ಅಥವಾ ಇತರ ಯಾವುದೇ ಆಸ್ತಿಯನ್ನು ಗುತ್ತಿಗೆ ನೀಡಲಾಗುವುದಿಲ್ಲಎಂದು ಮಾಧುಸ್ವಾಮಿ ಅವರನ್ನು ಉಲ್ಲೇಖಿಸಿ ಹೇಳಿದ್ಧಾರೆ.
“ಅವರು ಕಳ್ಳತನ ಮಾಡುತ್ತಿಲ್ಲ ಅಥವಾ ಡಕಾಯಿತಿಯಲ್ಲಿ ತೊಡಗಿಲ್ಲ. ಗೌರವಯುತ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ, ರಾಜ್ಯದಾದ್ಯಂತ ವಿವಿಧೆಡೆ ಹಿಂದೂಯೇತರಿಗೆ ವ್ಯಾಪಾರ ಮಾಡಲು ಅನುಮತಿಸುವುದಿಲ್ಲ ಎಂದು ಬ್ಯಾನರ್ಗಳು ಮತ್ತು ಪೋಸ್ಟರ್ಗಳನ್ನು ಹಾಕಲಾಗಿದೆ,” ಧರ್ಮದ ಆಧಾರದ ಮೇಲೆ ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಖಾದರ್ ಒತ್ತಾಯಿಸಿದ್ದರು.

ರಿಜ್ವಾನ್ ಅರ್ಷದ್ ಮಾತನಾಡಿ, ‘ಒಂದು ಸಮುದಾಯದ ವ್ಯಾಪಾರಿಗಳು ವಹಿವಾಟು ನಡೆಸದಂತೆ ತಡೆಯುವುದು ಆ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಅಪಾಯಕಾರಿ. ಕಾಪು ಮಾರಿಗುಡಿ, ಬಪ್ಪನಾಡು ದೇವಸ್ಥಾನಗಳ ನಿರ್ಮಾಣದಲ್ಲಿ ಮುಸ್ಲಿಮರೂ ಪಾಲ್ಗೊಂಡಿದ್ದಾರೆ. ಇತಿಹಾಸ ಅಳಿಸಲು ಯಾರಿಗೂ ಸಾಧ್ಯವಿಲ್ಲ. ಸಾಮರಸ್ಯ ಹಾಳು ಮಾಡುವವರು ಸಮಾಜ ದ್ರೋ ಹಿಗಳು’ ಎಂದರು.
ಮುಂದುವರೆದು,“ಜಾತ್ರೆ ಸಮಯದಲ್ಲಿ, ಬಹಳಷ್ಟು ಅಂಗಡಿಗಳನ್ನು ಹಿಂದೂಯೇತರರಿಗೆ ವ್ಯಾಪಾರಕ್ಕಾಗಿ ಉಪ-ಗುತ್ತಿಗೆಗೆ ನೀಡಲಾಗುತ್ತದೆ. ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳ ಆಡಳಿತ ಮಂಡಳಿಗಳಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದ ಗುತ್ತಿಗೆದಾರರು ಸ್ವಲ್ಪ ಹಣವನ್ನು ಗಳಿಸಲು ಹೀಗೆ ಮಾಡುತ್ತಿದ್ದರು. ಇವು ವ್ಯಾಪಾರ ವಹಿವಾಟುಗಳು ಮತ್ತು ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಿಧಾನಸಭೆಯ ಅಧಿವೇಶನದ ನಂತರ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನಾಯಕ ಶರಣ್ ಪಂಪ್ವೆಲ್ ಅವರು ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿಗಳನ್ನು ತೆರೆಯದಂತೆ ತಡೆಯುವ ನಿರ್ಧಾರವನ್ನು ಮುಸ್ಲಿಂ ಸಮುದಾಯದ ಸದಸ್ಯರು ಕರೆ ನೀಡಿರುವ ‘ಬಂದ್’ ನಿಂದ ಪ್ರೇರೇಪಿಸಲಾಗಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ಗಳ ಮೇಲಿನ ನಿಷೇಧವನ್ನು ಎತ್ತಿಹಿಡಿಯುವ ಕರ್ನಾಟಕ ಹೈಕೋರ್ಟ್ನ ತೀರ್ಪಿಗೆ ಪ್ರತಿಕ್ರಿಯೆಯಾಗಿ ಬಂದ್ ಕರೆ ಕೊಟ್ಟಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಈ ಕಾನೂನು ಜಾರಿ
ದೇವಸ್ಥಾನದ ಆವರಣದ ಹೊರಗೆ ವ್ಯಾಪಾರ ಮಾಡದಂತೆ ಮುಸ್ಲಿಂ ವ್ಯಾಪಾರಿಗಳಿಗೆ ಅಡ್ಡಿಪಡಿಸಿದ ಕುರಿತು ಮಾತನಾಡಿದ ಅವರು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆಯಡಿ ಹಿಂದೂಯೇತರ ಮಾರಾಟಗಾರರು ದೇವಸ್ಥಾನಗಳ ಆವರಣ ಅಥವಾ ಆಸ್ತಿಗಳಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂಬ ಕಾನೂನುನನ್ನು ಕಾಂಗ್ರೆಸ್ ಸರ್ಕಾರವೇ ತಂದಿದ್ದು, ಈ ಕುರಿತು ಕಾನೂನು ಜಾರಿಗಿಳಿಸಲಾಗಿದೆ ಎಂದು ಹೇಳಿದ್ಧಾರೆ.
ಕಾಯಿದೆಯ ಸೆಕ್ಷನ್ 31 (12) ಪ್ರಕಾರ, “ದೇವಸ್ಥಾನ/ಸಂಸ್ಥೆಗಳ ಸಮೀಪವಿರುವ ಜಮೀನು, ಕಟ್ಟಡ, ನಿವೇಶನ ಮತ್ತು ದೇವಸ್ಥಾನ/ಸಂಸ್ಥೆಗಳ ಯಾವುದೇ ಆಸ್ತಿಯನ್ನು ಹಿದೂಯೇತರರಿಗೆ ಗುತ್ತಿಗೆಗೆ ನೀಡಬಾರದು.” ಎಂದು ಉಲ್ಲೇಖಿಸಲಾಗಿದೆ.

ಕರ್ನಾಟಕದ ದೇವಾಲಯಗಳು ಮಾರ್ಚ್ ಮತ್ತು ಮೇ ನಡುವೆ ಹೆಚ್ಚೆಚ್ಚು ಜಾತ್ರೆಗಳು ನಡೆಸುತ್ತವೆ. ಟೆಲಿಗ್ರಾಫ್ನ ವರದಿಯ ಪ್ರಕಾರ, ಹಿಂದುತ್ವ ಸಂಘಟನೆಗಳು ದೇವಸ್ಥಾನದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಮುಸ್ಲಿಂ ವ್ಯಾಪಾರಿಗಳಿಗೆ ಈ ಸಮಾರಂಭಗಳಲ್ಲಿ ಸ್ಟಾಲ್ಗಳಿಗೆ ಬಿಡ್ ಮಾಡಲು ಅವಕಾಶ ನೀಡದಂತೆ ಒತ್ತಡ ಹೇರುತ್ತಿವೆ. ಉದಾಹರಣೆಗೆ, ಏಪ್ರಿಲ್ 20 ರಂದು ದಕ್ಷಿಣ ಕನ್ನಡದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವದ ಆಯೋಜಕರು ಯಾವುದೇ ರೀತಿಯ ಸ್ಟಾಲ್ಗೆ ಹರಾಜು ಹಾಕಲು ಮುಸ್ಲಿಮರಿಗೆ ಅವಕಾಶ ನೀಡಿಲ್ಲ.
ಅದೇ ರೀತಿ, ಮಾರ್ಚ್ 23 ರಂದು ಕೊನೆಗೊಂಡ ಉಡುಪಿಯ ಹೊಸ ಮಾರಿಗುಡಿ ದೇಗುಲದಲ್ಲಿ ಅಥವಾ ಮಾರ್ಚ್ 22 ರಂದು ಪ್ರಾರಂಭವಾದ ಶಿವಮೊಗ್ಗದ ಕೋಟೆ ಮಾರಿಕಾಂಬಾ ದೇವಸ್ಥಾನದಲ್ಲಿ ಮಾರ್ಚ್ 22 ರಿಂದ ಐದು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಯಾವುದೇ ಮುಸ್ಲಿಮರು ಮಳಿಗೆಗಳನ್ನು ಬಿಡ್ ಮಾಡಲು ಅನುಮತಿಸಲಿಲ್ಲ ಎಂದು ದಿ ವಯೃ ವರದಿ ಮಾಡಿದೆ.
ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂ ಧ ಹೇರಲಾಗಿತ್ತು. ನಂತರ ಉಡುಪಿಯ ವಿವಿಧ ದೇವಸ್ಥಾನಗಳು, ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ, ಶಿವಮೊಗ್ಗ ಮಾರಿ ಜಾತ್ರೆ, ಶಿರಸಿ ಮಾರಿಕಾಂಬಾ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳು ಪಾಲ್ಗೊಳ್ಳಬಾರದು ಎಂಬ ಬ್ಯಾನರ್ ಹಾಕಲಾಗಿತ್ತು. ಕೆಲವೆಡೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗಳಿಂದಲೇ ಆದೇಶ ಹೊರಡಿಸಲಾಗಿತ್ತು.