ಹರಿಯಾಣದ ಸೋನೆಪತ್ನ ಹಲಾಲ್ಪುರದಲ್ಲಿರುವ ಸುಶೀಲ್ ಕುಮಾರ್ ವ್ರೆಸ್ಲಿಂಗ್ ಅಕಾಡೆಮಿಯಲ್ಲಿ ರಾಷ್ಟ್ರೀಯ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಮತ್ತು ಅವರ ಸಹೋದರನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಮತ್ತು ನಿಶಾರವರ ತಾಯಿಯ ಮೇಲೂ ಗುಂಡು ಹಾರಿಸಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿವೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿಶಾ ದಹಿಯಾ ತಮ್ಮ ಬಗ್ಗೆ ಹರಿದಾಡುತ್ತಿರುವ ಮಾಹಿತಿ ಶುದ್ದ ಸುಳ್ಳು ತಾವು ಜೀವಂತವಿರುವುದಾಗಿ ಹೇಳಿಕೆ ನೀಡಿದ್ದಾರೆ ಮತ್ತು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚಿಗೆ ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆದ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಗೆದ್ದ ಭಾರತೀಯರಲ್ಲಿ ದಹಿಯಾ ಕೂಡ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ನಿಶಾಗೆ ಶುಭ ಕೋರಿದ್ದರು.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಸುಳ್ಳು ಸುದ್ದಿ ಹಬ್ಬಿಸಿದವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಇದುವರೆಗೆ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.