ಮಂಗಳೂರು: ನಿಟ್ಟೆ(Nitte )ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ–ಹಾಸ್ಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಖ್ಯಾತ ಶಿಕ್ಷಣ ತಜ್ಞ ಎನ್.ವಿನಯ್ ಹೆಗ್ಡೆ(Vinay Hegde) (86) ವಿಧಿವಶರಾಗಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಮೂಲದವರಾದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಎನ್.ವಿನಯ್ ಹೆಗ್ಡೆ ಅವರು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಅವರ ದ್ವಿತೀಯ ಪುತ್ರರಾಗಿದ್ದು, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಸಹೋದರರಾಗಿದ್ದಾರೆ. ಸಮಾಜಸೇವೆ, ನ್ಯಾಯಾಂಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಕುಟುಂಬದ ಹಿನ್ನೆಲೆಯೊಂದಿಗೆ ಅವರು ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದರು.

ಗ್ರಾಮೀಣ ಹಿನ್ನೆಲೆಯ ನಿಟ್ಟೆ ಪ್ರದೇಶವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಿದ ಪ್ರಮುಖ ಶಿಲ್ಪಿ ವಿನಯ್ ಹೆಗ್ಡೆ ಆಗಿದ್ದಾರೆ. ನಿಟ್ಟೆ ಇಂಜಿನಿಯರಿಂಗ್ ಕಾಲೇಜು, ನಿಟ್ಟೆ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು, ಫಾರ್ಮಸಿ ಮತ್ತು ನರ್ಸಿಂಗ್ ಕಾಲೇಜುಗಳು ಸೇರಿದಂತೆ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಅವರು ಮುನ್ನಡೆಸಿದರು. ಇಂದು ನಿಟ್ಟೆ ಸಮೂಹದ ಅಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ದೇಶ–ವಿದೇಶಗಳಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಿಕ್ಷಣದ ಜೊತೆಗೆ ಆರೋಗ್ಯ ಕ್ಷೇತ್ರದಲ್ಲೂ ಕ್ರಾಂತಿಕಾರಿ ಬದಲಾವಣೆ ತಂದ ಅವರು, ಕೆ.ಎಸ್. ಹೆಗ್ಡೆ ಆಸ್ಪತ್ರೆಯನ್ನು ಆಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಜನಸಾಮಾನ್ಯರಿಗೆ ಕೈಗೆಟುಕುವ ಚಿಕಿತ್ಸೆಯನ್ನು ಒದಗಿಸುವ ಕೇಂದ್ರವಾಗಿ ರೂಪಿಸಿದರು. ಗುಣಮಟ್ಟದ ಚಿಕಿತ್ಸೆ, ಮಾನವೀಯತೆ ಮತ್ತು ಸೇವಾಭಾವನೆ ಅವರ ಆಡಳಿತದ ಮೂಲ ತತ್ವಗಳಾಗಿದ್ದವು. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ, ಸಂಶೋಧನೆಗೆ ಉತ್ತೇಜನ ಎಂಬ ನಿಲುವುಗಳಿಂದ ಅವರು ಅನೇಕ ಯುವಕರ ಬದುಕಿಗೆ ದಿಕ್ಕು ನೀಡಿದರು. ಅವರ ದೂರದೃಷ್ಟಿ, ಶಿಸ್ತುಬದ್ಧ ಆಡಳಿತ ಹಾಗೂ ಸಮಾಜಮುಖಿ ಚಿಂತನೆ ನಿಟ್ಟೆ ಶಿಕ್ಷಣ ಸಂಸ್ಥೆಗಳಿಗೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟಿದೆ.






